ಹುಳಿಯಾರು :ಪಟ್ಟಣದ ವಿವಿಧ ದೇವಾಲಯಗಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಾದ ಸೀಗೆಬಾಗಿ,ಹೊಸಹಳ್ಳಿ, ಕೆಂಕೆರೆ, ತಿರುಮಲಾಪುರ,ದಸೂಡಿ,ನಂದಿಹಳ್ಳಿ ಗ್ರಾಮಗಳ ದೇವಾಲಯಗಳಲ್ಲಿ ಶುಕ್ರವಾರದಂದು ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.ಎಲ್ಲಾ ದೇವಾಲಯಗಳಲ್ಲೂ ಪೂಜಾ ಕೈಂಕರ್ಯಗಳನ್ನು ನಡೆಸಿ ಭಕ್ತಾಧಿಗಳಿಗೆ ಪಾನಕ,ಮಜ್ಜಿಗೆ ,ಕೋಸಂಬರಿ ವಿತರಿಸಲಾಯಿತು.
ಪಟ್ಟಣದ ಅಂಜನೇಯಸ್ವಾಮಿ ಸನ್ನಿಧಿ, ಅನಂತಶಯನ ರಂಗನಾಥಸ್ವಾಮಿ ಸನ್ನಿಧಿ, ಗಾಂಧಿಪೇಟೆಯ ಶನೇಶ್ವರಸ್ವಾಮಿ ದೇವಾಲಯ, ಕಾಳಿಕಾಂಭ ದೇವಾಲಯ, ಗ್ರಾಮದೇವತೆ ಹುಳಿಯಾರಮ್ಮನ ದೇವಾಲಯದಲ್ಲಿಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯ ದಿನದ ಅಂಗವಾಗಿ ಶುಕ್ರವಾರ ಬೆಳಗಿನಿಂದಲೇ ವಿಶೇಷ ಅರ್ಚನೆ, ಪೂಜೆ ಕೈಂಕರ್ಯ ನಡೆದವು.
ಪಟ್ಟಣದ ಆಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ಮುಂಜಾನೆ ರಾಮಚಂದ್ರಭಟ್ಟರಿಂದ ಅರ್ಚನೆ,ಅಭಿಷೇಕ ನಡೆದು ರಾಮತಾರಕ ಮಂತ್ರ ಜಪಿಸಲಾಯಿತು.ಭಕ್ತಾಧಿಗಳಿಂದ ರಾಮಭಜನೆ ನಡೆಯಿತು.ಲಿಂಗಪ್ಪನಪಾಳ್ಯದ ರಾಮದೇವರು,ಹುಳಿಯಾರು ಗ್ರಾಮದೇವತೆಗಳಾದ ಹುಳಿಯಾರಮ್ಮ,ದುರ್ಗಮ್ಮ,ರಂಗನಾಥಸ್ವಾಮಿ,ಶನಿದೇವರ ಉತ್ಸವಮೂರ್ತಿಗಳ ಆಗಮನದ ನಂತರ ಮಹಾಮಂಗಳಾರತಿ ನಡೆಸಲಾಯಿತು. ಶ್ರೀ ಆಂಜನೇಯ ಸ್ವಾಮಿ ಸೇವಾ ಛಾರಿಟಬಲ್ ಟ್ರಸ್ಟ್ ಹಾಗೂ ಜೈ ಮಾರುತಿ ಯುವಕ ಸೇವಾ ಛಾರಿಟಬಲ್ ಟ್ರಸ್ಟ್ ವತಿಯಿಂದ ಭಕ್ತಾಧಿಗಳಿಗೆ ಪಾನಕ,ಮಜ್ಜಿಗೆ,ಕಡಲೆಕಾಳು ಉಸ್ಲಿ ವಿತರಿಸಲಾಯಿತು.
ಈ ವೇಳೆ ದೇವಾಲಯ ಸಮಿತಿಯ ಬಡಗಿ ರಾಮಣ್ಣ ಧನಂಜಯ್,ಟ್ರಾಕ್ಟರ್ ಮಂಜಣ್ಣ, ಜೈ ಮಾರುತಿ ಯುವಕ ಸೇವಾ ಛಾರಿಟಬಲ್ ಟ್ರಸ್ಟ್ ನ ಅಶೋಕ್ ಬಾಬು, ಮೆಡಿಕಲ್ ಚನ್ನಬಸವಯ್ಯ, ದಯಾನಂದ್, ಕೆ.ಎಮ್.ಎಲ್ ಮೂರ್ತಿ,ಪ್ರತಾಪ್,ಲೋಕೇಶ್,ಹರೀಶ್ ನಾಯ್ಕ್, ಮನು,ಎಸ್.ಬಿ.ಎಂ ಗ್ರೋಪ್ಸ್ ನ ಸದಸ್ಯರು ಸೇರಿದಂತೆ ಇತರರಿದ್ದರು.
ಪಟ್ಟಣದ ಸೀತಾರಾಮ ಕಲ್ಯಾಣಮಂದಿರದಲ್ಲಿ ವಿಪ್ರಸಂಘದಿಂದ ಶ್ರಿರಾಮಮೂರ್ತಿಗೆ ಪೂಜೆ ಸಲ್ಲಿಸಿ,ಮಹಿಳ ಸಂಘದಿಂದ ರಾಮಭಜನೆ ಮಾಡಿ,ಗೊಜ್ಜವಲಕ್ಕಿ, ಪಾನಕ,ಮಜ್ಜಿಗೆ ವಿತರಿಸಲಾಯಿತು. ವಾಸವಿ ದೇವಾಲಯದಲ್ಲಿ ಆರ್ಯವೈಶ್ಯ ಮಂಡಳಿಯವರಿಂದ, ಅನಂತಶಯನ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವಾಲಯ ಸಮಿತಿಯವರಿಂದ ರಾಮನವಮಿ ಆಚರಿಸಿ ಪಾನಕ,ಕೋಸಂಬರಿ ವಿತರಿಸಲಾಯಿತು.
ರಾಮನವಮಿಯನ್ನು ಊರಹಬ್ಬವಾಗಿ ಇಂದಿಗೂ ಆಚರಿಸಿಕೊಂಡು ಬರುತ್ತಿರುವ ಲಿಂಗಪ್ಪನಪಾಳ್ಯದಲ್ಲಿ ಈ ವರ್ಷವೂ ಸಹ ಶ್ರೀರಾಮದೇವರ ಉತ್ಸವ ಮೂರ್ತಿಯನ್ನು ಹುಳಿಯಾರಿನ ಗ್ರಾಮದೇವತೆಗಳಾದ ದುರ್ಗಮ್ಮ,ಹುಳಿಯಾರಮ್ಮನವರೊಂದಿಗೆ ಬಸವನ ನಗಾರಿ ಸಮೇತ ಸಕಲವಾದ್ಯದೊಂದಿಗೆ ಭಜನಾ ತಂಡದವರ ರಾಮಭಜನಾ ಗಾಯನದೊಂದಿಗೆ ಪಟ್ಟಣದ ಆಂಜನೇಯಸ್ವಾಮಿ ದೇವಾಲಯಕ್ಕೆ ಕರೆತರಲಾಯಿತು. ಅಲ್ಲಿ ಪೂಜೆ ಸಲ್ಲಿಸಿದ ತರವಾಯ ಮೆರವಣೆಗೆಯಲ್ಲಿ ಶನೇಶ್ವಸ್ವಾಮಿ,ರಂಗನಾಥಸ್ವಾಮಿ ದೇವಾಲಯಗಳಿಗೆತೆರಳಿ ಮಂಗಲಾರತಿ ಸಲ್ಲಿಸಿ ಉರಿ ಬಿಸಿಲಿನಲ್ಲಿ ದೇವರುಗಳನ್ನು ಲಿಂಗಪ್ಪನಪಾಳ್ಯಕ್ಕೆ ವಾಪಸ್ಸು ಕರೆದೊಯ್ಯಲಾಯಿತು.ಬಿಲ್ಲುಗೂಡು ಸೇವೆ,ದಾಸಪ್ಪಗಳಿಗೆ ಎಡೆಯಿಟ್ಟ ನಂತರ ಪಾನಕ ಪನಿವಾರ ವಿತರಿಸಲಾಯಿತು.
ಪಟ್ಟಣದ ಹೆಚ್ಚಿನ ಮನೆಮನೆಗಳಲ್ಲೂ ಸಹ ಶ್ರೀರಾಮನನ್ನು ಆರಾಧಸಿ, ನಂತರ ಕೋಸಂಬರಿ, ಬೇಲದ ಹಣ್ಣಿನ ಪಾನಕ, ಮಜ್ಜಿಗೆ, ಕೋಸುಂಬರಿ ನೈವೇದ್ಯ ಸಮರ್ಪಿಸಿ ಅಕ್ಕಪಕ್ಕದವರನ್ನು ಕರೆದು ಪ್ರಸಾದ ನೀಡುವ ಮೂಲಕ ರಾಮನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ