ಹುಳಿಯಾರು:ಚಿಕ್ಕನಾಯಕನಹಳ್ಳಿ ಹಾಗೂ ಹಿರಿಯೂರು ಗಡಿ ಭಾಗವಾದ ಪುರದಯ್ಯನಪಾಳ್ಯದ ಬಿಡಾರದಲ್ಲಿ ಶನಿವಾರ ರಾತ್ರಿಯಿಂದ ಸುಮಾರು ಐವತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು ದಿಡೀರ್ ಘಟನೆಯಿಂದಾಗಿ ಕುರಿಗಾಹಿಗಳು ಆತಂಕಗೊಂಡಿದ್ದು ಆಂತ್ರಾಕ್ಸ್ ರೋಗವಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಕುರಿಗಾಹಿಗಳು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ದಿಂಡಾವರ ಬಾಲದೇವರಹಟ್ಟಿಯವರಾಗಿದ್ದು ತಮ್ಮ ಜೀವನ ನಿರ್ವಹಣೆಗೆ ತಿಂಗಳ ಹಿಂದೆ ವಲಸೆ ಬಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದಸೂಡಿ ಹತ್ತಿರದ ಬಳ್ಳಪ್ಪನಹಟ್ಟಿಯ ಸಮೀಪದಲ್ಲಿ ಬಿಡಾರ ಹಾಕಿದ್ದರು.
ಶನಿವಾರ ರಾತ್ರಿ ಇದ್ದಕ್ಕಿಂದ್ದಂತೆ ಕುರಿಗಳ ಬಾಯಲ್ಲಿ ರಕ್ತ ಬಂದು ಅರ್ಧ ಗಂಟೆಯೊಳಗೆ ಕೆಲವು ಕುರಿಗಳು ಸತ್ತಿದ್ದರೆ ಇನ್ನು ಕೆಲವು ಹೊಟ್ಟೆ ಉಬ್ಬರದಿಂದ ಸಾಯುತ್ತಿದ್ದು ಪಶು ವೈದ್ಯರಿಗೆ ಶನಿವಾರ ರಾತ್ರಿಯೆ ವಿಷಯ ಮುಟ್ಟಿಸಿದ್ದಾಗಿ ,ಇದು ಆಂತ್ರಾಕ್ಸ್ ಕಾಯಿಲೆ ಎಂದು ಪಶು ವೈದ್ಯರು ತಿಳಿಸಿರುವುದಾಗಿ ಕುರಿಗಾಹಿಗಳಾದ ದಾಸಪ್ಪ . ಜಯಣ್ಣ , ಹಾಗೂ ಕರಿಯಣ್ಣ ತಿಳಿಸಿದ್ದಾರೆ.
ಶನಿವಾರ ರಾತ್ರಿ ಸುಮಾರು ೫೦ ಕುರಿಗಳು ಸಾವನ್ನಪ್ಪಿದರೆ ಭಾನುವಾರದಂದು ಸುಮಾರು 20 ಕುರಿಗಳು ಸತ್ತಿದ್ದು ಮಂದೆಯಲ್ಲಿ 50 ರಿಂದ 60 ಕುರಿಗಳು ಚಿಂತಾಜನಕ ಸ್ಥಿತಿಯಲ್ಲಿದೆ ಎನ್ನಲಾಗಿದೆ.
ಭಾನುವಾರ ಪಶುವೈದ್ಯಕೀಯ ಇಲಾಖೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಹಾಯಕ ನಿರ್ದೇಶಕ ನಾಗರಾಜು ಹಾಗೂ ಹಿರಿಯೂರು ತಾಲ್ಲೂಕಿನ ಸಹಾಯಕ ನಿರ್ದೇಶಕ ರವಿ ಭೇಟಿ ನೀಡಿದ್ದು ವ್ಯಾಕ್ಸಿನೇಷನ್ ಮಾಡಿ ಸ್ಯಾಂಪಲ್ ಲ್ಯಾಬ್ ಗೆ ಕಳುಹಿಸಿಕೊಟ್ಟಿದ್ದಾರೆ.
ಒಟ್ಟಾರೆ ಕುರಿಗಳ ಸಾವಿನಿಂದ ಸುತ್ತಲ ಗ್ರಾಮಗಳ ಕುರಿಗಾಹಿಗಳು ಗ್ರಾಮದ ಇತರೆ ಕುರಿಗಳಿಗೂ ರೋಗಹಬ್ಬಿದಲ್ಲಿ ಮುಂದೇನು ಎಂಬ ಆತಂಕಕ್ಕೊಳ್ಳಗಾಗಿದ್ದು ಪಶುವೈದ್ಯರು ಕೂಡಲೇ ಗಮನ ಹರಿಸಿ ರೋಗ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು.ತಾತ್ಕಾಲಿಕ ಚಿಕಿತ್ಸೆಗಾಗಿ ಪಶು ವೈದ್ಯಕೀಯ ಪರೀಕ್ಷಕರನ್ನು ಎರಡು ದಿನಗಳ ಮಟ್ಟಿಗೆ ಅಲ್ಲೆ ನೆಲೆಯೂರುವಂತೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
---------------------------------
ಇವರಿಗೆ ಕುರಿ ಸಾಕಾಣಿಕೆಯೇ ಜೀವನಕ್ಕೆ ಆಧಾರವಾಗಿದ್ದು ಇಲಾಖೆಯವರು ಸತ್ತ ಕುರಿಗಳಿಗೆ ಪರಿಹಾರಕೊಡಬೇಕು. ಪಶುವೈದ್ಯರು ಉಳಿದ ಕುರಿಗಳು ಸಾಯದಂತೆ ರೋಗ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು. :ಮಂಜು ಯಾದವ್ ಕೆಂಪರಾಯನಹಟ್ಟಿ-ತಾಲ್ಲೂಕ್ ಕಾಡುಗೊಲ್ಲರ ಯುವಸೇನೆಯ ಅಧ್ಯಕ್ಷ
---------------------------------
ಕುರಿಗಳ ಸಾವು ಆಂತ್ರಾಕ್ಸ್ ನಿಂದಾಗಿರಬಹುದೆಂದು ಶಂಕಿಸಲಾಗಿದ್ದು ಇಲಾಖೆಯಿಂದ ಮಂದೆಯಲ್ಲಿದ್ದ ಉಳಿದ ಕುರಿಗಳಿಗೆ ಮುಂಜಾಗ್ರತೆಯಾಗಿ ಚುಚ್ಚುಮದ್ದು ನೀಡಿ ರೋಗನಿಯಂತ್ರಣಕ್ಕೆ ಮುಂದಾಗಿದ್ದು ಕುರಿಗಾರರು ಮುಂಜಾಗ್ರತೆಯಾಗಿ ಕುರಿಗಳಿಗೆ ಚುಚ್ಚುಮದ್ದನ್ನು ಹಾಕಿಸಬೇಕು;ರವೀದ್ರಸಿಂಗ್ -ಪಶು ವೈದ್ಯ
----------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ