ಹುಳಿಯಾರು:ಬಹಿರ್ದೆಸೆಗೆಂದು ಕಟ್ಟೆಯ ಬಳಿ ಹೋಗಿದ್ದ ರೈತನ ಮೇಲೆ ಮರಿಯೊಂದಿಗಿದ್ದ ತಾಯಿ ಕರಡಿ ದಾಳಿ ಮಾಡಿ ತೀವ್ರ ಗಾಯಗೊಳಿಸಿರುವ ಘಟನೆ ಹುಳಿಯಾರು ಸಮೀಪದ ನಂದಿಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಗಾಯಾಳುವನ್ನು ನಂದಿಹಳ್ಳಿಯ ವಾಸಿ ರೈತ ಬಸವರಾಜು (೩೫) ಎನ್ನಲಾಗಿದ್ದು ಈತ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಮುಂಜಾನೆ ಎಂದಿನಂತೆ ಬಹಿರ್ದೇಸೆಗೆ ತೆರಳಿದ್ದಾಗ ೨ ಮರಿ ಕರಡಿಗಳ ಜೊತೆಯಲ್ಲಿದ್ದ ತಾಯಿ ಕರಡಿ ಈತನ ಮೇಲೆ ಎರಗಿದ್ದು ದಾಳಿಯಿಂದ ಎಡಭಾಗದ ಸೊಂಟ ಮತ್ತು ಎಡಗೈಗೆ ಸಾಕಷ್ಟು ಗಾಯಗಳಾಗಿದೆ.ಈತನ ಚೀರಾಟ ಕೇಳಿ ಅಕ್ಕಪಕ್ಕದ ಜಮೀನುಗಳಲ್ಲಿದ್ದ ಗ್ರಾಮಸ್ಥರು ಓಡಿಬಂದು ಕರಡಿಗಳನ್ನು ಬೆದರಿಸಿ ಬಸವರಾಜುವನ್ನು ರಕ್ಷಿಸಿದ್ದಾರೆ.ಗ್ರಾಮಸ್ಥರು ಕೂಡಲೇ ಗಾಯಾಳು ಬಸವರಾಜುವನ್ನು ಪಟ್ಟಣದ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.
ಮನವಿ:ನಂದಿಹಳ್ಳಿ ಗ್ರಾಮದ ಸುತ್ತಮುತ್ತಲಿನ ಕೆರೆ, ಕಟ್ಟೆಗಳಲ್ಲಿ ಬೆಳೆದು ನಿಂತಿರುವ ಪೊದೆಗಳು ಕರಡಿಯ ವಾಸಸ್ಥಾನವಾಗಿದ್ದು ರಾತ್ರಿ ವೇಳೆಯಲ್ಲಿ ಆಹಾರ ಅರಸಿ ಗ್ರಾಮಗಳತ್ತ ಬರುತ್ತಿವೆ. ಈ ಹಿಂದೆಯೂ ಅನೇಕರು ಕರಡಿ ದಾಳಿಗೀಡಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಗಮನಹರಿಸಿ ಕರಡಿ ಸಮಸ್ಯೆಯನ್ನು ನಿವಾರಿಸಬೇಕಾಗಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ