ಹುಳಿಯಾರು: ವರುಣನ ಕೃಪೆಗಾಗಿ ಹುಳಿಯಾರು ಸಮೀಪದ ಸೋಮಜ್ಜನಪಾಳ್ಯದ ಗ್ರಾಮಸ್ಥರು ಮಕ್ಕಳ ಮದುವೆ ಮಾಡುವ ಮೂಲಕ ಮಳೆರಾಯನ ಪೂಜೆ ಮಾಡಿದರು.
ಸೋಮಜ್ಜನಪಾಳ್ಯದಲ್ಲಿ ಮಳೆ ಕೈಕೊಟ್ಟ ಸಂದರ್ಭದಲ್ಲೆಲ್ಲ ಹುಡುಗಿ ಹುಡುಗಿಯ ಮದುವೆ ಮಾಡುವ ಸಂಪ್ರಾದಾಯವಿದ್ದು ಈ ಆಚರಣೆಯನ್ನೆ ತಿಂಗಳಮಾಮ ಎಂದು ಕರೆಯುತ್ತಾರೆ. ಇದು ಸೂರ್ಯದೇವ ಮತ್ತು ಭೂಮಿತಾಯಿಯ ಮದುವೆ ಎಂಬ ನಂಬಿಕೆಯಾಗಿದ್ದು ಗಂಡು ವೇಷಧಾರಿ ಸೂರ್ಯನಾದರೆ ಹೆಣ್ಣು ವೇಷಧಾರಿ ಭೂಮಿ. ಇವರಿಬ್ಬರಿಗೂ ಮದುವೆ ಮಾಡಿದರೆ ಮಳೆ ಆಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಅದರಂತೆ ಇಲ್ಲಿನ ಗ್ರಾಮಸ್ಥರು ಹುಡುಗಿಗೆ ಮದುಮಗನ ವೇಷ ತೊಡಿಸಿ ಹುಡುಗಿಯೊಂದಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡುವ ಮೂಲಕ ಮಳೆಮಾಮನ ಆಚರಣೆ ನಡೆಸಿದರು.
ಈ ಆಚರಣೆ ೯ ದಿನಗಳ ಕಾಲ ನಡೆದಿದ್ದು ಭೂಮಿಗೆ ಬಿತ್ತುವ ಪೂರ್ವ ಮುಂಗಾರಿನ ಎಲ್ಲ ದವಸ ಧಾನ್ಯಗಳಿಂದ ರಂಗೋಲಿ ಚಂದ್ರಮನನ್ನು ಅಲಂಕರಿಸಿ ಅದರ ಮೇಲೆ ಮಂಟಪ ಕಟ್ಟಿ ದೀಪ ಮತ್ತು ಬೆನಕನನ್ನು ಪ್ರತಿಷ್ಠಾಪಿಸುತ್ತಾರೆ. ಮಳೆರಾಯನ ಕಳಸವನ್ನು ಹೊತ್ತು ಹೋಗುವ ಮಕ್ಕಳಿಗೆ ನೀರು ಎರಚಿ ಮಳೆರಾಯನನ್ನು ತರೋ ಚಂದ್ರಮ ಎಂದು ಹಾಡಿದರು.
೧೦ ನೇ ದಿನ ಗ್ರಾಮದ ಬಾವಿಯಲ್ಲಿ ನೀರು ತಂದು ಗಂಗಮ್ಮನ ಶಾಸ್ತ್ರ ಮಾಡಿ ಗಂಡು ಹೆಣ್ಣು ಜೋಡಿಯೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಬಂದು ಗ್ರಾಮ ದೇವತೆ ಅಂತರಘಟ್ಟೆ ಅಮ್ಮನವರಿಗೆ ಪೂಜೆ ಸಲ್ಲಿಸಿ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಯಿತು. ನಂತರ ಅನ್ನಸಂತರ್ಪಣೆ ಕಾರ್ಯ ನಡೆಸಿ ಆರತಕ್ಷತೆ ಸಹ ಮಾಡಲಾಗಿದ್ದು ಗ್ರಾಮಸ್ಥರು ಉಡುಗೊರೆ ಸಹ ಕೊಟ್ಟು ಸಂಭ್ರಮಿಸಿದರು.
ಗ್ರಾಮದ ಗೌಡರಾದ ದುರ್ಗಪ್ಪ, ಮುಖಂಡರಾದ ಕಿಟ್ಟಪ್ಪ, ಬೀರಪ್ಪ, ನಾಗಪ್ಪ, ಗ್ರಾಪಂ ಸದಸ್ಯ ನಾಗರಾಜ್, ಹೋಟಲ್ ಬೀರಪ್ಪ, ಮಂಜು, ದೇವರಾಜು ರಂಗಜ್ಜಿ, ಗುಂಡಜ್ಜಿ, ದ್ರಾಕ್ಷಾಯಣಮ್ಮ, ರೈತ ಸಂಘದ ಮಲ್ಲಣ್ಣ, ಗ್ರಾಮಸ್ಥರು ಕಾಮಶೆಟ್ಟಿಪಾಳ್ಯ ಗ್ರಾಮಸ್ಥರು ಕೆ.ಸಿ.ಪಾಳ್ಯ ಗ್ರಾಮಸ್ಥರು, ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ