ಹುಳಿಯಾರು:ಸಮೀಪದ ಹಂದನಕೆರೆ ಹೋಬಳಿಯ ಹೊಸಕೆರೆಯಲ್ಲಿ ಪ್ರತಿ ವರ್ಷದಂತೆ ಗ್ರಾಮದೇವತೆ ಉಡುಸಲ್ಲಮ್ಮ ದೇವಿಯ ಅಗ್ನಿ ಕೊಂಡೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಕೊಂಡೋತ್ಸವದ ಅಂಗವಾಗಿ ಹೊಸಕೆರೆಯಮ್ಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಕೆರೆ ಅಂಗಳದಲ್ಲಿ ಉಡುಸಲ್ಲಮ್ಮದೇವಿಯೊಂದಿಗೆ ಬೆಳಗುಲಿ ರಂಗನಾಥ ಸ್ವಾಮಿ,ಕೆಂಚರಾಯಸ್ವಾಮಿ ,ಜಾಲಿಮರದಮ್ಮ,ಹೊಸಕೆರೆಯಮ್ಮನ ಪರಿವಾರ ದೇವತೆಗಳಾದ ಪಾತಪ್ಪ,ವೀರಣ್ಣ,ಕೆಂಪಣ್ಣ ಸ್ವಾಮಿಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಕಳಸ ಹೊತ್ತ ಬಾಲಕಿಯ ಪೂಜೆ ಸಲ್ಲಿಸಿದ ನಂತರ ಆಗಮಿಸಿದ್ದ ದೇವರುಗಳೊಂದಿಗೆ ನಡೆಮುಡಿಯಲ್ಲಿ ಎಲ್ಲಾ ದೇವರುಗಳನ್ನು ಅಗ್ನಿಕೊಂಡದ ಬಳಿ ಕರೆತರಲಾಯಿತು.
ಅಗ್ನಿಕೊಂಡಕ್ಕೆ ಪೂಜಾ ಸಲ್ಲಿಸಿದ ನಂತರ ವಾದ್ಯಮೇಳದ ಹಿಮ್ಮೇಳದೊಂದಿಗೆ ನಿಗಿನಿಗಿಸುವ ಕೆಂಡದ ಮೇಲೆ ಮೊದಲು ದೇವರ ಬಸವ ನಂತರ ಕಳಸ ಹೊತ್ತ ಬಾಲಕಿ ಹಾದ ನಂತರ ಉಡುಸಲ್ಲಮ್ಮನೊಟ್ಟಿಗೆ ಎಲ್ಲಾ ದೇವರುಗಳ,ಕೆಂಚರಾಯಗಳನ್ನು ಕೆಂಡ ಹಾಯಿಸಲಾಯಿತು.ಮೊದಲೇ ಪಟ್ಟಿಮಾಡಿದ ಸೀಮಿತ ಸಂಖ್ಯೆಯ ಭಕ್ತರು ಕೆಂಡ ಸೇವೆಗೈದು ಹರಕೆ ಒಪ್ಪಿಸಿದರು.ಬೆಳಿಗ್ಗೆ ೧೧ ಕ್ಕೆ ಪ್ರಾರಂಭವಾದ ಕೆಂಡ ಸೇವೆ ನೋಡುವ ಸಲುವಾಗಿಯೇ ಅಪಾರ ಭಕ್ತರು ಬಿಸಿಲ್ಲನ್ನು ಲೆಖ್ಖಿಸದೆ ಕಾದು ನಿಂತಿದ್ದರು.ನಿಗಿನಿಗಿಸುವ ಕೆಂಡದ ಮೇಲೆ ಹಾಯುವುದನ್ನು ನೋಡಿ ಭಕ್ತಪರವಶರಾದರು.
ಕೆಂಡದ ಸಮಯದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಪೋಲಿಸರು ಹಾಗೂ ದೇವಾಲಯ ಸಮಿತಿಯವರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು.ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರಿಗೆ ಹೊಸಕೆರೆ ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ನಡೆಯಿತು.
ದೇವಾಲಯ ಸಮಿತಿಯ ಕನ್ವೀನರ್ ಭರತ್,ಪಟೇಲ ಸುರೇಶ್,ಪುಟ್ಟಶಾಮಯ್ಯ,ಯಜಮಾನರುಗಳಾದ ಜಯರಾಮಯ್ಯ,ಕರಿಯಪ್ಪ,ರಘು ಸೇರಿದಂತೆ ಮುದ್ದೇನಹಳ್ಳಿ,ಬಯಲಪ್ಪನ ಮಠ,ತಾರೀಕಟ್ಟೆ, ತಾಂಡ್ಯ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವೈಫಲ್ಯ:ಅನಾದಿ ಕಾಲದಿಂದಲೂ ನಡೆಯುತ್ತಿದ್ದ ಕೆಂಡದ ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿ ತಾಲ್ಲೂಕ್ ಆಡಳಿತದಿಂದ ಒಪ್ಪಿಗೆ ಪಡೆಯಬೇಕಾಯಿತು.ಸರ್ಕಾರಿ ಆದೇಶದಂತೆ ಪೋಲಿಸರು ಆಗಮಿಸಿದ್ದರಾದರೂ ಮುಂಜಾಗ್ರತೆಯಾಗಿ ಸ್ಥಳದಲ್ಲಿರಬೇಕಾದ ಅಗ್ನಿಶಾಮಕ ದಳ ಹಾಗೂ ಸಂಚಾರಿ ತುರ್ತು ವಾಹನದ ಏರ್ಪಾಡಿನ ಬಗ್ಗೆ ತಾಲ್ಲೂಕ್ ಆಡಳಿತ ಗಮನಹರಿಸಿರಲಿಲ್ಲ. ಅಕಸ್ಮಾತ್ ಅಗ್ನಿಕೊಂಡ ಹಾಯುವಾಗ ಏನಾದರೂ ಹೆಚ್ಚುಕಮ್ಮಿಯಾಗಿ ಅನಾಹುತವಾಗಿದ್ದರೆ ಯಾರು ಹೊಣೆ ಎನ್ನುವ ಮಾತು ಕೇಳಿಬಂತು.
----------------------------------------
ಪ್ರತಿ ವರ್ಷವೂ ಗ್ರಾಮದೇವಿಯ ಸನ್ನಿಧಾನದಲ್ಲಿ ಜಾತ್ರಾ ಸಮಯದಲ್ಲಿ ಕೆಂಡ ಹಾಯುವುದು ನಡೆಯುತ್ತವೆ.ಕೆಂಡ ಹಾಯ್ದರೆ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಈ ಆಚರಣೆ ನಡೆಯುತ್ತಿದ್ದು ಇದೇ ಮೊದಲ ಬಾರಿಗೆ ತಾಲ್ಲೂಕ್ ಆಡಳಿತ ಹಾಗೂ ಪೋಲಿಸರು ಮಧ್ಯಸ್ಥಿಕೆ ವಹಿಸಿ ಎಲ್ಲರನ್ನೂ ಕೆಂಡ ಹಾಯಿಸದೆ ಸೀಮಿತ ಯುವಕರನ್ನು ಮಾತ್ರ ಕೆಂಡ ಹಾಯಿಸಲಾಯಿತು.ಇದರಿಂದಾಗಿ ಹರಕೆ ಹೊತ್ತ ಹಲವರು ನಿರಾಶರಾಗಿ ಮರಳಬೇಕಾಯಿತು :ಸಿಂದೂಧರ,ಗ್ರಾಮದ ಯುವಕ
-----------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ