ಹುಳಿಯಾರು: ಯುಗಾದಿ ಹಬ್ಬದಂದು ಜೂಜಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಅಕ್ರಮವಾಗಿ ಜೂಜಾಡುವವರ ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗುವುದೆಂದು ಹುಳಿಯಾರು ಪಿಎಸ್‌ಐ ಪ್ರವೀಣ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಳಿಯಾರು ಸೇರಿದಂತೆ ಹೊಯ್ಸಳಕಟ್ಟೆ,ದಸೂಡಿ,ಕೆಂಕೆರೆ,ಹೊಸಳ್ಳಿ,ನಂದಿಹಳ್ಳಿ,ಸೂರಗೊಂಡನಹಳ್ಳಿ. ದೊಡ್ಡಬಿದರೆ,ತಿಮ್ಲಾಪುರ ಸೇರಿದಂತೆ ಹುಳಿಯಾರು ಠಾಣಾ ವ್ಯಾಪ್ತಿಯಲ್ಲಿ ಯುಗಾದಿ ಹಬ್ಬದಲ್ಲಿ ಜೂಜಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಯುಗಾದಿ ಹಬ್ಬದ ಆಚರಣೆ ಸಮಯದಲ್ಲಿ ಕಲ್ಯಾಣ ಮಂಟಪ, ಹೋಟೆಲ್, ವಸತಿ ಗೃಹಗಳು, ಮನೆ, ತೋಟದ ಮನೆಗಳು, ರಸ್ತೆಯ ಬದಿಗಳಲ್ಲಿ ಟೆಂಟ್ ನಿರ್ಮಿಸಿಕೊಂಡು ಜೂಜಾಡುವುದನ್ನು ನಿಷೇಧಿಸಿದ್ದು
ಈ ಸಂಬಂಧ ಯಾವುದೇ ರೀತಿಯ ಜೂಜಾಟ ಕಂಡು ಬಂದಲ್ಲಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅಲ್ಲದೆ ಇದಕ್ಕೆ ಪ್ರೋತ್ಸಾಹಿಸಿದ ಸ್ಥಳದ ಮಾಲೀಕರು/ ಮಧ್ಯವರ್ತಿಗಳ ಮೇಲು ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ಅಲ್ಲದೆ ಇದಕ್ಕೆ ಸಂಬಂಧಿಸಿದ ಚರ ಮತ್ತು ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಅಕ್ರಮ ಜೂಜಾಟದಲ್ಲಿ ತೊಡಗುವವರ ವಿರುದ್ದ ಗೂಂಡಾ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಮುಂಜಾಗ್ರತೆ ಕ್ರಮವಾಗಿ ಠಾಣಾ ವ್ಯಾಪ್ತಿಯ ೧೨ ಗ್ರಾಮಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಸಾರ್ವಜನಿಕರು ಈ ಬಗ್ಗೆ ಅಗತ್ಯ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ. ಹಬ್ಬದಂದು ಜೂಜಾಟದಲ್ಲಿ ತೊಡಗುವವರ ಮೇಲೆ ತೀವ್ರ ನಿಗಾವಹಿಸಲಾಗಿದ್ದು ಹಬ್ಬದ ಸಮಯದಲ್ಲಿ ಹಗಲು ಮತ್ತು ರಾತ್ರಿ ಸಮಯದಲ್ಲಿ ವಿಶೇಷ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಮಾಡಲಾಗಿದೆ.ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ಜೂಜಾಟದಲ್ಲಿ ತೊಡಗುವುದಾಗಲಿ, ಅದಕ್ಕೆ ಅವಕಾಶ ಮಾಡಿಕೊಡುವುದಾಗಲಿ, ಪ್ರೋತ್ಸಾಹ ಕೊಡುವುದಾಗಲಿ ಮಾಡಬಾರದೆಂದು ಅವರು ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ