ಕಳಸಹೊತ್ತು ಹರಕೆ ತೀರಿಸಿದ ಕುಮಾರಿಯರು
ಹುಳಿಯಾರಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿಯ ಕಳಸೋತ್ಸವಕ್ಕೆ ಆಗಮಿಸಿದ್ದ ವಿವಿಧ ಗ್ರಾಮದೇವತೆಗಳು |
-------------------------------
ಹುಳಿಯಾರು ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿದೇವಿಯ ೪೬ನೇ ವರ್ಷದ ಜಾತ್ರಾಮಹೋತ್ಸವದ ಅಂಗವಾಗಿ ಗುರುವಾರ ನಡೆದ ಕಳಸ ಕಾರ್ಯಕ್ರಮದಲ್ಲಿ ಇನ್ನೂರೈವತ್ತಕ್ಕೂ ಹೆಚ್ಚು ಹೆಣ್ಣು ಮಕ್ಕಳು ಕಳಸ ಹೊತ್ತು ಹರಕೆ ತೀರಿಸಿದರು.
ಬುಧವಾರ ರಾತ್ರಿ ದೇವರುಗಳ ಕೂಡುಭೇಟಿ ನಡೆದು ದುರ್ಗಮ್ಮನವರೊಂದಿಗೆ ಹುಳಿಯಾರಮ್ಮ, ತಿರುಮಲಾಪುರ ಹಾಗೂ ಹೊಸಹಳ್ಳಿಯ ಕೊಲ್ಲಾಪುರದಮ್ಮ, ಹೊಸಹಳ್ಳಿಪಾಳ್ಯದ ಅಂತರಘಟ್ಟೆಅಮ್ಮ, ಕೆಂಚಮ್ಮ ನವರೊಂದಿಗೆ ಕೆರೆಯಲ್ಲಿನ ಬಾವಿಹತ್ತಿರ ಗದ್ದುಗೆ ಮಾಡಲಾಗಿತ್ತು. ಮುಂಜಾನೆ ಪಟ್ಟದಕಳಸ ಸ್ಥಾಪನೆ ಹಾಗೂ ಗಂಗಾಸ್ನಾನ ನಡೆಸಲಾಯಿತು.ಮಹಾಮಂಗಳಾರತಿ ನಡೆದು ಪಲ್ಲಾರ ವಿತರಿಸಿದ ನಂತರ ಸರ್ವಾಲಂಕೃತ ದುರ್ಗಮ್ಮನವರೊಂದಿಗೆ ಪಟ್ಟದಕಳಸ ಸಮೇತ ನಡೆಮುಡಿ ಪ್ರಾರಂಭಗೊಂಡಿತು. ಬೆಳಗಿನ ಜಾವದಿಂದಲೇ ಕೆರೆ ಬಾವಿ ಸಮೀಪ ಹೆಣ್ಣುಮಕ್ಕಳೊಂದಿಗೆ ಆಗಮಿಸಿದ್ದ ಪೋಷಕರು ಪಟ್ಟದ ಕಳಸಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.
ಹುಳಿಯಾರು,ಲಿಂಗಪ್ಪನಪಾಳ್ಯ,ಕೋಡಿಪಾಳ್ಯ,ಕಾಮಶೆಟ್ಟಿಪಾಳ್ಯ,ಸೋಮಜ್ಜನಪಾಳ್ಯ ,ಕೇಶವಾಪುರ ಸೇರಿದಂತೆ ಇನ್ನಿತರ ಗ್ರಾಮಗಳ ೨೫೦ಕ್ಕೂ ಹೆಚ್ಚಿನ ಹೆಣ್ಣುಮಕ್ಕಳು ಕಳಸ ಹೊತ್ತು ತಮ್ಮ ಹರಕೆ ತೀರಿಸಿದರು. ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತಾಧಿಗಳು ಕಳಸೋತ್ಸವಕ್ಕೆ ಮೆರಗು ತಂದರು. ಕಳಸ ಹೊತ್ತ ಹೆಣ್ಣುಮಕ್ಕಳಿಗೆ ಪೋಲೀಸ್ ಇಲಾಖೆವತಿಯಿಂದ ಉಪಹಾರ ವ್ಯವಸ್ಥೆ ಮಾಡಿಸಲಾಗಿತ್ತು. ಕನಕ ಯುವ ವೇದಿಕೆವತಿಯಿಂದ ಪಾನಕವಿತರಣೆ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ