ಹಿಂದುಳಿದ ಪ್ರದೇಶ ಅಭಿವೃದ್ಧಿ ದೃಷ್ಠಿಯಿಂದ ಹುಳಿಯಾರು ಸಿದ್ಧರಾಮಯ್ಯ ಅಧ್ಯಕ್ಷರಾಗಲಿ :ಸಾಸಲುಸತೀಶ್
----------------------------------------
ಹುಳಿಯಾರು: ನಂಜುಂಡಪ್ಪ ವರದಿಯನ್ವಯ ಹಿಂದುಳಿದ ಪ್ರದೇಶವಾಗಿರುವ ಚಿ.ನಾ.ಹಳ್ಳಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈ ಬಾರಿಯ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನವನ್ನು ಚಿಕ್ಕನಾಯಕನಹಳ್ಳಿಗೆ ಬಿಟ್ಟುಕೊಡುವಂತೆ ಚಿ.ನಾ.ಹಳ್ಳಿ ಕಾಂಗ್ರೆಸ್ ಮುಖಂಡ ಸಾಸಲುಸತೀಶ್ ಒತ್ತಾಯಿಸಿದ್ದಾರೆ.
ಹುಳಿಯಾರಿನಲ್ಲಿ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಪಕ್ಷದ ವರಿಷ್ಠರು ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಜಿಪಂ ಗಾದಿ ಹಿಡಿಯಲು ನಿರ್ಧರಿಸಿದಲ್ಲಿ ಚಿಕ್ಕನಾಯ್ಕನಹಳ್ಳಿ ತಾಲೂಕಿನ ಹುಳಿಯಾರು ಕ್ಷೇತ್ರದಿಂದ ಬಿಸಿಎಂ ಎ ಮೀಸಲಾತಿಯಿಂದ ಆಯ್ಕೆಯಾಗಿರುವ ವೈ.ಸಿ.ಸಿದ್ಧರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿಸುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಮುನ್ನುಡಿ ಬರೆಯುವಂತೆ ಮನವಿ ಮಾಡಿದರು.
ಕಳ್ಳಂಬೆಳ್ಳ ಕ್ಷೇತ್ರದಿಂದ ಟಿ.ಬಿ.ಜಯಚಂದ್ರ ಅವರು ಶಾಸಕರಾಗುತ್ತಿದ್ದ ಸಂದರ್ಭದಲ್ಲಿ ಹುಳಿಯಾರಿನಲ್ಲಿ ಪದವಿ ಕಾಲೇಜು, ಬೋರನಕಣಿವೆಯಿಂದ ನೀರಿನ ಸೌಲಭ್ಯ, ಹಳ್ಳಿಗಳಲ್ಲಿ ನೀರು ಹಾಗೂ ರಸ್ತೆ ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯಗಳು ಆಗಿದ್ದವು. ಅವರು ಶಿರಾ ಕ್ಷೇತ್ರಕ್ಕೆ ಹೋದ ನಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಇನ್ನು ಚಿ.ನಾ.ಹಳ್ಳಿಯಲ್ಲೂ ಲಕ್ಕಪ್ಪ ಅವರ ಶಾಸಕರಾಗಿದ್ದ ಕಾಲದಲ್ಲಿ ಅಭಿವೃದ್ಧಿ ಕಾರ್ಯಗಳಾಗಿದ್ದವು. ಇದರರ್ಥ ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದರೆ ಮಾತ್ರ ಅಭಿವೃದ್ಧಿ ಕಾರ್ಯಗಳಾಗುತ್ತಿದ್ದು ವೈ.ಸಿ.ಸಿದ್ಧರಾಮಯ್ಯ ಅವರಿಗೆ ಅಧಿಕಾರ ಕೊಟ್ಟಲ್ಲಿ ಈ ಬಾರಿಯೂ ಕ್ಷೇತ್ರದಲ್ಲಿ ಅಭಿವೃದ್ಧಿ ನಿರೀಕ್ಷಿಸಬಹುದು ಎಂದರು.
ಇನ್ನು ತುಮಕೂರು ಜಿಲ್ಲೆಯಲ್ಲಿ ಚಿ.ನಾ.ಹಳ್ಳಿ ಹೊರತು ಪಡಿಸಿ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ನಿಂದ ರಾಜಕೀಯದ ಅಧಿಕಾರ ಲಾಭ ಪಡೆದಿದ್ದಾರೆ. ಶಿರಾ, ಮಧುಗಿರಿ, ತಿಪಟೂರು, ತುಮಕೂರು ತಾಲೂಕಿನಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಪಾವಗಡದಲ್ಲಿ ಉಗ್ರಪ್ಪ ಎಂಎಲ್ಸಿ ಆಗಿದ್ದಾರೆ. ತುರುವೇಕೆರೆಯಲ್ಲಿ ಎಂ.ಡಿ.ಲಕ್ಷ್ಮೀನಾರಾಯಣ್, ಕೊರಟಗೆರೆಯಲ್ಲಿ ಸಚಿವ ಡಾ.ಜಿ.ಪರಮೇಶ್ವರ್, ಕುಣಿಗಲ್‌ನಿಂದ ಸಂಸದ ಮುದ್ದಹನುಮೇಗೌಡರಿದ್ದಾರೆ. ಹಾಗಾಗಿ ಚಿಕ್ಕನಾಯ್ಕನಹಳ್ಳಿ ತಾಲೂಕಿನಲ್ಲೂ ಕಾಂಗ್ರೆಸ್ ಪಕ್ಷ ಸಂಘಟನೆಯ ದೃಷ್ಠಿಯಿಂದಾದರೂ ಸಿದ್ಧರಾಮಯ್ಯ ಅವರಿಗೆ ಜಿಪಂ ಅ‘್ಯಕ್ಷ ಸ್ಥಾನ ನೀಡುವುದು ಒಳಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಪಿಎಂಸಿ ಸದಸ್ಯ ರಹಮತ್‌ಉಲ್ಲಾ ಸಾಬ್ ಅವರು ಮಾತನಾಡಿ ಸಿದ್ಧರಾಮಯ್ಯ ಅವರ ತಂದೆ ಚಿಕ್ಕಣ್ಣ ಅವರು ಹುಟ್ಟು ಕಾಂಗ್ರೆಸಿಗರಾಗಿದ್ದು ಟಿ.ಬಿ.ಜಯಚಂದ್ರ, ಮೂಡ್ಲುಗಿರಿಯಪ್ಪ, ಕೆ.ಮಲ್ಲಣ್ಣ, ಲಕ್ಕಪ್ಪ ಹೀಗೆ ಎಲ್ಲರ ಚುನಾವಣೆಯಲ್ಲೂ ಕಾಂಗ್ರೆಸ್ ಪರ ಕೆಲಸ ಮಾಡಿ ಗೆಲುವಿಗೆ ಕಾರಣಕರ್ತರಾಗಿದ್ದರು. ಇನ್ನೂ ಸಿದ್ಧರಾಮಯ್ಯ ಅವರು ಎಂದೂ ಪಕ್ಷಾಂತರ ಮಾಡದ, ಪಕ್ಷ ವಿರೋಧಿ ಚಟುವಟಿಕೆ ಮಾಡದೆ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದಾರೆ. ವ್ಯಕ್ತಿಗತ ಸರಳ, ಸಜ್ಜನಿಕೆಗೆ ಹೆಸರಾಗಿದ್ದು ಎಂದೂ ಕೋಪ ಮಾಡಿಕೊಳ್ಳದೆ ಎಲ್ಲರೊಂದಿಗೂ ಬೆರೆಯುವ ಸಂಘಟನಾ ಕೌಶಲ್ಯ ರೂಢಿಸಿಕೊಂಡಿದ್ದಾರೆ. ಇಂತಹವರಿಗೆ ಅಧಿಕಾರ ಕೊಟ್ಟರೆ ಪಕ್ಷಕ್ಕೂ, ಜನಸಾಮಾನ್ಯರಿಗೂ ಒಳಿತಾಗುತ್ತದೆ ಎಂದರು.
ಗ್ರಾಪಂ ಸದಸ್ಯ ಎಲ್.ಆರ್.ಚಂದ್ರಶೇಖರ್ ಅವರು ಮಾತನಾಡಿ ಚಿಕ್ಕಾನಾಯ್ಕನಹಳ್ಳಿ ತಾಲೂಕಿನಲ್ಲಿ ಕಾಂಗ್ರೆಸ್ ನೆಲಕಚ್ಚಿ ಸಮರ್ಥ ನಾಯಕನಿಲ್ಲದೆ ಕಾರ್ಯಕರ್ತರು ದಿಕ್ಕಾಪಾಲಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಸಾಸಲು ಸತೀಶ್ ಅವರು ಕ್ಷೇತ್ರದಲ್ಲಿ ನೆಲೆಯೂರಿ ಕಾರ್ಯಕರ್ತರ ಕಷ್ಟ-ಸುಖಗಳಿಗೆ ಸ್ಪಂದಿಸಿ ಪಕ್ಷವನ್ನು ಸಮರ್ಥವಾಗಿ ಕಟ್ಟುತ್ತಿದ್ದಾರೆ. ಇವರ ಪಕ್ಷ ಸಂಘಟನೆಗೆ ನೆರವಾಗುವ ನಿಟ್ಟಿನಲ್ಲಿಯಾದರೂ ಸಿದ್ಧರಾಮಯ್ಯ ಅವರಿಗೆ ಅಧ್ಯಕ್ಷಗಿರಿ ಕೊಡಬೇಕು ಎಂದರಲ್ಲದೆ ಸಿದ್ಧರಾಮಯ್ಯ ಅವರು ಗ್ರಾಪಂ ಅಧ್ಯಕ್ಷರಾಗಿ, ಎಪಿಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಜನಾನುರಾಗಿಯಾಗಿದ್ದು ಜಿಪಂ ಅಧ್ಯಕ್ಷಗಾದಿ ಕೊಟ್ಟರೆ ಅಧಿಕಾರವನ್ನು ಜನರಿಗೆ ಹಂಚಿ ಪಕ್ಷಕ್ಕೆ ಒಳ್ಳೆ ಹೆಸರು ತರುವುದರಲ್ಲಿ ಎರಡುಮಾತಿಲ್ಲ ಎಂದರು.
ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೇಷಾನಾಯ್ಕ, ಹುಳಿಯಾರು ಬಿಸಿಎಂ ಕಾಂಗ್ರೆಸ್ ಅಧ್ಯಕ್ಷ ಧನುಷ್ ರಂಗನಾಥ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಎಚ್.ಅಶೋಕ್, ತಾಪಂ ಮಾಜಿ ಅಧ್ಯಕ್ಷ ವೈ.ಆರ್.ಮಲ್ಲಿಕಾರ್ಜುನಯ್ಯ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಅಬ್ಜಲ್, ಜಾಫರ್ ಮತ್ತಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ