ಹುಳಿಯಾರು: ಹೊಸವರ್ಷಕ್ಕೆ ಮುನ್ನುಡಿಯಾಗಿರುವ ಹಿಂದೂ ಸಂಪ್ರದಾಯದ ಪ್ರಮುಖ ಹಾಗೂ ದುರ್ಮುಖಿ ನಾಮ ಸಂವತ್ಸರದ ಮೊದಲ ದಿನವಾದ ಯುಗಾದಿ ಹಬ್ಬವನ್ನು ಶುಕ್ರವಾರದಂದು ಹುಳಿಯಾರಿನಲ್ಲಿ ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.
ಸಂಪ್ರದಾಯದಂತೆ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮನೆಮಂದಿಯೆಲ್ಲ ಎಣ್ಣೆ ನೀರಿನ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಪೂಜೆ ಸಲ್ಲಿಸಿ, ಒಬ್ಬಟ್ಟಿನ ಊಟ ಮಾಡಿ ಸಂಭ್ರಮಿಸಿದರು.
ಕಷ್ಟ, ಸುಖ ಎರಡನ್ನೂ ಸಮಾನವಾಗಿ ಸ್ವೀಕಸಬೇಕೆಂಬ ಸಂಕೇತ ಸಾರುವ ಬೇವು-ಬೆಲ್ಲ ಸೇವಿಸಿದರು. ಹಬ್ಬದಲ್ಲಿ ಪಂಚಾಂಗ ಪೂಜೆ ಕೂಡ ಬಹುಮುಖ್ಯ ಆಚರಣೆಯಾಗಿದ್ದು ಅಂದು ಕೆಲವರು ಮನೆಗೆ ಹೊಸ ಪಂಚಾಂಗವನ್ನು ತಂದು ಪೂಜಿಸಿ ಪಂಚಾಂಗ ಶ್ರವಣ ಮಾಡಿಸಿದರೆ ಮತ್ತೆ ಕೆಲವರು ದೇವಸ್ಥಾನಗಳಿಗೆ ತೆರಳಿ ಸಾಮೂಹಿಕ ಪಂಚಾಂಗ ಶ್ರವಣದಲ್ಲಿ ಭಾಗವಹಿಸಿ ಈ ವರ್ಷದ ಆಯವ್ಯಯ, ಆರೋಗ್ಯ,ಮಳೆ-ಬೆಳೆ, ಗ್ರಹ-ನಕ್ಷತ್ರಗಳ ಬಲಾಬಲ, ಮನೆಯ ಮಂದಿಯ ಭವಿಷ್ಯ ಮುಂತಾದವುಗಳನ್ನು ಅವರವರ ರಾಶಿ ಫಲದ ಮೇಲೆ ತಿಳಿದುಕೊಂಡರು.
ಹುಳಿಯಾರಿನಲ್ಲಿ ಯುಗಾದಿ ಆಚರಣೆಯ ಹಿನ್ನಲೆಯಲ್ಲಿ ಪಂಚಾಂಗ ಶ್ರವಣದ ಮೂಲಕ ಈ ಸಂವತ್ಸರದ ಫಲಾಫಲಗಳನ್ನು ತಿಳಿದುಕೊಳ್ಳುತ್ತಿರುವ ಕುಟುಂಬದವರು. |
ಹಬ್ಬದ ಪ್ರಯುಕ್ತ ಇಲ್ಲಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ವಾಸವಿ, ಬನಶಂಕರಿ ದೇವಾಲಯದಲ್ಲಿ ಪಂಚಾಂಗ ಶ್ರವಣ ನಡೆಯಿತು.ಈಶ್ವರ ದೇವಾಲಯದಲ್ಲಿ ಪಾನಕ ಫಲಹಾರ ಸೇವೆ ನಡೆಯಿತು.
ಬಿದಿಗೆ ಚಂದ್ರ: ಗಣೇಶ ಚತುರ್ಥಿಯ ಬಿದಿಗೆ ಚಂದ್ರ ದರ್ಶನ ಮಾಡುವುದು ಅಪವಾದವಾದರೆ ಯುಗಾದಿ ಪಾಡ್ಯದ ನಂತರದ ಬಿದಿಗೆ ಚಂದ್ರದರ್ಶನ ಶುಭ ಎನ್ನುವ ಪ್ರತೀತಿ ಇದ್ದು ಸಂಜೆ ನವ ಸಂವತ್ಸರದ ಮೊದಲ ಚಂದ್ರನ ದರ್ಶನ ಪಡೆದರು.ಒಟ್ಟಾರೆ ಎರಡು ದಿನಗಳ ಕಾಲ ಯುಗಾದಿ ಸಂಭ್ರಮ ತುಂಬಿ ತುಳುಕುತಿತ್ತು.
ವರ್ಷದ ತೊಡಕು: ಯುಗಾದಿ ಹಬ್ಬದ ಮಾರನೆಯ ದಿನವನ್ನು ವರ್ಷ ತೊಡಕು ಎಂದು ಆಚರಿಸಲಾಗುತ್ತದೆ. ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾಗಿದ್ದು, ಅಂದು ವರ್ಷಪೂರ್ತಿಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ. ಹೀಗಾಗಿ ವರ್ಷ ತೊಡಕಿಗೂ ಯುಗಾದಿ ದಿನದಷ್ಟೇ ಪ್ರಾಮುಖ್ಯತೆ.
ಮಾಂಸಹಾರಿ ವರ್ಗದ ಜನ ಕುರಿ ಕೋಳಿ ಅಡುಗೆ ಮಾಡಿ ವರ್ಷದ ತೊಡಕು ಆಚರಿಸುವುದು ಸಾಮಾನ್ಯ. ಸಂಬಂಧಿಗಳನ್ನು ಹಾಗೂ ಸ್ನೇಹಿತರನ್ನು ಊಟಕ್ಕೆ ಕರೆಯುವುದು ವಾಡಿಕೆ. ಆದರೆ ಈ ಬಾರಿ ಶನಿವಾರ ವರ್ಷ ತೊಡಕು ಬಂದ ಹಿನ್ನಲೆಯಲ್ಲಿ ಬಹುಪಾಲು ಮಂದಿ ಆಚರಣೆ ಮಾಡದೆ ಭಾನುವಾರಕ್ಕೆ ಮುಂದೂಡಿದ್ದರಿಂದ ಅಷ್ಟಾಗಿ ಕಳೆಗಟ್ಟಿರಲಿಲ್ಲ. ಶನಿವಾರ ಹಾಗೂ ಸೋಮವಾರದಂದು ಬಹುಪಾಲು ಮಂದಿ ಮಾಂಸಾಹರ ಸೇವಿಸದಿರುವ ಹಿನ್ನಲೆಯಲ್ಲಿ ಇಂದಿನ ವರ್ಷತೊಡಕಿನ ಕೋಳಿ ವ್ಯಾಪಾರ ನಿರೀಕ್ಷಿಸಿದಂತಿರದೆ ನೀರಸವಾಗಿತ್ತು.
---------------------------
ಯುಗಾದಿಯಲ್ಲಿ ಬೇವು-ಬೆಲ್ಲ ಸೇವಿಸುವ ಮೂಲಕ ಜೀವನದಲ್ಲಿ ಬರುವ ಕಷ್ಟ-ಸುಖ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು .ಬದುಕಿನಲ್ಲಿ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಬದುಕಬೇಕು ಎಂಬುವುದನ್ನು ಸಾರುವ ಸಂಕೇತವಾಗಿ ಬೇವು-ಬೆಲ್ಲವನ್ನು ಯುಗಾದಿ ಹಬ್ಬದಂದು ಸೇವಿಸಲಾಗುತ್ತದೆ.
-----------------------------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ