ಹುಳಿಯಾರು ಹೋಬಳಿ ಜೋಡಿ ತಿರುಮಲಾಪುರ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಬುಧವಾರ ಚುನಾವಣೆ ನಡೆದು ಜೆಡಿಎಸ್ ಗೆ ಕಾಂಗ್ರೆಸ್ ಬೆಂಬಲಿಸಿದ ಫಲವಾಗಿ ಜೆಡಿಎಸ್ ಸೂಚಿತ ಅಭ್ಯರ್ಥಿ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.
ಹುಳಿಯಾರು ಹೋಬಳಿ ತಿರುಮಲಾಪುರ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ನಂದಿಹಳ್ಳಿ ದೇವರಾಜು ಹಾಗೂ ಉಪಾಧ್ಯಕ್ಷರಾಗಿ ಸೂರಗೊಂಡನಹಳ್ಳಿ ಮೋಹನ್ ಕುಮಾರ್ ಆಯ್ಕೆಯಾಗಿದ್ದಾರೆ. |
ಪಂಚಾಯ್ತಿಯ ಒಟ್ಟು ೧೭ ಸದಸ್ಯರ ಪೈಕಿ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಹಾಗೂ ಬಿಸಿಎಂ-ಎ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ನಂದಿಹಳ್ಳಿಯ ದೇವರಾಜು ಹಾಗೂ ಬಿಜೆಪಿ ಬೆಂಬಲಿತ ಗಾಯತ್ರಿದೇವಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಸೂರಗೊಂಡನಳ್ಳಿ ಮೋಹನ್ ಕುಮಾರ್ ಹಾಗೂ ಬಿಜೆಪಿ ಬೆಂಬಲಿತ ಸುಂದರೇಶ್ ಉಮೇದುವಾರಿಕೆ ಸಲ್ಲಿಸಿ ಚುನಾವಣಾ ಕಣದಲ್ಲಿದ್ದರು.
ಎರಡು ಸ್ಥಾನಗಳಿಗೆ ಪೈಪೋಟಿ ಒಡ್ಡಿದ್ದರ ಪರಿಣಾಮ ಚುನಾವಣೆ ನಡೆದು ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರವಾಗಿ ತಮ್ಮ ಪರ ಅಭ್ಯರ್ಥಿಗೆ ಮತ ಹಾಕಿದರೆ, ಬಿಜೆಪಿಯ ಸದಸ್ಯರು ತಮ್ಮ ಬೆಂಬಲಿಗರಿಗೆ ಮತಹಾಕಿದರು. ೧೭ ಸದಸ್ಯರಲ್ಲಿ ಬಹುಮತಕ್ಕೆ ೯ ಮಂದಿ ಮತದ ಅವಶ್ಯಕತೆಯಿತ್ತು. ಅಧ್ಯಕ್ಷ ಸ್ಥಾನದ ದೇವರಾಜು ಹಾಗೂ ಉಪಾಧ್ಯಕ್ಷ ಸ್ಥಾನದ ಮೋಹನ್ ಕುಮಾರ್ ಅವರು ತಲಾ ೯ ಮತ ಪಡೆದಿದ್ದರಿಂದ ಚುನಾವಣಾಧಿಕಾರಿ ಪಶುಇಲಾಖೆಯ ಶಶಿಕುಮಾರ್ ಅವರು ಅಧ್ಯಕ್ಷಸ್ಥಾನಕ್ಕೆ ದೇವರಾಜು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೋಹನ್ ಕುಮಾರ್ ಆಯ್ಕೆಯಾಗಿರುವುದಾಗಿ ಘೋಷಿಸಿದರು.
ಈ ವೇಳೆ ಗ್ರಾ.ಪಂ.ಯ ಸದಸ್ಯರಾದ ಶಂಕರಪ್ಪ,ಬಸವರಾಜು,ಅನ್ನಪೂರ್ಣಮ್ಮ,ದಯಾನಂದ್ , ತಾಲ್ಲೂಕು ಯುವ ಜೆಡಿಎಸ್ ನ ಅಧ್ಯಕ್ಷ ಗವಿರಂಗನಾಥ್(ಗೌಡಿ), ಯೂತ್ ಕಾಂಗ್ರೆಸ್ ನ ಹೊಸಳ್ಳಿ ಅಶೋಕ್, ಮುಖಂಡರಾದ ಧನುಷ್ ರಂಗನಾಥ್,ರಾಘವೇಂದ್ರ, ಹೇಮಂತ್, ಪಟಾಕಿಶಿವಣ್ಣ, ದಯಾನಂದ್,ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪಿಎಸೈ ಪ್ರವೀಣ್ ಕುಮಾರ್ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ