ಹುಳಿಯಾರು ಹೋಬಳಿಯಾದ್ಯಂತ ಈಗಾಗಲೇ ಹೆಸರುಕಾಯಿ ಒಣಗಿದ್ದು ರೈತರು ಹೆಸರುಕಾಯಿಯನ್ನು ಬಿಡಿಸಲು ತೊಡಗಿಕೊಂಡಿದ್ದಾರೆ. ಆದರೆ ಮೊಡಮುಸುಕಿದ ವಾತಾವರಣ ಹಾಗೂ ಸೊನೆಮಳೆ ಹೆಸರುಕಾಯಿ ಕೊಯ್ಲಿಗೆ ಅಡ್ಡಿಯುಂಟುಮಾಡಿ ರೈತರಲ್ಲಿ ಆತಂಕಕ್ಕೀಡು ಮಾಡಿದೆ.
ಹುಳಿಯಾರು ಹೋಬಳಿಯ ದೊಡ್ಡಬಿದರೆಯಲ್ಲಿ ಹೊಲದಿಂದ ಬಿಡಿಸಿ ತಂದ ಒಣಗಿದ ಹೆಸರುಕಾಯಿಯನ್ನು ರಸ್ತೆಯಲ್ಲಿ ಹಾಕಿಕೊಂಡು ಹೆಸರುಕಾಳು ಬೇರ್ಪಡಿಸುತ್ತಿರುವುದು. |
ಬಲಿತ ಹೆಸರುಕಾಯಿ ಗಿಡದಲ್ಲೇ ಒಣಗಿದ್ದು ಬಿಡಿಸುವುದು ಮಾತ್ರ ಬಾಕಿ ಉಳಿದಿದೆ. ಕೆಲ ರೈತರು ತಮ್ಮ ಹೊಲದಲ್ಲೇ ಕಾಯಿಯನ್ನು ಬಿಡಿಸಿ ಹೆಸರುಕಾಳು ಸಂಗ್ರಹಿಸಲು ಮುಂದಾದರೆ ಮತ್ತೆಕೆಲವರು ಗಿಡಗಳನ್ನೇ ಕಿತ್ತು ಮನೆಯಲ್ಲಿಗೆ ತಂದು ಹಾಕಿಕೊಂಡು ಹೆಸರುಕಾಳು ಬೇರ್ಪಡಿಸುವಲ್ಲಿ ತೊಡಗಿಕೊಂಡಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ರೈತರು ಈಗಾಗಲೇ ಹೆಸರುಕಾಯಿ ಬಿಡಿಸಿ ಮಾರುಕಟ್ಟೆಗೆ ಹಾಕಿದ್ದರೆ. ಪೂರ್ವಮುಂಗಾರಿನ ನಂತರ ಬಿತ್ತನೆ ಮಾಡಿದ ಹೊಲಗಳಲ್ಲಿ ಹೆಸರುಕಾಯಿ ಒಣಗಿದ್ದು ಬಿಡಿಸಬೇಕಿದೆ. ಸರಿಯಾಗಿ ಬಿಸಿಲಿಲ್ಲ, ಸೊನೆಮಳೆ ಬರುತ್ತಿದೆ ಈಗ ಕಾಯಿಬಿಡಿಸಿದರೆ ಹೆಸರುಕಾಳನ್ನು ಹೇಗೆ ಬೆರ್ಪಡಿಸುವುದು ಎಂಬ ಆತಂಕದಲ್ಲಿ ರೈತರಿದ್ದಾರೆ.
ಒಣಗಿದ ಹೆಸರುಕಾಯಿ ಮಳೆಗೆನಾದರೂ ಸಿಕ್ಕಿದರೆ ಹೆಸರು ಮೊಳಕೆ ಬರುತ್ತದಲ್ಲದೆ ಕಾಳು ಕಪ್ಪಾಗಿ ಮಾರಲು ಹೋದರೆ ಅಂಗಡಿಯವರು ಕಡಿಮೆ ಬೆಲೆ ಹೇಳುತ್ತಾರೆ. ಮಳೆ ಬರುವುದರೊಳಗಾಗಿ ಕಾಯಿಬಿಡಿಸೋಣವೆಂದರೆ ಆಳುಗಳೇ ಸಿಗುತ್ತಿಲ್ಲ. ಉತ್ತಮ ಫಸಲೇನೋ ಬಂದಿದೆ ಆದರೆ ಈಗ ಮಳೆ ಬಂದರೆ ಏನು ಮಾಡೋದು ಎಂಬ ಚಿಂತೆ ಕಾಡುತ್ತಿದೆ ಎನ್ನುತ್ತಾರೆ ರೈತ ಮರುಳಯ್ಯ.
ಸದ್ಯ ಹೆಸರುಕಾಯಿ ಬಿಡಿಸುವವಲ್ಲಿ ರೈತರು ತೊಡಗಿದ್ದು ಇನ್ನೊಂದು ವಾರ ಮಳೆಬಾರದೆ ಬಿಸಿಲಿನ ವಾತಾವರಣ ವಿದ್ದರೆ ಸಾಕು ಹೆಸರನ್ನು ಸಂಪೂರ್ಣವಾಗಿ ಬಿಡಿಸಿ ಹೆಸರುಕಾಳನ್ನು ಸಂಗ್ರಹಿಸಲು ಸಹಕಾರಿಯಾಗಲಿದೆ ಎಂಬುದು ರೈತರ ಅಶಯ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ