ಹುಳಿಯಾರು-ಶಿರಾ ರಸ್ತೆ : ಬಲಿಗಾಗಿ ಬಾಯ್ತೆರದು ನಿಂತ ಗುಂಡಿಗಳು ಅವಧಿ ಮುಗಿದರೂ ಪ್ರಾರಂಭವಾಗದ ಹೆದ್ದಾರಿ ಕಾಮಗಾರಿ ಪ್ರತಿಭಟನೆಗೆ ಕಿಂಚಿತ್ತು ಗಮನಗೊಡದ ಅಧಿಕಾರಿ ವರ್ಗ
ವರದಿ:ಡಿ.ಆರ್.ನರೇಂದ್ರಬಾಬು
ಹುಳಿಯಾರು : ಕಾನೂನು ಸಚಿವರ ಕ್ಷೇತ್ರವಾಗಿರುವ ಶಿರಾ ಹಾಗೂ ಹುಳಿಯಾರು ನಡುವಿನ ಮಾರ್ಗ ಹದಗೆಟ್ಟಿದ್ದು, ರಸ್ತೆಯಲ್ಲಿ ಆಳುದ್ದ ಗುಂಡಿಗಳು ಬಿದ್ದು ದಿನಗರುಳುತ್ತಿವೇ ಹೊರತು ಯಾವುದೇ ದುರಸ್ಥಿಯಾಗದೆಯಿದ್ದು, ಯಾವಾಗ ಏನಾಗುತ್ತದೋ ಎಂಬಂತಾಗಿ, ಇಲ್ಲಿ ಸಂಚರಿಸುವವವರು ಜೀವದ ಆಸೆ ತೊರೆದು ಸಂಚರಿಸುವಂತಾಗಿದೆ. ರಸ್ತೆಯಲ್ಲಿನ ಗುಂಡಿಗಳನ್ನಾದರೂ ಮುಚ್ಚಿ ಸಂಚಾರಕ್ಕೆ ಯೋಗ್ಯ ಮಾಡಿಕೊಡಿ ಎಂದು ಈ ಮಾರ್ಗದ ಸಾರ್ವಜನಿಕರು ಎಷ್ಟೇ ಬಾರಿ ಪ್ರತಿಭಟನೆ ಮಾಡಿದರೂ ಸಹ ಈ ಬಗ್ಗೆ ಅಧಿಕಾರಿಗಳು ಕಿವಿಗೊಡದೆ ಮೌನವಾಗಿದ್ದು ಸಾರ್ವಜನಿಕರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದ್ದಾರೆ.
ಹುಳಿಯಾರು-ಶಿರಾ ಮಾರ್ಗದಲ್ಲಿ ಹದಗೆಟ್ಟಿರುವ ರಸ್ತೆ . |
ಹುಳಿಯಾರು-ಶಿರಾ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ೨೩೪ ಆಗಿ ಮೇಲ್ದರ್ಜೆಗೇರಿಸಿದ್ದು ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಿಕೊಡಲಾಗಿದೆ. ಈಗಾಗಲೇ ರಸ್ತೆ ಕಾಮಗಾರಿಗಾಗಿ ೨೦೧೦ರಲ್ಲೇ ಟೆಂಡರ್ ಸಹ ಕರೆದು ೮-೧೦ಪ್ಯಾಕೇಜ್ ನಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದು ಕೆಲವೆಡೆ ಮಾತ್ರ ರಸ್ತೆ ಕೆಲಸ ಸಾಗುತ್ತಿದೆ. ಆದರೆ ಶಿರಾ-ಹುಳಿಯಾರು- ಬಾಣಾವರ ನಡುವಿನ ರಸ್ತೆ ಮಾರ್ಗದಲ್ಲಿ ಕಾಮಗಾರಿ ಕುಂಟುತ್ತಾ ಸಾಗಿದೆ. ಈ ಮಾರ್ಗದಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ರಸ್ತೆ ಮಾಡುವುದಾಗಿ ಬಂದವರು ರಸ್ತೆ ಬದಿಯಲ್ಲಿನ ಬೃಹತ್ ಮರಗಳನ್ನು ತುಂಡರಿಸಿ ಸಾಗಿಸಿದರಲ್ಲದೆ, ಕೆಲ ಸೇತುವೆಗಳನ್ನು ಕಿತ್ತು ಅದನ್ನು ಅರ್ಧಂಬರ್ಧ ಕೆಲಸ ಮಾಡಿದ್ದು ಬಿಟ್ಟರೆ ರಸ್ತೆ ಕಾರ್ಯಕ್ಕೆ ಕೈ ಹಾಕದೆ ಸುಮ್ಮನಾಗಿದ್ದಾರೆ.
ಹುಳಿಯಾರು-ಶಿರಾ ನಡುವಿನ ೪೭ ಕಿ.ಮೀ ರಸ್ತೆಯನ್ನು ಹಾಗೂ ಹುಳಿಯಾರು-ಬಾಣಾವರ ನಡುವಿನ ೪೮ ಕಿ.ಮೀ ರಸ್ತೆಯ ಕಾಮಗಾರಿಗೆ ಹೈದರಾಬಾದಿನ ಎ.ಎಸ್.ಐ.ಪಿ ಎಂಬ ಕಂಪನಿಗೆ ೨೦೧೨ರಲ್ಲಿ ಗುತ್ತಿಗೆ ನೀಡಲಾಗಿತ್ತು. ಆದರೆ ವರ್ಷಗಳುರುಳಿ ನಿಗದಿತ ಅವಧಿ ಮುಗಿದರೂ ಸಹ ಗುತ್ತಿಗೆ ಪಡೆದ ಕಂಪನಿ ರಸ್ತೆ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪ್ರಾರಂಭಿಸದ ಹಿನ್ನಲೆಯಲ್ಲಿ ಆ ಕಂಪನಿ ಪಡೆದಿದ್ದ ಗುತ್ತಿಗೆಯನ್ನು ಇಲಾಖೆ ರದ್ದುಗೊಳಿಸಿದ್ದು ರಸ್ತೆ ಕಾಮಗಾರಿ ಕಾರ್ಯ ಸ್ಥಗಿತಗೊಳ್ಳುವಂತಾಗಿದೆ.
ರಸ್ತೆ ಕಾರ್ಯ ಮಾಡಲು ಬಂದವರು ರಸ್ತೆ ಬದಿಯಲ್ಲಿನ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ, ಮರಗಳನ್ನು ಕಡಿದಿದ್ದಾರೆ, ಸೇತುವೆಗೆಗಳನ್ನು ಕಿತ್ತು ಪೈಪ್ ಜೋಡಿಸಿದ್ದಾರೆ ಇಷ್ಟು ಬಿಟ್ಟರೆ ಯಾವುದೇ ಪ್ರಗತಿಯಾಗದ ರಸ್ತೆ ಕಾಮಗಾರಿಗೆ ಮತ್ತೆ ಹೊಸದಾಗಿ ಟೆಂಡರ್ ಕರೆಯಬೇಕಿದೆ. ಇಷ್ಟರ ಮಧ್ಯೆ ರಸ್ತೆಯೆಲ್ಲಾ ಪೂರ್ಣ ಹಾಳಾಗಿದ್ದು ಸಂಚಾರಕ್ಕೆ ದುಸ್ಥರವಾಗಿದೆ. ಹೆದ್ದಾರಿ ಆಗದಿದ್ದರೂ ಪರವಾಗಿಲ್ಲ ಗುಂಡಿಯನ್ನಾದರೂ ಮುಚ್ಚಿ ಸಂಚಾರಕ್ಕೆ ಅನುವು ಮಾಡಿ ಕೊಡಿ ಎಂಬುದು ಸಾರ್ವಜನಿಕರ ಕೋರಿಕೆಯಾಗಿದೆ.
ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಹೊಯ್ಸಳಕಟ್ಟೆ ಗೇಟ್ ನಲ್ಲಿ ಕಳೆದ ಸೋಮವಾರದಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಯ ದೃಶ್ಯ. |
ಈಗಾಗಲೇ ಲೋಕೋಪಯೋಗಿಇಲಾಖೆಯಿಂದ ಹೆದ್ದಾರಿಗೆ ಹಸ್ತಾಂತರವಾಗಿರುವುದರಿಂದ ರಸ್ತೆ ಗುಂಡಿ ಮುಚ್ಚಲು ಲೋಕೋಪಯೋಗಿಇಲಾಖೆಯೂ ಮುಂದೆ ಬರುತ್ತಿಲ್ಲ, ಹೊಸದಾಗಿ ಟೆಂಡರ್ ಕರೆಯದ ಹೊರತು ರಾ.ಹೆ.ಪ್ರಾ. ರಿಪೇರಿಗೆ ಮುಂದಾಗುವಂತಿಲ್ಲ.
ಮೌನವಹಿಸಿದ ಇಲಾಖೆ : ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದ ನಂತರ ರಸ್ತೆಯ ಸಂಪೂರ್ಣ ನಿರ್ವಹಣೆಯ ಹೊಣೆ ಹೊತ್ತಿರುವ ಕೇಂದ್ರ ಭೂ ಸಾರಿಗೆ ಇಲಾಖೆ ಅಧಿಕಾರಿಗಳು ಮೌನವಹಿಸಿದ್ದಾರೆ. ಸ್ಥಳಿಯ ಪಿಡಬ್ಯೂಡಿ ಅವರು ತಮಗೂ ಇದಕ್ಕೂ ಏನು ಸಂಬಂಧವಿಲ್ಲವೆಂದು , ಕೇಂದ್ರ ಭೂ ಸಾರಿಗೆ ಇಲಾಖೆ ಕಡೆ ಬೆರಳು ಮಾಡುತ್ತಾರೆ. ಶಿರಾ-ಹುಳಿಯಾರು-ಬಾಣಾವರ ನಡುವಿನ ರಸ್ತೆ ಕಾಮಗಾರಿಯ ಗುತ್ತಿಗೆ ರದ್ದಾಗಿ ವರ್ಷಗಳು ಉರುಳುತ್ತಾ ಬಂದಿದ್ದರೂ ಸಹ ಇದುವರೆಗೂ ಹೊಸ ಟೆಂಡರ್ ಕರೆಯುವುದಾಗಿ ಹೇಳುತ್ತಿದ್ದಾರೆ ಹೊರತು ಟೆಂಡರ್ ಕರೆಯುವಲ್ಲಿ ಸಫಲರಾಗಿಲ್ಲ. ಹೊಸ ಟೆಂಡರ್ ಆಗುವವರೆಗಾದರೂ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡೋಣ ಎನ್ನುವ ಯೋಚನೆಯನ್ನು ಮಾಡದೆಯಿದ್ದು ಪ್ರತಿನಿತ್ಯ ಇಲ್ಲಿ ಸಂಚರಿಸುವ ಜನರ ಪ್ರಾಣದೊಂದಿಗೆ ಚಲ್ಲಾಟವಾಡುತ್ತಿದ್ದಾರೆ.
ಸ್ತಬ್ಧವಾದ ಜನಪ್ರತಿನಿಧಿಗಳು ; ಹುಳಿಯಾರು-ಶಿರಾ ನಡುವೆ ನಿತ್ಯ ಹತ್ತಾರೂ ವಾಹನಗಳು ಸಂಚರಿಸುತ್ತವೆ ಜೊತೆಗೆ ಶಾಲಾ ವಿದ್ಯಾರ್ಥಿಗಳು ಸಹ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಹಾಲಿ ಇರುವ ರಸ್ತೆ ಗುಂಡಿಗಳಿಂದ ಆವೃತವಾಗಿದ್ದು ರಸ್ತೆಯಾವುದು ಎಂಬು ಹುಡುಕಿಕೊಂಡು ವಾಹನ ಸಂಚರಿಸುವಂತಾಗಿದೆ. ರಸ್ತೆ ಬಿಟ್ಟು ಬದಿಯಲ್ಲಿ ವಾಹನ ಹೋಗುವಂತಾಗಿದ್ದು ಪ್ರತಿನಿತ್ಯ ಒಂದಲ್ಲಒಂದು ಅವಘಡ ಸಂಬವಿಸುತ್ತಿದೆಂದು ಈ ಭಾಗದ ಶಾಸಕರು,ಸಂಸದರ ಗಮನಕ್ಕೆ ತಂದಿದ್ದರೂ ಸಹ ಅವರು ಸಹ ಯಾವುದೇ ಕಾರ್ಯ ಮಾಡಲು ಮುಂದಾಗದೆಯಿದ್ದು ಸ್ತಬ್ಧರಾಗಿದ್ದಾರೆ.
ಆಹೋರಾತ್ರಿ ಧರಣಿ : ಇಲಾಖೆಗಳ ಮೌನದಿಂದ ರೊಚ್ಚಿಗೆದ್ದಿರುವ ಜನತೆ ಕಡೆಯದಾಗಿ ಅಹೋರಾತ್ರಿ ಧರಣಿಯ ಅಸ್ತ್ರ ಹೂಡಿದ್ದು ತಮ್ಮ ಬೇಡಿಕೆ ಈಡೇರುವವರೆಗೂ ತಮ್ಮ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ.
---------------------------------
ಎನ್.ಹೆಚ್. ೨೩೪ ರ ಹುಳಿಯಾರು-ಶಿರಾ ಸೆಕ್ಷನ್ ೨೪೩.೩ ಕಿಮೀ ನಿಂದ ೨೯೦ ಕಿಮೀವರೆಗೆ ೪೭ ಕಿಮೀದೂರದ ದ್ವಿಪಥದ ಹೆದ್ದಾರಿ ಅಗಲಿಕರಣಕ್ಕೆ ೨೦೧೧ ನವಂಬರ್ ನಲ್ಲಿ ೧೨೪.೫ ಕೋಟಿಗೆ ಟೆಂಡರ್ ಕರೆಯಲಾಗಿದ್ದು ಹೈದರಾಬಾದಿನ ಎ.ಎಸ್.ಐ.ಪಿ ಪ್ರವೈಟ್ ಲಿಮಿಟೆಡ್ ಕಾಂಟ್ರ್ಯಾಕ್ಟ್ ಪಡೆದಿತ್ತು. ೩೧.೦೭.೨೦೧೨ ಕ್ಕೆ ಪ್ರಾರಂಭಿಸಿ ೩೧.೦೭.೨೦೧೪ಕ್ಕೆ ೨ ವರ್ಷಗಳಲ್ಲಿ ಕಾಮಗಾರಿ ಪೂರೈಸಬೇಕಿತ್ತು. ವಿದ್ಯುತ್ ಕಂಬಗಳ ಸ್ಥಳಾಂತರ , ಪೈಪ್ ಲೈನ್ ಗಳ ಸ್ಥಳಾಂತರ, ರಸ್ತೆ ಬದಿ ಮರಗಳ ತೆರವು ಮಾಡಿದ ಕಂಪನಿ ನಂತರ ಇತ್ತ ತಿರುಗಿ ನೋಡಿಲ್ಲ. ಇಲಾಖೆ ಸಾಕಷ್ಟು ನೋಟಿಸ್ ನೀಡಿದ್ದರೂ ಯಾವುದಕ್ಕೂ ಸ್ಪಂದಿಸಿಲ್ಲ. ಕಾಂಟ್ರ್ಯಾಕ್ಟ್ ಉಲ್ಲಂಘನೆಯಾಗಿರುವುದರಿಂದ ಹೊಸದಾಗಿ ಟೆಂಡರ್ ಕರೆಯಬೇಕಿದೆ.
------------------------------
ಎನ್.ಹೆಚ್.೨೩೪ ಕರ್ನಾಟಕದ ಮಂಗಳೂರಿನಿಂದ ಆರಂಭಗೊಳ್ಳುವ ಈ ಹೆದ್ದಾರಿ ಬಿ.ಸಿ.ರೋಡ್ - ಕೊಟ್ಟಿಗೆಹಾರ-ಮೂಡಿಗೆರೆ-ಬೇಲೂರು-ಹುಳಿಯಾರು- ಶಿರಾ-ಮಧುಗಿರಿ-ಚಿಂತಾಮಣಿ ಮೂಲಕ ಆಂಧ್ರಪ್ರದೇಶ ಮಾರ್ಗವಾಗಿ ಹಾಗೂ ತಮಿಳುನಾಡಿನ ಪೆರ್ನುಂಪೇಟೆ-ಕಾಟ್ಪಾಡಿ-ವೆಲ್ಲೂರು-ತಿರುವಣ್ಣಾಮಲೈ ಮೂಲಕ ವಿಲ್ಲುಪುರಂಗೆ ಸಂಪರ್ಕಿಸಲಿದೆ. ಒಟ್ಟು ೭೮೦ ಕಿ.ಮೀ ಉದ್ದದ ಹೆದ್ದಾರಿ ಇದಾಗಿದ್ದು ಇದರಲ್ಲಿ ಹುಳಿಯಾರು-ಶಿರಾ ಮಾರ್ಗವಾಗಿ ೪೭ ಕಿ.ಮೀ ಹಾದುಗೋಗಲಿದೆ. ಸದ್ಯ ಲೋಕೋಪಯೋಗಿ ಇಲಾಖೆಯಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರವಾಗಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ