ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲೆಯಲ್ಲೇ ಹೆಚ್ಚು ಗ್ರಾ.ಪಂ.ಸದಸ್ಯರನ್ನು ಹೊಂದಿರುವ ಹಗ್ಗಳಿಕೆಯ ಹುಳಿಯಾರು ಗ್ರಾಮಪಂಚಾಯ್ತಿಯ ನೂತನ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ಇಂದು(ತಾ.೩) ಶುಕ್ರವಾರ ನಡೆಯಲಿದೆ.
ಇಲ್ಲಿನ ಗ್ರಾ.ಪಂ.ಯಲ್ಲಿ ಬರೋಬರಿ ೩೯ ಸದಸ್ಯರಿದ್ದು ಗ್ರಾ.ಪಂ. ಅಧ್ಯಕ್ಷರ ಚುನಾವಣೆ ಯಾವುದೇ ಎಂಎಲ್ ಎ ಚುನಾವಣೆಗಿಂತ ಕಡಿಮೆಯಿಲ್ಲದಂತೆ ಚುನಾವಣೆಯ ಕಡೆ ನಿಮಿಷದವರೆಗೂ ಸಿನಿಮಯ ರೀತಿಯಲ್ಲಿ ಕುತೂಹಲ ಹಿಡಿದಿಡುವುದು ಸಾಮಾನ್ಯ. ಯಾರುಯಾರು ನಾಮಪತ್ರ ಸಲ್ಲಿಸುತ್ತಾರೆ, ಯಾರು ಗೆಲ್ಲುತ್ತಾರೆ , ಯಾರು ಯಾರ ಬೆಂಬಲಕ್ಕೆ ನಿಲ್ಲುತ್ತಾರೆ , ಅವಿರೋಧ ಆಯ್ಕೆಯಾಗುತ್ತದೋ ಅಥವಾ ಚುನಾವಣೆ ನಡೆಯುತ್ತದೋ ಎಂಬ ಹತ್ತಾರೂ ಕುತೂಹಲಗಳಿಂದ ಸಾಗಿದ್ದು, ಸಾರ್ವಜನಿಕರ ಅಷ್ಟು ದಿನಗಳ ಕುತೂಹಲಕ್ಕೆ ಇಂದು ತೆರೆಬೀಳಲಿದೆ.
ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಬರುತ್ತದೆಂಬ ಸಾಕಷ್ಟು ಮಂದಿ ಪುರುಷ ಸದಸ್ಯರು ನಿರೀಕ್ಷಿಸಿ ಸಜ್ಜಾಗಿದ್ದರು. ಆದರೆ ಮೀಸಲಾತಿಯಲ್ಲಿ ಎಲ್ಲರ ನಿರೀಕ್ಷೆ ಹುಸಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಗೆ ಘೋಷಣೆಯಾಗಿದ್ದು ಪುರುಷ ಅಭ್ಯರ್ಥಿಗಳಲ್ಲಿ ನಿರಾಸೆಗೆ ಕಾರಣವಾಗಿತ್ತು. ಸದ್ಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟಜಾತಿಗೆ ಘೋಷಣೆಯಾಗಿ ಆಕಾಂಕ್ಷಿಗಳು ಅಂದಿನಿಂದಲೂ ತಮ್ಮ ಬೆಂಬಲಿಗರ ಬಲವನ್ನು ಇಮ್ಮಡಿಗೊಳಿಸಿಕೊಳ್ಳಲು ನಾನಾ ಕಸರತ್ತಿಗೆ ಮುಂದಾಗಿದ್ದರು. ಶಾಸಕ ಸಿ.ಬಿ.ಸುರೇಶ್ ಬಾಬು ಸಹ ಕಣಕ್ಕಿಳಿದಿದ್ದರಿಂದ ಜೆಡಿಎಸ್ ಬೆಂಬಲಿತರ ಸಂಖ್ಯೆ ಹೆಚ್ಚಾಗಿ ಎಲ್ಲರೂ ಮೈಸೂರು,ಮಡಕೇರಿ ಕಡೆ ಪ್ರವಾಸ ಸಹ ಹೋಗಿದ್ದರು. ಅಧ್ಯಕ್ಷರ ಆಯ್ಕೆಯ ದಿನಾಂಕ ವಿಳಂಬವಾದ ಕಾರಣ ಪ್ರವಾಸವನ್ನು ಮೊಟುಕುಗೊಳಿಸಿ ವಾಪಸ್ಸ್ ಊರಿಗೆ ಬಂದಿದ್ದು, ನಂತರ ಮತ್ತೆ ಪ್ರವಾಸಕ್ಕೆ ತೆರಳಿದ್ದರು.
ಸದ್ಯ ಪಂಚಾಯ್ತಿಯಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರ ಸಂಖ್ಯೆಯೇ ಹೆಚ್ಚಿದ್ದು ಅವರುಗಳಲ್ಲೇ ಅಧಿಕಾರ ಹಂಚಿಕೆಯ ಮಾತುಕತೆಯಾದ್ದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಅವಿರೋಧಆಯ್ಕೆ ಆಗುವ ಸಂಭವ ಹೆಚ್ಚಿದೆ. ಜೆಡಿಎಸ್ ಬೆಂಬಲಿತ ಗೀತಾಪ್ರದೀಪ್ ಮೊದಲ ಅವಧಿಯ ಅಧ್ಯಕ್ಷರಾಗಿ ನಂತರ ಬೇರೊಬ್ಬರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲಿದ್ದಾರೆ . ಅದೇ ರೀತಿ ಉಪಾಧ್ಯಕ್ಷ ಸ್ಥಾನ ಗಣೇಶ್ ಮೊದಲನೇ ಅವಧಿಗೆ ಅಧಿಕಾರ ಹಿಡಿಯಲಿದ್ದು ನಂತರ ಬೇರೆಯವರಿಗೆ ಬಿಟ್ಟುಕೊಡಲಿದ್ದಾರೆ ಎಂಬ ಮಾತು ಸಹ ಕೇಳಿಬಂದಿದೆ.
ಅಧಿಕಾರ ವಿಕೇಂದ್ರೀಕರಣ ಎಂಬ ಗ್ರಾ.ಪಂ. ತತ್ವವನ್ನೇ ಅಣುಕಿಸುವ ರೀತಿಯಲ್ಲಿ ಅಧಿಕಾರ ಹಂಚಿಕೆ ಮೂಲಕ ಹುದ್ದೆ ಹಿಡಿಯಲಿರುವ ಆಕಾಂಕ್ಷಿಗಳು ನಂತರವಾದರೂ ಅಭಿವೃದ್ದಿಗೆ ಒತ್ತುನೀಡಲಿ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ