ಶಿರಾ-ಹುಳಿಯಾರು ನಡುವಿನ ರಸ್ತೆ ಹದಗೆಟ್ಟಿದ್ದು, ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ಕಳೆದ ಸೋಮವಾರದಿಂದ ಹೊಯ್ಸಳಕಟ್ಟೆ ಗೇಟ್ ನಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿಗೆ ಸಚಿವ ಜಯಚಂದ್ರ ಹಾಗೂ ಸಂಸದ ಮುದ್ದಹನುಮೇ ಗೌಡ, ಶಾಸಕ ಸುರೇಶ್ ಬಾಬು ಅವರುಗಳು ಭರವಸೆ ನೀಡುವ ಮೂಲಕ ತಿಲಾಂಜಲಿ ಹಾಡಿದರು.
ಹುಳಿಯಾರು-ಶಿರಾ ನಡುವಿನ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸುವಂತೆ ಹೊಯ್ಸಳಕಟ್ಟೆ ಗೇಟ್ ನಲ್ಲಿ ನಡೆಯುತ್ತಿದ್ದ ಅಹೋರಾತ್ರಿಧರಣಿ ಸ್ಥಳಕ್ಕೆ ಭೇಟಿ ನೀಡ ಸಚಿವ ಜಯಚಂದ್ರ, ಸಂಸದ ಮುದ್ದಹನುಮೇಗೌಡ, ಶಾಸಕ ಸುರೇಶ್ ಬಾಬು ಧರಣಿನಿರತರೊಂದಿಗೆ ಚರ್ಚಿಸಿದರು.
|
ಹುಳಿಯಾರು-ಶಿರಾ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ೨೩೪ ಆಗಿ ಮೇಲ್ದರ್ಜೆಗೇರಿಸಿದ್ದು ಹೆದ್ದಾರಿ ಕಾಮಗಾರಿ ನಡೆಯದೆ ರಸ್ತೆ ತುಂಬೆಲ್ಲಾ ಆಳುದ್ದ ಗುಂಡಿಗಳು ಬಿದ್ದು ಸಂಚಾರ ದುಸ್ತರವಾಗಿದೆ ಎಂದು ಈ ಭಾಗದ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಯವರು, ಜನಪ್ರತಿನಿಧಿಗಳು ಆಹೋರಾತ್ರಿ ಧರಣಿ ನಡೆಸುತ್ತಿದ್ದರು.ಧರಣಿ ವಿಷಯ ತಿಳಿದು ಶನಿವಾರದಂದು ಸ್ಥಳಕ್ಕಾಗಮಿಸಿದ ಸಚಿವರು, ಸಂಸದರು ಹಾಗೂ ಶಾಸಕರು ಧರಣಿನಿರತರ ಸಮಸ್ಯೆಯನ್ನು ಆಲಿಸಿ, ಧರಣಿನಿರತರ ಮನೋಲಿಸಿ ಧರಣಿ ಹಿಂಪಡೆಯುವಂತೆ ಮಾಡಿದರು.
ಸಮಸ್ಯೆ ಬಗ್ಗೆ ತಿಳಿದ ಸಚಿವ ಜಯಚಂದ್ರ ಮಾತನಾಡಿ ಹುಳಿಯಾರು-ಶಿರಾ ಹೆದ್ದಾರಿಯ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಎ.ಎಸ್.ಐ.ಪಿ ಕಂಪನಿ ನಿಗಧಿತ ಸಮಯದಲ್ಲಿ ಕೆಲಸ ಮಾಡದ ಹಿನ್ನಲೆಯಲ್ಲಿ ಆ ಕಂಪನಿ ಪಡೆದಿದ್ದ ಗುತ್ತಿಗೆ ರದ್ದಾಗಿದ್ದು, ಹೊಸ ಟೆಂಡರ್ ಕರೆಯಲು ಈಗಾಗಲೇ ಪ್ರಕ್ರಿಯೆ ನಡೆಯುತ್ತಿದೆ ಎಂದರು. ಈ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಿರುವುದರಿಂದ ಯಾವುದೇ ಕಾಮಗಾರಿ ನಡೆಯಬೇಕೆಂದರೆ ಕೇಂದ್ರದಿಂದಲೇ ಹಣ ಮಂಜೂರಾಗಿ ಬರಬೇಕು. ಸದ್ಯ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಎರಡೂವರೆಕೋಟಿ ಮಂಜೂರಾತಿ ಮಾಡಿಸಿದ್ದು ಇನ್ನೂ ೨೦ ದಿನದಲ್ಲಿ ಗುಂಡಿಮುಚ್ಚಿಸಲು ಟೆಂಡರ್ ಕರೆದು ರಸ್ತೆಯಲ್ಲಿನ ಗುಂಡಿಮುಚ್ಚುವ ಕಾರ್ಯ ನಡೆಯಲಿದೆ ಎಂದು ದೃಢ ಭರವಸೆ ನೀಡಿದರು.
ಸಂಸದ ಮುದ್ದಹನುಮೇಗೌಡ ಮಾತನಾಡಿ, ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಧರಣಿ ಪ್ರಾರಂಭದ ದಿನವೇ ತಮಗೆ ವಿಷಯ ತಿಳಿಸಿದ್ದು ಅದಕ್ಕೆ ಸಂಬಂಧಪಟ್ಟ ಪ್ರಕ್ರಿಯೆ ಸಹ ನಡೆದಿದ್ದು, ಹೆದ್ದಾರಿ ಪ್ರಾಧಿಕಾರಕ್ಕೆ ಈಗಾಗಲೇ ಕಡತಗಳನ್ನು ಸಲ್ಲಿಸಿದ್ದೇವೆ. ಶೀಘ್ರವೇ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸುವುದಲ್ಲದೆ, ಹೆದ್ದಾರಿಕಾಮಗಾರಿಯೂ ನಡೆಯಲಿದೆ ಎಂದರು.
ಸಚಿವರ, ಸಂಸದ ಹಾಗೂ ಶಾಸಕರ ಮಾತಿಗೆ ಮಣಿದ ಧರಣಿನಿರತರು ತಮ್ಮ ಅಹೋರಾತ್ರಿ ಧರಣಿಯನ್ನು ವಾಪಸ್ಸ್ ಪಡೆದರಲ್ಲದೆ, ಆಗಸ್ಟ್ ೧೫ರೊಳಗೆ ಗುಂಡಿಮುಚ್ಚಿಸುವ ಕಾರ್ಯ ನಡೆಯದಿದ್ದರೆ, ಆ.೧೬ರಂದು ಹೊಯ್ಸಳಕಟ್ಟೆ ಗೇಟ್ ನಲ್ಲಿ ರಸ್ತೆ ತಡೆ ಹಾಗೂ ಆ.೧೭ರಂದು ಸಚಿವರ, ಸಂಸದರ ಹಾಗೂ ಶಾಸಕರ ಮನೆ ಮುಂದೆ ಉಗ್ರಪ್ರತಿಭಟನೆ ಮಾಡುವುದಾಗಿ ಪ್ರತಿಭಟನಾ ನಿರತ ದಬ್ಬಗುಂಟೆ ರವಿಕುಮಾರ್, ರೈತಸಂಘದ ಸತೀಶ್ ಎಚ್ಚರಿಸಿದ್ದಾರೆ. ಈ ವೇಳೆ ವಿವಿಧ ಸಂಘ ಸಂಸ್ಥೆಯವರು ಸೇರಿದಂತೆ ಸಾವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ