ಹುಳಿಯಾರು ಪಟ್ಟಣದಲ್ಲಿ ದಿನೇದಿನೆ ನೀರಿನ ಸಮಸ್ಯೆ, ಸ್ವಚ್ಚತೆ ಸಮಸ್ಯೆ ತಲೆದೋರಿದ್ದು ಈ ಬಗ್ಗೆ ಗಮನಹರಿಸಿ ಪರಿಹರಿಸಬೇಕಾಗಿದ್ದ ಪಿಡಿಓನೇ ಎರಡು ತಿಂಗಳು ರಜೆ ಹಾಕಿ ಹೋಗಿರುವುದು ಸಮಸ್ಯೆಯ ತೀವ್ರತೆಗೆ ಕಾರಣವಾಗಿದೆ.
ಹುಳಿಯಾರು ಗ್ರಾಮ ಪಂಚಾಯ್ತಿಗೆ ಪಿಡಿಓ ಹುದ್ದೆ ಖಾಲಿಬಿದ್ದು ವರ್ಷಗಳೆ ಕಳೆದರೂ ಸಹ ಈ ಬಗ್ಗೆ ಗಮನಹರಿಸದೆ ಹಾಲಿ ಕಾರ್ಯದರ್ಶಿಯಾದ ಅಡವೀಶ್ ಕುಮಾರ್ ಅವರನ್ನೇ ಪ್ರಭಾರಿಯಾಗಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿತ್ತು. ಸದ್ಯ ಪಂಚಾಯ್ತಿಗೆ ಸದಸ್ಯರ ಚುನಾವಣೆ ನಡೆದು ತಿಂಗಳಾಗಿದ್ದು , ಅಧ್ಯಕ್ಷರ , ಉಪಾಧ್ಯಕ್ಷರ ಚುನಾವಣೆ ನಡೆದು ಹತ್ತು ದಿನಗಳು ಸಾಗಿದ್ದು ಹೊಸ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆದು ಹೊಸ ಸದಸ್ಯರ ಕಾರ್ಯನಿರ್ವಹಣೆ ಯೋಜನೆಗಳ ಬಗ್ಗೆ ವಿವರಣೆ ನೀಡಬೇಕಾಗಿದ್ದ ಪಿಡಿಓಗೆ ರಜೆ ಮೇಲೆ ಕಳುಹಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಪಟ್ಟಣದಲ್ಲಿ ಕುಡಿಯುವ ನೀರಿನ ಪೂರೈಕೆಯ ಮೋಟರ್ ಕೆಟ್ಟಿದ್ದು ಅದನ್ನು ದುರಸ್ಥಿ ಮಾಡಿಸಲು ಹಣ ನೀಡುವರಿಲ್ಲದೆ ತಮ್ಮ ಹಣದಲ್ಲೇ ರಿಪೇರಿ ಮಾಡಿಸುವಂತಾಗಿದೆ. ಅಲ್ಲದೆ ತಂತಮ್ಮ ವಾರ್ಡ್ ನ ತುರ್ತು ಸಮಸ್ಯೆ ಬಗೆಹರಿಸಲು ಕೆಲ ಸದಸ್ಯರು ತಮ್ಮ ಹಣವನ್ನೇ ಖರ್ಚು ಮಾಡಿ ಕಾಮಗಾರಿಗೆ ಮುಂದಾಗಿದ್ದು ಪಂಚಾಯ್ತಿಯಲ್ಲಿ ಹಣವಿಲ್ಲವೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಪಂಚಾಯ್ತಿಯಲ್ಲಿ ಅವಶ್ಯ ದಾಖಲೆಗಳನ್ನು ಪಡೆಯಲು ಸಹ ಪಿಡಿಓ ಇಲ್ಲದೆ ದಿನದೂಡುವಂತಾಗಿದೆ. ಪಂಚಾಯ್ತಿಯಲ್ಲಿ ನಡೆಯಬೇಕಾದ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುವಂತಾಗಿದೆ.
ಪಿಡಿಓಗೆ ಸುದೀರ್ಘರಜೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಳೆದ ಸಾಲಿನಲ್ಲಿ ಯಾವುದಾದರೂ ಅವ್ಯವಹಾರ ನಡೆದಿದ್ದು ನೂತನ ಸದಸ್ಯರು ಪ್ರಶ್ನಿಸಬಹುದೆಂಬ ಕಾರಣದಿಂದೇನಾದರೂ ರಜೆ ಪಡೆದಿರಬಹುದು ಎಂಬ ಗುಮಾನಿ ಹುಟ್ಟುವಂತಾಗಿದೆ. ವಿನಾಕಾರಣ ಇವರಿಗೆ ರಜಾ ಮಂಜೂರು ಮಾಡಿದ್ದಾರೆಂದು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳ ಮೇಲೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
----------
ನಾವು ಇದೀಗಿನ್ನೂ ಅಧಿಕಾರವಹಿಸಿಕೊಂಡಿದ್ದು ಸಭೆ ಕರೆಯದೆ ಪಿಡಿಓ ರಜೆ ಮೇಲೆ ತೆರಳಿರುವುದು ಸರಿಯಲ್ಲ. ನೀರು ಸರಬರಾಜಿನ ಮೋಟರ್ ಗಳ ದುರಸ್ಥಿಗೆ ಲಕ್ಷಾಂತರ ರೂಪಾಯಿ ಖರ್ಚು ತಗುಲಿದ್ದು ಇದನ್ನು ಭರಿಸುವವರ್ಯಾರು: ಗಣೇಶ್, ಗ್ರಾ.ಪಂ. ಉಪಾಧ್ಯಕ್ಷ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ