ಪ್ರಸ್ತುತ ದಿನದಲ್ಲಿ ಉತ್ತಮ ಮಳೆಯಿಲ್ಲದೆ, ಉತ್ತಮ ಬೆಳೆಯಿಲ್ಲದೆ, ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆಯದೆ ರೈತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಕಂಗಾಲಾಗಿದ್ದು, ಅವರ ಜೀವನ ಡೋಲಾಯಮಾನವಾಗಿದೆ ಎಂದು ಕಾನೂನು ಸಂಸದೀಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ವಿಷಾಧಿಸಿದರು.
ಹುಳಿಯಾರು ಎಪಿಎಂಸಿ ಪ್ರಾಂಗಣದಲ್ಲಿ ವಿವಿಧ ಯೋಜನಯಡಿ ನಿರ್ಮಿಸಿರುವ ಗೋದಾಮುಗಳ ಉದ್ಘಾಟನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಉದ್ಘಾಟಿಸಿದರು. ಶಾಸಕ ಸಿ.ಬಿ.ಸುರೇಶ್ ಬಾಬು, ಸಂಸದ ಎಸ್.ಪಿ.ಮುದ್ದಹನುಮೇಗೌಡ ಇತರರಿದ್ದಾರೆ. |
ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಆರ್.ಐ.ಡಿ.ಎಫ್ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದ್ದ ೨ ಗೋದಾಮುಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸದುರ್ಗದಿಂದ ಹುಳಿಯಾರು ಮಾರ್ಗವಾಗಿ ಶಿರಾಕ್ಕೆ ನೀರೊದಗಿಸುವ ಸುಮಾರು ರೂ.12334 ಕೋಟಿ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಗೆ ಸರ್ಕಾರದಿಂದ ಮಂಜೂರಾತಿ ದೊರೆತಿದೆ. ಈ ಹಿಂದೆ ರೂಪುಗೊಂಡಿದ್ದ ಭದ್ರಾ ಮೇಲ್ದಂಡೆ ಯೋಜನೆಯಿಂದ ಒಟ್ಟು 21 ಟಿಎಂಸಿ ನೀರಲ್ಲಿ ಕೇವಲ 6 ಟಿಎಂಸಿ ಮಾತ್ರ ಜಿಲ್ಲೆಗೆ ಲಭ್ಯವಾಗುವ ಸಾಧ್ಯತೆ ಇತ್ತು. ಆದರೆ ಈಗ ಒಟ್ಟು 30ಟಿಎಂಸಿ ನೀರು ಹರಿಸುವ ಯೋಜನೆ ರೂಪಿಸಿದ್ದು ಜಿಲ್ಲೆಗೆ 10 ಟಿಎಂಸಿ ನೀರು ಲಭ್ಯವಾಗಲಿದೆ. ಹೊಸದುರ್ಗದಿಂದ ನೈಸರ್ಗಿಕವಾಗಿ ಹುಳಿಯಾರು ಮಾರ್ಗವಾಗಿ ಶಿರಾಕ್ಕೆ ನೀರು ಹರಿಸುವ ಈ ಯೋಜನೆ ಮುಂದಿನ ಕೆಲ ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಭರವಸೆ ನೀಡಿದರು. ತಾಂತ್ರಿಕ ಕಾರಣಗಳಿಂದ ತಾಲ್ಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ಹೇಮಾವತಿ ನೀರಾವರಿ ಯೋಜನೆ ಸಹ ಚಾಲನೆಗೊಳ್ಳಲಿದ್ದು ಜಿಲ್ಲೆಗೆ ಭದ್ರಾ ಮತ್ತು ಹೇಮೆಯ ಎರಡು ಸಂಗಮವಾಗಲಿದೆ ಎಂದರು. ಜಿಲ್ಲೆಯಲ್ಲಿ 12 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಅವರಲ್ಲಿ 6 ಮಂದಿ ಮೃತ ಕುಟುಂಬಗಳಿಗೆ ಭೇಟಿ ನೀಡಿದ್ದೇನೆ. ಅವರೆಲ್ಲರ ಆತ್ಮಹತ್ಯೆಗೆ ಅಂತರ್ಜಲ ಬತ್ತಿರುವುದೇ ಕಾರಣವಾಗಿದ್ದು ಇದರಿಂದ ರೈತರು ಆತ್ಮಹತ್ಯೆಗೆ ಶರಣಾಗುವುದು ಪರಿಹಾರವಲ್ಲ ಎಂದರು. ರಾಜ್ಯ ಸರ್ಕಾರ ರೈತರು ಬೆಳೆದ ಬೆಲೆ ಕುಸಿತ ಕಂಡಾಗ ಅವರ ನೆರವಿಗಾಗಿ ಒಂದು ಸಾವಿರ ಕೋಟಿ ಹಣ ಮೀಸಲಿರಿಸಿಟ್ಟಿದ್ದು ಅದರಲ್ಲಿ ರೂ.900 ಕೋಟಿ ಹಣ ಖರ್ಚಾಗಿ ನಷ್ಟವನ್ನು ಲೆಕ್ಕಿಸದೇ ರೈತರ ಕೈ ಹಿಡಿಯಲು ಸರ್ಕಾರ ಮುಂದಾಗಿದ್ದು, ಇದೇ ರೀತಿ ಮುಂದೆಯೂ ರೈತಪರ ನಿಲ್ಲಲಿದೆ ಎಂದರು. ರೈತರಿಗೆ ದರಗಳ ವ್ಯತ್ಯಾಸ ಹಾಗೂ ವರ್ತಕರ ಹಾವಳಿಯನ್ನು ತಪ್ಪಿಸುವ ದೃಷ್ಠಿಯಿಂದ ರಾಜ್ಯದ ಎಲ್ಲಾ ಎಪಿಎಂಸಿ ಗಳಲ್ಲಿ ಇ ಟೆಂಡರ್ ವ್ಯವಸ್ಥೆ ಜಾರಿಗೆ ತಂದಿದೆ ಎಂದರು.
ಹುಳಿಯಾರು ಎಪಿಎಂಸಿ ಪ್ರಾಂಗಣದಲ್ಲಿ ವಿವಿಧ ಯೋಜನಯಡಿ ನಿರ್ಮಿಸಿರುವ ಗೋದಾಮುಗಳ ಉದ್ಘಾಟನೆಯನ್ನು ಸಂಸದ ಎಸ್.ಪಿ.ಮುದ್ದಹನುಮೇಗೌಡ ನೆರವೇರಿಸಿದರು. |
ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡ ರೈತರ ಸಾವನ್ನು ಪ್ರೇಮ ಪ್ರಕರಣ ಅಥವಾ ಮತ್ತಾವುದೋ ವ್ಯಯಕ್ತಿಕ ಪ್ರಕರಣಗಳಿಂದ ಸಾವು ಸಂಭವಿಸಿದೆ ಎಂದು ರಾಜ್ಯಸಭೆಯಲ್ಲಿ ಕೇಂದ್ರದ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಉತ್ತರಿಸಿದ್ದಾರೆ. ಅವರ ಹೇಳಿಕೆಯನ್ನು ಖಂಡಿಸಿದ್ದು ಕೇಂದ್ರ ಸರ್ಕಾರ ರೈತರನ್ನು ನಿಕೃಷ್ಟವಾಗಿ ಕಾಣುತ್ತಿದೆ ಎಂದು ದೂರಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬ್ಯಾಂಕುಗಳ ವ್ಯವಹಾರವನ್ನು ರೈತರಿಗಾಗಿ ಸರಳಿಕರಣಗೊಳಿಸಬೇಕು. ರೈತ ಮೀಟರ್ ಬಡ್ಡಿ ದಂಧೆಕೋರರ ಬಳಿ ಹೋಗದೆ ನೆರವಾಗಿ ಬ್ಯಾಂಕ್ ಗಳಿಗೆ ಹೋಗಿ ಸಾಲ ಪಡೆಯುವಂತ ಸ್ಥಿತಿ ನಿರ್ಮಾಣವಾದಾಗ ಮಾತ್ರ ರೈತರ ಆತ್ಮಹತ್ಯೆ ತಡೆಯಬಹುದು ಎಂದು ಅಭಿಪ್ರಾಯಪಟ್ಟರು. ಬ್ಯಾಂಕ್ ಗಳು ಸಹ ನೂರಾರು ಕೋಟಿ ಸಾಲ ಪಡೆದು ಕೈ ಎತ್ತುವ ವಿಜಯಮಲ್ಯರಂತಹ ಬಂಡವಾಳಶಾಹಿಗಳಿಗೆ ಸಾಲ ಕೊಡುವುದನ್ನು ಬಿಟ್ಟು ಅದೇ ಹಣವನ್ನು ರೈತರಿಗೆ ನೀಡಬೇಕು ಎಂದರು. ಶಾಸಕ ಸಿ.ಬಿ.ಸುರೇಶ್ ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಬಿ.ಸಣ್ಣಯ್ಯ, ಉಪಾಧ್ಯಕ್ಷೆ ದಾಕ್ಷಾಣಯಮ್ಮ, ಕಾರ್ಯದರ್ಶಿ ನಾಗರಾಜು, ಮಾಜಿ ಶಾಸಕ ಬಿ.ಲಕ್ಕಪ್ಪ, ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕ ವಿ.ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್, ಜಿ.ಪಂ ಸದಸ್ಯರಾದ ಮಂಜುಳಮ್ಮ, ನಿಂಗಮ್ಮ, ತಾ,ಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಉಪಾಧ್ಯಕ್ಷ ನಿರಂಜನಮೂರ್ತಿ, ಸದಸ್ಯೆ ಬೀಬಿಪಾತಿಮಾ, ಗ್ರಾ.ಪಂ ಅಧ್ಯಕ್ಷರಾದ ಗೀತಾ, ದೇವರಾಜು, ವಿಜಯಲಕ್ಷ್ಮೀ, ಮುಖಂಡರಾದ ದಸೂಡಿ ರಂಗಸ್ವಾಮಿ, ರಹಮತುಲ್ಲಾಸಾಬ್,ಸಿದ್ದರಾಮಯ್ಯ ಸೇರಿದಂತೆ ಇತರ ಎಪಿಎಂಸಿ ನಿರ್ದೇಶಕರು, ವಿವಿಧ ಜನಪ್ರತಿನಿಧಿಗಳು ಹಾಜರಿದ್ದರು. ಮಾರುಕಟ್ಟೆ ಆರಂಭಕ್ಕೆ ಶ್ರಮಿಸಿದ ಹಿರಿಯರಾದ ಶ್ರೀನಿವಾಸಶೆಟ್ಟರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ