ಹುಳಿಯಾರು ಪಟ್ಟಣದಿಂದ ಶಿರಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ೨೩೪ ಆಗಿ ಗುರ್ತಿಸಿ ಟೆಂಡರ್ ಪ್ರಕ್ರಿಯೆ ನಡೆಸಿದ್ದು, ಗುತ್ತಿಗೆದಾರರ ಅರೆಬರೆ ಕೆಲಸದಿಂದ ಈ ಮಾರ್ಗವಾಗಿ ಸಂಚರಿಸಲು ದುಸ್ಥರವಾಗಿದ್ದು ಶೀಘ್ರವೇ ರಸ್ತೆ ಕಾಮಗಾರಿ ಪ್ರಾರಂಭಿಸಿಸುವಂತೆ ಒತ್ತಾಯಿಸಿ ದಬ್ಬಗುಂಟೆ ರವಿಕುಮಾರ್ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳು ಹೋಬಳಿಯ ಹೊಯ್ಸಳಕಟ್ಟೆ ಬಸ್ ನಿಲ್ದಾಣದಲ್ಲಿ ಇದೇ ೨೦ರ ಸೋಮವಾರದಿಂದ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.
ಹುಳಿಯಾರು-ಶಿರಾ ಮಾರ್ಗವಾಗಿ ಎನ್.ಹೆಚ್.೨೩೪ ರಸ್ತೆ ಹಾದುಹೋಗಿದ್ದು ಈಗಾಗಲೇ ಈ ರಸ್ತೆ ಕಾಮಗಾರಿಗಾಗಿ ಹೈದರಾಬಾದ್ ನ ಕಂಪನಿಯೊಂದನ್ನು ನಿಯೋಜಿಸಲಾಗಿದೆ. ಆದರೆ ಈ ಕಂಪನಿಯವರು ಇದುವರೆಗೂ ಯಾವುದೇ ಕೆಲಸ ಮಾಡಿಲ್ಲ. ರಸ್ತೆ ಅಗಲಿಕರಣವೆಂದು ರಸ್ತೆ ಬದಿಯ ಬೃಹತ್ ಗಾತ್ರದ ಮರಗಳನ್ನು ತುಂಡರಿಸಿದ್ದು ಬಿಟ್ಟರೆ ರಸ್ತೆಕೆಲಸವನ್ನು ಕಿಂಚಿತ್ತು ಮಾಡಿಲ್ಲ.
ಈಗಾಗಲೇ ಈ ರಸ್ತೆಯನ್ನು ರಾ.ಹೆ.ಆಗಿ ಮೇಲ್ದರ್ಜೆಗೇರಿಸಿರುವುದರಿಂದ ಲೋಕೋಪಯೋಗಿ ಇಲಾಖೆಯವರು ರಸ್ತೆಯ ಗುಂಡಿ ಮುಚ್ಚುವ ಕೆಲಸ ಸೇರಿದಂತೆ ಯಾವುದೇ ಕಾಮಗಾರಿಯನ್ನು ಮಾಡಲು ಮುಂದಾಗುತ್ತಿಲ್ಲ. ಶಿರಾದವರೆಗಿನ್ ಒಟ್ಟು ೪೦ ಕಿ.ಮೀ ರಸ್ತೆಯೂ ಆಳುದ್ದಗುಂಡಿಗಳು ಬಿದ್ದು ಸಂಪೂರ್ಣ ಹಾಳಾಗಿದ್ದು, ಮಣ್ಣು,ಜೆಲ್ಲಿ ಹಾಕಿ ಮುಚ್ಚುವ ಕಾರ್ಯವನ್ನು ಸಹ ಮಾಡದೆಯಿದ್ದು ಸಂಚಾರಕ್ಕೆ ತೊಂದರೆಯಾಗಿದೆ.ಈ ಮಾರ್ಗವಾಗಿ ಪ್ರತಿನಿತ್ಯ ಹತ್ತಾರೂ ಬಸ್, ಟಾಟಾಏಸ್ , ಆಟೋ,ಬೈಕ್ ಸೇರಿದಂತೆ ಇನ್ನಿತರ ವಾಹನಗಳು ಸಂಚರಿಸುತ್ತವೆ. ಹಲವು ವಾಹನಗಳು ಈ ಗುಂಡಿಯೊಳಗಿಳಿದು ಅಪಘಾತಗಳು ಸಂಭವಿಸಿದ್ದರೆ, ಬೈಕ್ ಸವಾರರೂ ಸಹ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ರಸ್ತೆಯ ಗುಂಡಿಯಿಂದ ನಿಯಂತ್ರಣ ತಪ್ಪಿ ಅಪಘಾತವಾದ ನಿದರ್ಶನಗಳು ಸಾಕಷ್ಟಿವೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು,ಎಂಎಲ್ಎ,ಎಂಪಿವರೆಗೂ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಯದ ಪ್ರಯುಕ್ತ ಶೀಘ್ರವೇ ಕಾಮಗಾರಿಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ನಡೆಯಲಿದೆ.
ಧರಣಿಯಲ್ಲಿ ರೈತಸಂಘ,ಜಯಕರ್ನಾಟಕ ವೇದಿಕೆ,ವಾಹನಚಾಲಕರ,ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಯವರು ಪಾಲ್ಗೊಳ್ಳಲಿದ್ದು ಸಾರ್ವಜನಿಕರು ಸಹ ಬೆಂಬಲ ನೀಡುವಂತೆ ದಸೂಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಡಿ.ಬಿ.ರವಿಕುಮಾರ್ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ