ವರದಿ:ಡಿ.ಆರ್.ನರೇಂದ್ರಬಾಬು
ಹುಳಿಯಾರು : ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರಿನ ಪ್ರಮುಖ ಬೆಳೆಯಾಗಿ ಬಿಂಬಿತವಾಗಿರುವ ಹೆಸರು ಇದೀಗ ಫಸಲು ನೀಡಿದ್ದು ರೈತರು ಹೆಸರುಕಾಳನ್ನು ಮಾರಲು ಎಪಿಎಂಸಿಯತ್ತ ಮುಗಿಬಿದಿದ್ದು ಪಟ್ಟಣದ ಎಪಿಎಂಸಿಯಲ್ಲಿ ಹೆಸರುಕಾಳಿನ ವ್ಯಾಪಾರ ಭರಾಟೆಯಿಂದ ಕೂಡಿದ್ದು, ಎತ್ತ ಕಣ್ಣುಹಾಯಿಸಿದರೂ ಹೆಸರುಕಾಳಿನ ರಾಶಿ ಹಾಗೂ ಚೀಲಗಳೇ ಕಂಡುಬರುತ್ತಿವೆ.
ಹುಳಿಯಾರು ಎಪಿಎಂಸಿಯ ಅಂಗಡಿಗಳ ಮುಂದೆ ನಿಟ್ಟಾಕಿರುವ ಹೆಸರುಕಾಳಿನ ಚೀಲಗಳು. |
ಈ ಬಾರಿ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ರೈತರು ಹೆಸರು ಬಿತ್ತನೆ ಮಾಡಿದ್ದು ನಂತರ ಕಾಲಕ್ಕೆ ತಕ್ಕಂತೆ ಹದಮಳೆಯಾಗಿದ್ದು ಹೆಸರು ಹುಲುಸಾಗಿ ಬೆಳೆಯಲು ಸಹಕಾರಿಯಾಗಿತ್ತು. ಅಂತೆಯೇ ಹೋಬಳಿಯ ದಸೂಡಿ,ದಬ್ಬಗುಂಟೆ,ಹೊಯ್ಸಳಕಟ್ಟೆ, ಗಾಣಧಾಳು,ಕೆಂಕೆರೆ, ಯಳನಡು, ಕೋರಗೆರೆ, ತಿರುಮಲಾಪುರ,ನಂದಿಹಳ್ಳಿ, ದೊಡ್ಡಬಿದರೆ, ಬರಕನಹಾಳ್ ಸೇರಿದಂತೆ ಇನ್ನಿತರ ಹಳ್ಳಿಗಳ ಬಹುತೇಕ ಮಂದಿ ರೈತರು ತಮ್ಮ ಜಮೀನಿನಲ್ಲಿ ಹೆಸರು ಬಿತ್ತನೆ ಮಾಡಿದ್ದರು.
ಪೂರ್ವ ಮುಂಗಾರಿನ ನಂತರ ಕೆಲ ದಿನ ಮಳೆ ಬಾರದೆ ಬಿಸಿಲಝಳದ ಹೆಚ್ಚಳದಿಂದಾಗಿ ಹೆಸರು ಗಿಡದ ಎಲೆಗಳು ಹಳದಿಯಾಗುವಂತಾಗಿದ್ದು ಬಿಟ್ಟರೆ ಹೆಸರಿನಲ್ಲಿ ಮತ್ಯಾವುದೇ ರೀತಿಯ ರೋಗಬಾಧೆ ಕಂಡುಬಂದಿಲ್ಲ. ಕೆಲ ರೈತರು ತಾವೇ ಈ ಹಿಂದೆ ದಾಸ್ತಾನು ಮಾಡಿಕೊಂಡಿದ್ದ ಹೆಸರುಕಾಳುಗಳನ್ನೇ ಬಿತ್ತನೆಗೆ ಬಳಸಿದ್ದರೆ, ಮತ್ತೆ ಕೆಲ ರೈತರು ರೈತಸಂಪರ್ಕ ಕೇಂದ್ರದಲ್ಲಿ ನೀಡಿದ ಹೆಸರುಕಾಳುಗಳನ್ನು ಬಿತ್ತನೆ ಮಾಡಿ ಉತ್ತಮ ಇಳುವರಿ ಪಡೆದಿದ್ದಾರೆ.
ಹುಳಿಯಾರು ಎಪಿಎಂಸಿಗೆ ಹೆಸರು ಮಾರಲು ಬಂದಿರುವ ಹೋಬಳಿಯ ವಿವಿಧ ಹಳ್ಳಿಗರ ರೈತರು. |
ಹೋಬಳಿ ಸುತ್ತಮುತ್ತಲ ಹಳ್ಳಿಯ ರೈತರು ತಾವು ಬೆಳೆದ ಹೆಸರನ್ನು ಪಟ್ಟಣದ ಮಾರುಕಟ್ಟೆಗೆ ತಂದು ಮಾರುತ್ತಿದ್ದಾರೆ. ಮಾರುಕಟ್ಟೆಗೆ ಹೆಸರಿನ ಅವಕ ಹೆಚ್ಚುತ್ತಿದ್ದಂತೆಯೇ ಬೆಲೆಯಲ್ಲಿ ಅಲ್ಪ ಕುಸಿತಕಂಡಿದೆ. ಈ ಮೊದಲು ಹೆಸರು ಬಿತ್ತನೆ ಸಮಯದಲ್ಲಿ ಪ್ರತಿ ಕ್ವಿಂಟಾಲ್ ಹೆಸರು ೮೦೦೦ ತಲುಪಿದ್ದರೆ, ಈಗ ಪ್ರತಿ ಕ್ವಿಂಟಲ್ ಗೆ ೫ ರಿಂದ ೬ ಸಾವಿರ ಅಸುಪಾಸಿನಲ್ಲಿದೆ. ಹೆಸರು ಬಿತ್ತನೆ ಮಾಡುವಾಗ ಹೆಚ್ಚಾಗಿದ್ದ ಬೆಲೆ , ಹೆಸರು ಕುಯ್ಯುವ ಹಂತದಲ್ಲಿ ಇಳಿಯುತ್ತಿದ್ದು ರೈತರಿಗೆ ನಷ್ಟವಾಗುತ್ತಿದೆ. ಹೆಸರು ಮಾರುಕಟ್ಟೆಗೆ ಬಂದಾಗ ೬೫೦೦ರಿಂದ ಶುರುವಾಗಿದ್ದ ಬೆಲೆ ಈಗ ೫೮೦೦ರೂ ತಲುಪಿದೆ. ಈಗಿನ ಗೊಬ್ಬರ, ಬೇಸಾಯ, ಕೂಲಿ ಎಲ್ಲವನ್ನು ಲೆಕ್ಕಹಾಕಿದರೆ ಏನು ಉಳಿಯುವುದಿಲ್ಲ ಎನ್ನುತ್ತಾರೆ ರೈತರು.
ಪಟ್ಟಣದ ಮಾರುಕಟ್ಟೆಯಲ್ಲಿ ಖರೀದಿಯಾಗುವ ಹೆಸರುಕಾಳು ರಾಜ್ಯ ಸೇರಿದಂತೆ ನೆರೆ ರಾಜ್ಯಗಳಿಗೂ ರವಾನೆಯಾಗುತ್ತಿದ್ದು ಪ್ರತಿನಿತ್ಯ ಮೂರ್ನಾಲ್ಕು ಲಾರಿ ಲೋಡ್ ರವಾನೆಯಾಗುತ್ತಿದೆ. ಕಳೆದ ತಿಂಗಳು ವ್ಯಾಪಾರವಿಲ್ಲದೆ ಬಿಕೋ ಎನ್ನುತ್ತಿದ್ದ ಎಪಿಎಂಸಿಯ ಅಂಗಡಿಗಳು ಇದೀಗ ರೈತರಿಂದ ತುಂಬಿದ್ದು ಅಂಗಡಿಯ ತುಂಬೆಲ್ಲಾ ಹೆಸರುಕಾಳಿನದ್ದೇ ಸದ್ದಾಗಿದೆ.
ಬಿತ್ತನೆ : ಕೃಷಿ ಇಲಾಖೆಯ ಮಾಹಿತಿಯಂತೆ ಈ ಬಾರಿ ಹೋಬಳಿ ವ್ಯಾಪ್ತಿಯಲ್ಲಿ ೨,೦೫೦ ಹೆಕ್ಟೇರ್ ಪ್ರದೇಶಾದಲ್ಲಿ ಹೆಸರು ಬಿತ್ತನೆಯಾಗಿದ್ದು ಇಲಾಖೆಯಿಂದ ಬಿಜಿಎಸ್-೯ ತಳಿಯ ೩೪ ಕ್ವಿಂಟಾಲ್ ಹೆಸರನ್ನು ಸಬ್ಸಿಡಿದರದಲ್ಲಿ ಬಿತ್ತನೆಗೆ ನೀಡಿದ್ದಾರೆ. ೧೭೦ ಹೆಕ್ಟೇರ್ ನಷ್ಟು ಅಲಸಂದೆ, ೨೫ ಹೆಕ್ಟೇರ್ ನಷ್ಟು ಉದ್ದು, ೧೮೫ ಹೆಕ್ಟೇರ್ ನಷ್ಟು ತೊಗರಿ ಬಿತ್ತನೆಯಾಗಿರುವುದಾಗಿ ಎಡಿಎ ಹೊನ್ನದಾಸೇಗೌಡ ತಿಳಿಸಿದ್ದಾರೆ.
ಇಳುವರಿಯೇನೋ ಉತ್ತಮವಾಗಿದೆ ಕಟಾವಿನ ಸಮಯದಲ್ಲಿ ಬಿಟ್ಟುಬಿಡದೆ ಕಾಡುತ್ತಿರುವ ಮಳೆಯಿಂದಾಗಿ ಹೆಸರನ್ನು ಒಣಗಿಸಲಾಗದೆ ಬಣ್ಣ ಕಪ್ಪಾಗುತ್ತಿದ್ದು, ಉತ್ತಮ ಬೆಲೆ ಸಿಗದಂತಾಗಿದೆ : ಜಾತ್ರಾನಾಯ್ಕ,ರೈತ. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ