ಮುಸ್ಲಿಂರ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಈದ್-ಉಲ್-ಫಿತರ್(ರಂಜಾನ್) ಹಬ್ಬವನ್ನು ಶನಿವಾರದಂದು ಪಟ್ಟಣದ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ಕಳೆದ ಒಂದು ತಿಂಗಳ ಉಪವಾಸಕ್ಕೆ ಅಂತ್ಯಹಾಡಿದ್ದಾರೆ.
ಸುಗಂಧದ್ರವ್ಯ ಲೇಪಿತ ಹೊಸಬಟ್ಟೆಗಳನ್ನು ತೊಟ್ಟ ಮುಸ್ಲಿಂ ಸಮುದಾಯದವರು ಪಟ್ಟಣದ ಜಾಮೀಯಾ,ಸೂರಾನಿ,ಮದೀನಾ ಮಸೀದಿಯಲ್ಲಿ ಪ್ರಾರ್ಥನೆ ನಡೆಸಿದರು. ನಂತರ ಧರ್ಮಗುರುಗಳೊಂದಿಗೆ ಈದ್ಗಾ ಮೈದಾನಕ್ಕೆ ಆಗಮಿಸಿ ನಮಾಜ್ ಮಾಡಿ, ಒಬ್ಬರಿಗೊಬ್ಬರು ಅಪ್ಪಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಹುಳಿಯಾರಿನ ಈದ್ಗಾಮೈದಾನದಲ್ಲಿ ಮುಸ್ಲಿಂಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಆಚರಿಸಿದರು. |
ಧರ್ಮಗುರುಗಳಾದ ಮೌಲಾನಾ ಹಸೀಫ್ ಅಲಿ ಅವರು ಮಾತನಾಡಿ, ಮಹಮದ್ ಪೈಗಂಬರರರ ನೆನಪಾಗಿ ಹಾಗೂ ತ್ಯಾಗ,ದಾನದ ಸಂಕೇತವಾಗಿ ಹಬ್ಬದ ಅಚರಣೆ ನಡೆದುಕೊಂಡಿದ್ದು ಬಂದಿದೆ ಎಂದರು. ಶ್ರೀಮಂತರು,ಬಡವರೆನ್ನುವ ಭೇದಭಾವವಿಲ್ಲದೆ ಒಂದು ತಿಂಗಳಕಾಲ ಉಪವಾಸ ವ್ರತಾಚರಣೆ ಮಾಡುತ್ತಾ ಅಲ್ಲಾನನ್ನು ಸ್ಮರಿಸಿರುವುದಾಗಿ ತಿಳಿಸಿದರು. ರಂಜಾನ್ ದಾನದ ಹಬ್ಬವಾಗಿದ್ದು ಉಳ್ಳವರು ಇಲ್ಲದವರಿಗೆ ತಮ್ಮ ಕೈಕೆಲಾದ ಬಟ್ಟೆ, ಪಾತ್ರೆ ಸೇರಿದಂತೆ ಇನ್ನಿತರ ವಸ್ತುಗಳನ್ನು ದಾನ ಮಾಡುತ್ತಾರೆ ಎಂದರು.
ಪಟ್ಟಣದ ಈದ್ಗಾ ಮೈದಾನ ಸೇರಿದಂತೆ ವೈಎಸ್.ಪಾಳ್ಯ,ಕಂಪನಹಳ್ಳಿ,ಯಗಚಿಹಳ್ಳಿಯಲ್ಲೂ ಸಹ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪಟ್ಟಣದ ಮುಸ್ತಫ ಗೊಬ್ಬರದ ಅಂಗಡಿಯ ಸೈಯದ್ ರೌನತ್ ಅವರು ಪ್ರಾರ್ಥನೆ ಮುಗಿಸಿಬಂದ ಮುಸ್ಲಿಂ ಬಾಂಧವರಿಗೆ ಜ್ಯೂಸ್ ವ್ಯವಸ್ಥೆ ಮಾಡಿದ್ದರು.
ಮುಸ್ತಫ ಗೊಬ್ಬರದ ಅಂಗಡಿಯ ಸೈಯದ್ ರೌನತ್ ಅವರು ಪ್ರಾರ್ಥನೆ ಮುಗಿಸಿಬಂದ ಮುಸ್ಲಿಂ ಬಾಂಧವರಿಗೆ ಜ್ಯೂಸ್ ವ್ಯವಸ್ಥೆ ಮಾಡಿದ್ದರು. |
ಈ ವೇಳೆ ಮುತುವಲ್ಲಿ ಜಬೀಉಲ್ಲಾ, ಗ್ರಾ.ಪಂ.ಸದಸ್ಯರಾದ ಅಹಮದ್, ಡೀಶ್ ಬಾಬು, ಗ್ರಾ.ಪಂ ಮಾಜಿ ಅಧ್ಯಕ್ಷ ಅನ್ಸರ್ ಅಲಿ, ಜಹೀರ್ ಸಾಬ್, ಇಮ್ರಾಜ್,ಡಾ||ಷರೀಪ್ ಸೇರಿದಂತೆ ಟಿಪ್ಪು ಯುವಕ ಸಂಘ, ಯುವವೇದಿಕೆ, ಬರಕತ್ ಸ್ವಸಹಾಯ ಸಂಘದವರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದು ಸಾಮೂಹಿಕ ಪ್ರಾರ್ಥನೆ ನಡೆಸಿದರು. ಸಿಪಿಐ ಮಾರಪ್ಪ ಹಾಗೂ ಪಿಎಸೈ ಪ್ರವೀಣ್ ಕುಮಾರ್ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತು ವ್ಯವಸ್ಥೆ ಮಾಡಿದ್ದರು.
ದೊಡ್ಡವರು, ಪುಟ್ಟಪುಟ್ಟ ಮಕ್ಕಳು ಹೊಸಬಟ್ಟೆ ತೊಟ್ಟು ಹಬ್ಬ ಶುಭಾಶಯ ಹಂಚಿಕೊಂಡರೆ, ಮನೆಯ ಮಹಿಳೆಯರು ಬಗೆಬಗೆಯ ಖಾದ್ಯಗಳನ್ನು ಸಿದ್ದಪಡಿಸಿದ್ದರು. ಪ್ರಾರ್ಥನೆ ಮುಗಿಸಿದ ನಂತರ ಸ್ನೇಹಿತರೊಂದಿಗೆ ಮನೆಮಂದಿಯೆಲ್ಲಾ ಸೇರಿ ಊಟ ಮಾಡುವ ಮೂಲಕ ಸಡಗರ ಸಂಭ್ರಮದಿಂದ ರಂಜಾನ್ ಆಚರಣೆ ನಡೆಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ