ಪದವಿ ಹಂತದ ವಿದ್ಯಾರ್ಥಿಗಳು ಅಧ್ಯಾಪಕರ ಸಹಕಾರದೊಂದಿಗೆ ತಮ್ಮ ಸೃಜನಶೀಲ ಬರಹಗಳನ್ನು ಕೇಂದ್ರಿಕರಿಸಿ ಪ್ರಕಟಮಾಡಿರುವ "ತಲೆಮಾರು" ಎಂಬ ಕಾಲೇಜು ಪತ್ರಿಕೆಯು ಕೃಷಿ ಹಾಗೂ ಸಾಮಾಜಿಕ ಕಳಕಳಿಯ ವಿಚಾರಗಳನ್ನೊಳಗೊಂಡಿದ್ದು ಸಮಾಜಕ್ಕೆ ಉತ್ತಮ ಕೊಡುಗೆಯಾಗಲಿದೆ ಎಂದು ಸಾಹಿತಿ ಸಿಂಗಾಪುರದ ಸಿದ್ದರಾಮಯ್ಯ ಅಭಿಮತವ್ಯಕ್ತಪಡಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಬರಹಗಳನ್ನು ಸಂಗ್ರಹಿಸಿ ಹೊರತಂದಿರುವ "ತಲೆಮಾರು" ಕಾಲೇಜು ಪತ್ರಿಕೆಯನ್ನು ಸಾಹಿತಿ ಸಿಂಗಾಪುರದ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.
|
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ ಪ್ರಪ್ರಥಮಬಾರಿಗೆ ವಿದ್ಯಾರ್ಥಿಗಳ ಬರಹಗಳನ್ನು ಸಂಗ್ರಹಿಸಿ ಹೊರತಂದಿರುವ "ತಲೆಮಾರು" ಎಂಬ ಕಾಲೇಜು ಪತ್ರಿಕೆಯ ಸಂಚಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ತಲೆಮಾರು ಪತ್ರಿಕೆಯಲ್ಲಿ ನಮ್ಮಸುತ್ತಮುತ್ತಲಿನ ಹಳ್ಳಿಗಳ ಐತಿಹ್ಯ,ನೀರಿನ ಬಳಕೆ, ರೈತ ಸಮುದಾಯ ಎದುರಿಸುತ್ತಿರುವ ಸಮಸ್ಯೆ,ಆಹಾರ ಧಾನ್ಯಗಳು ಸೇರಿದಂತೆ ಹತ್ತಾರೂ ವಿಚಾರಗಳು ಅಂಕಿಅಂಶ ಸಮೇತ ಒಳಗೊಂಡಿದೆ. ಈ ವಿಚಾರಗಳನ್ನು ವಿದ್ಯಾರ್ಥಿಗಳೇ ಸಂಗ್ರಹಿಸಿ ಪ್ರಕಟಿಸಿರುವುದು ಹೆಮ್ಮೆಯ ವಿಚಾರ ಎಂದರು. ಪತ್ರಿಕೆಯಲ್ಲಿನ ಸಾಮಾಜಿಕ ವಿಚಾರಗಳನ್ನು ಅಧಿಕಾರಿವರ್ಗದವರು ಓದುವುದರಿಂದ ಅವರ ಆಡಳಿತದ ಸುಗಮಕ್ಕೆ ಕೈಗನ್ನಡಿಯಾಗಲಿದೆ ಹಾಗೂ ಜ್ವಲಂತ ಸಮಸ್ಯೆಗಳ ವಾಸ್ತವ ಚಿತ್ರಣ ಅವರಿಗೆ ಸಿಗಲಿದೆ ಎಂದರು.
ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆ ಹೆಚ್ಚಿದ್ದು ಅದನ್ನು ಓರೆ ಹಚ್ಚುವ ಕಾರ್ಯವನ್ನು ಪ್ರಾಚಾರ್ಯ ಬಿಳಿಗಿರಿ ಕೃಷ್ಣಮೂರ್ತಿ ಮಾಡಿರುವುದು ಶ್ಲಾಘನೀಯ. ಅವಕಾಶವಂಚಿತರಿಗೆ ಒಂದು ಚಿಕ್ಕ ಅವಕಾಶಸಿಕ್ಕರೆ ಅವರು ಯಾವರೀತಿ ಸಾಧನೆ ಮಾಡಬಹುದು ಎಂಬುದಕ್ಕೆ ಈ ಪತ್ರಿಕೆ ನೆರವಾಗಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಪುಟಗಳು ಹೊರಬರಲಿ ಎಂದರು. ಪ್ರತಿಷ್ಠಿತ ಕಾಲೇಜುಗಳಲ್ಲಿ ಬಿಡುಗಡೆಮಾಡುವ ಮ್ಯಾಗ್ಸಿನ್,ಪುಸ್ತಕಗಳಿಗಿಂತ ತಲೆಮಾರು ಪತ್ರಿಕೆ ಬಹುಪಾಲು ವಿಶಿಷ್ಟವಾಗಿದೆ ಎಂದರು.
ಪ್ರಾಚಾರ್ಯ ಬಿಳಿಗಿರಿ ಕೃಷ್ಣಮೂರ್ತಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳ ಅಭಿವ್ಯಕ್ತಿಯನ್ನು ಪ್ರಚುರಗೊಳಿಸುವ ನಿಟ್ಟಿನಲ್ಲಿ ಈ ಪತ್ರಿಕೆ ಜನ್ಮತಾಳಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದ ಸಹಕಾರ ನೀಡಿದ್ದಾರೆಂದರು. ಪ್ರತಿ ಸೆಮಿಸ್ಟರ್ ಗೆ ಒಂದರಂತೆ ಪತ್ರಿಕೆಯನ್ನು ಬಿಡುಗಡೆ ಮಾಡಲಿದ್ದು ವಿದ್ಯಾರ್ಥಿಗಳು ತಮ್ಮ ಬರಹಗಳನ್ನು ನೀಡುವಂತೆ ತಿಳಿಸಿದ್ದಾರೆ.
ಕನ್ನಡ ಉಪನ್ಯಾಸಕ ಶಂಕರಲಿಂಗಯ್ಯ ಪತ್ರಿಕೆಯ ಪರಿಚಯ ಮಾಡಿಕೊಟ್ಟರು. ಉಪನ್ಯಾಸಕರಾದ ಶ್ರೀನಿವಾಸಪ್ಪ,ಇಬ್ರಾಹಿಂ,ಅಶೋಕ್, ಶಿವಯ್ಯ, ಗ್ರಂಥಪಾಲಕ ಲೋಕೇಶ್ ನಾಯಕ್ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ