ರಾಜ್ಯದ್ಯಾಂತ ಇರುವ ಮುಕ್ತಿಧಾಮಗಳ ಅಭಿವೃದ್ಧಿ ಹಾಗೂ ಅವುಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರ ಚಿಂತನೆ ನಡೆಸಿದ್ದು ಅದಕ್ಕಾಗಿ ಹಣ ಸಹ ಮೀಸಲಿರಿಸಿದೆ. ಆ ನಿಟ್ಟಿನಲ್ಲಿ ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿನ ಮುಕ್ತಿಧಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ೧೫ ಲಕ್ಷ ಅನುದಾನ ನೀಡುವುದಾಗಿ ಸಚಿವ ಟಿ.ಬಿ.ಜಯಚಂದ್ರ ಭರವಸೆ ನೀಡಿದರು.
ಹುಳಿಯಾರಿಗೆ ಆಗಮಿಸಿದ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಪಟ್ಟಣದ ವಿವಿಧ ಸಮುದಾಯವರು ಮುಕ್ತಿಧಾಮ ಅಭಿವೃದ್ದಿಗಾಗಿ ಅನುದಾನ ಕಲ್ಪಿಸಿಕೊಡುವಂತೆ ಮನವಿ ಪತ್ರಸಲ್ಲಿಸಿದರು. |
ಪಟ್ಟಣಕ್ಕೆ ಆಗಮಿಸಿದ್ದ ಸಚಿವರಿಗೆ ಹುಳಿಯಾರಿನ ವಿಪ್ರ ಸಮಾಜ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕು ವಿಪ್ರ ಹಿತರಕ್ಷಣಾ ವೇದಿಕೆ, ಮುಕ್ತಿಧಾಮ ಅಭಿವೃದ್ಧಿ ಸಂಘದವರು ರುದ್ರಭೂಮಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಮನವಿಪತ್ರ ಸಲ್ಲಿಸಿದ್ದು, ಮನವಿ ಪತ್ರ ಸ್ವೀಕರಿಸಿದ ಸಚಿವರು ಅನುದಾನ ಕೊಡುವುದಾಗಿ ತಿಳಿಸಿದರು.
ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಹಿಂದೂ ಸಮುದಾಯದವರ ರುದ್ರಭೂಮಿಯಿದ್ದರೂ ಸಹ ಸೂಕ್ತ ನಿರ್ವಹಣೆಯಿಲ್ಲದೆ, ಮೂಲ ಸೌಕರ್ಯಗಳಿಲ್ಲದೆ ಅಂತ್ಯಕ್ರಿಯೆ ನಡೆಸಲು ಬರುವವರು ಪರದಾಡುವಂತಾಗಿತ್ತು. ಇದನ್ನರಿತ ತಾಲ್ಲೂಕು ವಿಪ್ರ ಹಿತರಕ್ಷಣಾ ವೇದಿಕೆ, ಮುಕ್ತಿಧಾಮ ಅಭಿವೃದ್ಧಿ ಸಮಿತಿ ಹಾಗೂ ಹುಳಿಯಾರು ಮುಕ್ತಿಧಾಮ ಅಭಿವೃಧ್ಧಿ ಸಮಿತಿಯವರು, ಸರ್ಕಾರದ ಅನುದಾನ ಹಾಗೂ ಸಾರ್ವಜನಿಕರ ವಂತಿಕೆ ಮೂಲಕ ಅಭಿವೃಧಿಗೆ ಮುಂದಾಗಿದ್ದರು.
ಮುಜರಾಯಿ ಇಲಾಖೆಯಿಂದ ಮುಕ್ತಿಧಾಮಗಳ ಅಭಿವೃದ್ದಿ ಹಾಗೂ ನವೀಕರಣಕ್ಕಾಗಿ ಹಣ ಮೀಸಲಿರಿಸಿದ್ದು ಈಗಾಗಲೇ ಹಲವು ರುದ್ರಭೂಮಿಗಳಿಗೆ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದೇವೆ. ಅಂತೆಯೇ ಹುಳಿಯಾರು ಹಾಗೂ ಚಿ.ನಾ.ಹಳ್ಳಿಯಲ್ಲಿರುವ ಮುಕ್ತಿಧಾಮಗಳ ಅಭಿವೃದ್ಧಿಗೆ ಹದಿನೈದು ಲಕ್ಷ ಅವಶ್ಯಕತೆ ಇರುವುದಾಗಿ ತಿಳಿಸಿದ್ದು, ತಾವು ಅನುದಾನ ನೀಡುವುದಾಗಿ ಭರವಸೆ ನೀಡಿದರು. ತಹಸೀಲ್ದಾರ್ ಅವರು ಈ ಭಾಗದಲ್ಲಿನ ರುದ್ರಭೂಮಿಗಳಿಗೆ ಯಾವರೀತಿಯ ಸೌಲಭ್ಯಗಳು ಅವಶ್ಯ ಎಂಬುದರ ಬಗ್ಗೆ ಗಮನ ಕೊಡುವಂತೆ ಸೂಚಿಸಿದರು.
ಶಿರಾದಲ್ಲಿ ಅಂತ್ಯಕ್ರಿಯೆಗೆ ಶವಗಳನ್ನು ಸಾಗಿಸಲು ವಾಹನದ ವ್ಯವಸ್ಥೆ ಮಾಡಿದ್ದು , ಹುಳಿಯಾರು , ಚಿನಾಹಳ್ಳಿ ಭಾಗಕ್ಕೂ ಒಂದು ವಾಹನ ನೀಡುವುದಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ತಿಳಿಸಿದರು. ಈ ವೇಳೆ ವಿಪ್ರ ಸಮಾಜದ ಲೋಕೇಶಣ್ಣ, ಹು.ಕೃ.ವಿಶ್ವನಾಥ್, ರಂಗನಾಥ್ ಪ್ರಸಾದ್, ವಿಪ್ರಹಿತರಕ್ಷಣಾ ವೇದಿಕೆಯ ಮಧುಸೂಧನ್, ಆರ್ಯವೈಶ್ಯ ಮಂಡಳಿಯ ಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್, ಬಿ.ವಿ.ಶ್ರೀನಿವಾಸ್, ಬಡಗಿರಾಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ