ಮಾನವ ಜೀವನದಲ್ಲಿ ಆರೋಗ್ಯ ಹಾಗೂ ಸುಖಶಾಂತಿ ಅಗತ್ಯವಾಗಿದ್ದು ಧಾರ್ಮಿಕ ಆಚರಣೆಗಳನ್ನು ನಡೆಸುವುದರಿಂದ ದೇವರ ಕೃಪೆಯುಂಟಾಗಿ ಜೀವನದಲ್ಲಿ ಸುಖಶಾಂತಿ ಲಭಿಸುವುದರ ಜೊತೆಗೆ ಪ್ರಕೃತಿಯೂ ಸಹ ಸುಭಿಕ್ಷವಾಗಿರುತ್ತದೆ ಎಂದು ಬೃಹತ್ ಬ್ರಹ್ಮಾಂಡ ಖ್ಯಾತಿಯ ಶ್ರೀನರೇಂದ್ರಬಾಬು ಶರ್ಮಾಜಿಯವರು ತಿಳಿಸಿದರು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಪುರದಮಠದ ಪುರಾತನ ಗವಿಯಲ್ಲಿ ಕಳೆದ ಸೋಮವಾರದಿಂದ ಪ್ರಾರಂಭವಾಗಿದ್ದ ಶಿವಪೂಜಾನುಷ್ಠಾನ ಹಾಗೂ ಮೌನಾನುಷ್ಠಾನದ ಮುಕ್ತಾಯ ಸಮಾರಂಭದಲ್ಲಿ ಅವರು ಅಶೀರ್ವಚನ ನೀಡಿದರು.
ಈ ಹಿಂದೆಯಿದ್ದ ಹಲವರು ದೈವಾಂಶ ಸಂಭೂತರಾಗಿದ್ದು ಗ್ರಾಮದ ಏಳ್ಗೆಗಾಗಿ ಧ್ಯಾನ,ತಪ್ಪಸ್ಸು ಮಾಡಿದ್ದಾರೆ. ಅಂತಹವರ ಸಾಲಿನಲ್ಲಿ ಕುಪ್ಪೂರು ಮರುಳಸಿದ್ದೇಶ್ವರರು ಸಹ ಒಬ್ಬರಾಗಿದ್ದು ಅವರು ಧ್ಯಾನ ಮಾಡಿ ಹೋದಂತಹ ಸ್ಥಳದಲ್ಲಿ ಶಿವಪೂಜಾನುಷ್ಠಾನ ಹಾಗೂ ಮೌನಾನುಷ್ಠಾನ ಕಾರ್ಯ ನಡೆದಿರುವುದು ಈ ಕ್ಷೇತ್ರಕ್ಕೆ ಒಳಿತನ್ನುಂಟುಮಾಡಲಿದೆ ಎಂದರು. ಕುಫ್ಫೂರಿನ ಶ್ರೀಗಳು ಲೋಕಕಲ್ಯಾಣಾರ್ಥವಾಗಿ ಕೈಗೊಂಡಿರುವ ಈ ಕಾರ್ಯದಲ್ಲಿ ಯಶಸ್ಸು ಸಿಗಲಿ ಎಂದರು.
ಸೋಮವಾರದಿಂದ ಮೌನವ್ರತಾಚರಣೆಯಲ್ಲಿದ್ದ ಕುಪ್ಪೂರು ಗದ್ದಿಗೆ ಮಠದ ಶ್ರೀ ಡಾ.ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಗವಿಯಲ್ಲೇ ತಂಗಿದ್ದು ಶುಕ್ರವಾರ ಬೆಳಿಗ್ಗೆ ಅಂತಿಮ ಪೂಜೆ ನಡೆಸಿ ಆಗಮಿಸಿದ ಭಕ್ತಾಧಿಗಳಿಗೆ ಆಶೀರ್ವಚನ ನೀಡಿದರು. ಚನ್ನಬಸವೇಶ್ವರರ ಈ ಕ್ಷೇತ್ರ ಹೆಚ್ಚು ಮಹತ್ವದಾಗಿದ್ದು ಇಲ್ಲಿ ಕಾರ್ಯ ಮಾಡುವಂತೆ ತಮಗೆ ಅನುಷ್ಠಾನವಾದ ಹಿನ್ನಲೆಯಲ್ಲಿ ಗ್ರಾಮದೇವತೆ ಕಾಳಿಕಾಂಬ ದೇವಿಯ ಅಪ್ಪಣೆಯಂತೆ ಕಾರ್ಯ ಮಾಡಿರುವುದಾಗಿ ತಿಳಿಸಿದರು. ಮುಂದಿನ ೫ ವರ್ಷಗಳ ಪ್ರತಿ ಅಷಾಢ ಮಾಸದಲ್ಲಿ ಇಲ್ಲಿಗೆ ಬಂದು ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.
ಈ ವೇಳೆ ಯಡೆಯೂರು ಕ್ಷೇತ್ರದ ಶ್ರೀ ರೇಣುಕಶಿವಾಚಾರ್ಯ ಮಹಾಸ್ವಾಮೀಜಿ ಉಪಸ್ಥಿತರಿದ್ದರು. ಪುರೋಹಿತರಾದ ಮಲ್ಲಿಕಾರ್ಜುನಯ್ಯ,ನಟರಾಜ್, ವೀರೇಶ್,ಶರಣ ಗಂಗಾಧರಯ್ಯ, ಕೆ.ಎಸ್.ಎಂ.ಸ್ವಾಮಿ, ಚನ್ನಬಸವಯ್ಯ, ದಿಲೀಪ್, ಮಧು, ಡಿ.ಜಿ.ಕುಮಾರ್,ಪ್ರದೀಪ್ ಉಸ್ತುವಾರಿ ನಿರ್ವಹಿಸಿದರು. ಕೆಂಕೆರೆ ಗ್ರಾ.ಪಂ.ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷ ಪಂಚಾಕ್ಷರಿ, ತಾ.ಪಂ.ಸದಸ್ಯ ನವೀನ್, ಗ್ರಾ.ಪಂ.ಸದಸ್ಯರಾದ ರಾಮಲಿಂಗಯ್ಯ, ಅಶಾ, ಜಯಣ್ಣ ಸೇರಿದಂತೆ ಕೆಂಕೆರೆ,ಹುಳಿಯಾರು ಸುತ್ತಮುತ್ತಲ ಹಳ್ಳಿಯ ಭಕ್ತಾಧಿಗಳು ಆಗಮಿಸಿ ಸ್ವಾಮಿಜೀಯವರ ಆಶೀರ್ವಾದ ಪಡೆದರು. ಆಗಮಿಸಿದ ಭಕ್ತಾಧಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಸಂಜೆ ಪುರದಮಠದ ಗವಿಯಿಂದ ಕೆಂಕೆರೆಗೆ ಶ್ರೀಗಳು ಪಾದಯಾತ್ರೆ ನಡೆಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ