ರೊಚ್ಚಿಗೆದ್ದ ಗ್ರಾಹಕರು: ಕ್ಷಮೆ ಯಾಚಿಸಿದ ವ್ಯವಸ್ಥಾಪಕ
--------------------------
ಹುಳಿಯಾರು:ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ವ್ಯವಸ್ಥಾಪಕರು ಹಾಗೂ ಕೆಲ ಸಿಬ್ಬಂದಿಯವ ಗ್ರಾಹಕಸ್ನೇಹಿಯಾಗಿ ವರ್ತಿಸದೆ ಗ್ರಾಹಕರಿಗೆ ಕಿರಿಕಿರಿಯುಂಟುಮಾಡುತ್ತಾರೆಂದು ರೊಚ್ಚಿಗೆದ್ದ ಗ್ರಾಹಕರು ಮ್ಯಾನೇಜರ್ ಅವರನ್ನು ತೀವ್ರ ತರಾಟೆ ತೆಗೆದುಕೊಂಡ ಪ್ರಸಂಗ ಬುಧವಾರದಂದು ಜರುಗಿತು.
ಇಲ್ಲಿನ ಬ್ಯಾಂಕಿನ ಸಿಬ್ಬಂದಿ ಗ್ರಾಹಕರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳದೆ ಪ್ರತಿದಿನ ದೌರ್ಜನ್ಯದಿಂದ ನಡೆದುಕೊಳ್ಳುತ್ತಾರಲ್ಲದೆ ಗ್ರಾಹಕರಿಗೆ ಕನಿಷ್ಟ ಮರ್ಯಾದೆಯನ್ನು ಕೊಡದೆ ಕಿರಿಕಿರಿ ಉಂಟು ಮಾಡುತ್ತಿದ್ದು ಈ ಧೋರಣೆ ಸರಿಪಡಿಸಿಕೊಳ್ಳಬೇಕೆಂದು ಗ್ರಾಮಪಂಚಾಯ್ತಿ ಸದಸ್ಯ ಎಲ್.ಆರ್.ಚಂದ್ರಶೇಖರ್ ಹಾಗೂ ಸಾರ್ವಜನಿಕರು ಬ್ಯಾಂಕಿನ ವ್ಯವಸ್ಥಾಪಕರ ವಿರುದ್ದ ಹರಿಹಾಯ್ದರು.
ಸಮಸ್ಯೆ ಏನು: ಹಣ ಪಾವತಿ ಮಾಡಲು ಹೋದರೆ ಚಲನ್ ಕೊಡದೆ ಗ್ರೀನ್ ರೆಮಿಟ್ ಕಾರ್ಡ್ ಮೂಲಕವೇ ಪಾವತಿಸಿ ಎನ್ನುತ್ತಾರೆ ಮತ್ತು ಹಣ ಬಿಡಿಸುವುದಕ್ಕೆ ಹೋದರೆ ಚೆಕ್ ಲೀಫ್ ಕೊಡದೆ ಎಟಿಎಂ ಮೂಲಕ ಡ್ರಾ ಮಾಡಿ ಎಂದು ವಾಪಸ್ಸು ಕಳುಹಿಸುತ್ತಾರೆ.ಚಲನ್ ನೀಡದೆ ಕಾರ್ಡ್ ಮೂಲಕವೇ ಪಾವತಿಸಿ ಎಂದು ಪಟ್ಟು ಹಿಡಿಯುವುದರಿಂದ ಗ್ರಾಮೀಣ ಭಾಗದ ಅನಕ್ಷರಸ್ಥರು ಮೋಸ ಹೋಗುತ್ತಿರುವ ಘಟನೆಗಳು ಕೂಡ ಹೆಚ್ಚಾಗುತ್ತಿದೆ.ಕಾರ್ಡ್ ಮೂಲಕ ಡ್ರಾ ಮಾಡಲು ತಿಳಿಯದೆ ಅಕ್ಕಪಕ್ಕದವರ ಸಹಾಯ ತೆಗೆದುಕೊಳ್ಳುವ ಮುಗ್ಧರು ಪಿನ್ ನಂಬರ್ ಹೇಳುತ್ತಲೆ ಅವರ ಖಾತೆಯಲ್ಲಿ ಅವರಿಗೆ ತಿಳಿಯದಂತೆ ಹೆಚ್ಚು ಹಣ ಲಪಾಟಾಯಿಸಿದ ಪ್ರಕರಣಗಳು ಕೂಡ ಜರುಗಿದೆ.
ಕನಿಷ್ಟ ಹಣ ಬಿಡಿಸಿಕೊಳ್ಳಲು ಇಡಿ ದಿನವಾಗುತ್ತೆ.ದೂರದ ಊರಿನಿಂದ ಬಂದು ಬ್ಯಾಂಕಿನ ವ್ಯವಹಾರ ಮಾಡುವುದಕ್ಕೆ ತುಂಬಾ ತೊಂದರೆ ಅನುಭವಿಸುವಂತಾಗಿದೆ.
ಆರೋಪ : ಹೊಸ ಖಾತೆ ತೆರೆಯಲು ಇಲ್ಲ ಸಲ್ಲದ ದಾಖಲೆಗಳನ್ನು ಕೇಳುತ್ತಾ ವಿನಾಕಾರಣ ಸಲ್ಲದ ನೆಪ ಹೇಳಿ ಅಲೆದಾಡಿಸುವರು,ಒಂದು ಖಾತೆ ಪ್ರಾರಂಭಿಸಲು ಕಂಪ್ಯೂಟರ್ ಸೆಂಟರ್ ಗೆ ಕಳುಹಿಸಿ ಅಲ್ಲಿ ಕೊಡುವ ನಂಬರ್ ನೀಡಿದರೆ ಮಾತ್ರವೆ ಇಲ್ಲಿ ಖಾತೆ ತೆರೆಯುವರು.ಬೇರೆ ಬ್ಯಾಂಕಿನ ಚೆಕ್ಕನ್ನು ಇಲ್ಲಿ ನಗದಿಕರಿಸಿಕೊಳ್ಳಲು ಕನಿಷ್ಟವೆಂದರೂ ಒಂದು ತಿಂಗಳು ಹಿಡಿಯುತ್ತದೆ. ಬ್ಯಾಂಕಿನ ಸಿಬ್ಬಂದಿ ಗ್ರಾಹಕರಿಗೆ ನಗುಮುಖದ ಸೇವೆ ಕೊಡದೆ ನಿಕೃಷ್ಟವಾಗಿ ಮಾತನಾಡುತ್ತಾರೆ.ಯಾವುದೇ ಮಾಹಿತಿ ಒದಗಿಸದೆ ನಿರ್ಲಕ್ಷ್ಯ ಮಾಡುತ್ತಾರೆ.ಪ್ರತಿನಿತ್ಯವೂ ಇದೇ ಸಮಸ್ಯೆಯಿಂದ ಕೂಡಿದ್ದು ಇವರ ಧೋರಣೆ ಬದಲಾಗಬೇಕೆಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಎ ಎಸೈ ಶಿವಪ್ಪ ಸುಮಾರು ಒಂದು ಗಂಟೆ ಕಾಲ ಗ್ರಾಹಕರ ಸಮಸ್ಯೆ ಆಲಿಸಿ ಸಮಾಧಾನ ಪಡಿಸಿದರು. ವ್ಯವಸ್ಥಾಪಕರು ತನ್ನದು ತಿಳಿಯದೆ ತಪ್ಪಾಗಿದೆ ಎಂದು ಬಹಿರಂಗವಾಗಿ ಕ್ಷಮೆ ಯಾಚಿಸಿದಲ್ಲದೆ ತಮ್ಮಿಂದ ಹಾಗೂ ಸಿಬ್ಬಂದಿಯಿಂದ ಉಂಟಾಗಿರುವ ಸಮಸ್ಯೆಗಳನ್ನು ಸರಿಪಡಿಕೊಂಡು ಇನ್ನುಮುಂದೆ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದುವುದಾಗಿ ತಿಳಿಸಿ ಪ್ರಕರಣಕ್ಕೆ ಇತಿಶ್ರೀ ಹಾಡಿದರು.
ಗ್ರಾಪಂ ಸದಸ್ಯ ರಾಘವೇಂದ್ರ,ಕಿಯೋನಿಕ್ಸ್ ಪ್ರಭು,ಗಂಗಾಧರಯ್ಯ,ನಿವೃತ್ತ ಮುಖ್ಯೋಪಾಧ್ಯಾಯ ಲೋಕೇಶ್ವರಚಾರ್ ಮುಂತಾದವರಿದ್ದರು.
------------------------------------------------------------
ಬ್ಯಾಂಕಿನಿಂದ ಗ್ರಾಹಕರಿಗೆ ಉತ್ತಮ ಸೇವೆ ದೊರಕುತ್ತಿಲ್ಲ, ಸಿಬ್ಬಂದಿ ಹಾಗೂ ವ್ಯವಸ್ಥಾಪಕರು ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲ.ಹಾಗಿದ್ದೂ ಕೂಡ ಅನಿವಾರ್ಯವಾಗಿ ವ್ಯವಹಾರ ಮಾಡುವಂತಾಗಿದೆ: ಎಲ್.ಆರ್.ಬಾಲಾಜಿ,ಎಪಿಎಂಸಿ ವರ್ತಕರು
--------------------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ