ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಬಜೆಟ್‌ನಲ್ಲಿ ಹಣ ಕಡಿತ ಮಾಡಿರುವ ಕೇಂದ್ರಸರ್ಕಾರದ ಧೋರಣೆ ಖಂಡಿಸಿ ಹುಳಿಯಾರು ಹೋಬಳಿ ಅಂಗನವಾಡಿ ಕಾರ್ಯಕರ್ತರು ತಾಲ್ಲೂಕ್ ಅಧ್ಯಕ್ಷೆ ಪೂರ್ಣಮ್ಮ ನೇತೃತ್ವದಲ್ಲಿ ಹಾಗೂ ರೈತಸಂಘದ ಬೆಂಬಲದೊಂದಿಗೆ ಮಂಗಳವಾರದಂದು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೇಂದ್ರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿ ಪೋಲಿಸ್ ಠಾಣೆ ಎದುರು ಮಾನವ ಸರಪಳಿ ನಿರ್ಮಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಕೃತಿ ದಹನ ಮಾಡಿದರು.ನಂತರ ನಾಡಕಛೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ತಾಲ್ಲೂಕ್ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಪೂರ್ಣಮ್ಮ ಮಾತನಾಡಿ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲೂ ಸಹ ಅಂಗನವಾಡಿ ಹಾಗೂ ಬಿಸಿ ಊಟ ನೌಕರರಿಗೆ ಅನುಕೂಲವನ್ನು ಕಲ್ಪಿಸದೆ ನಿರ್ಲಕ್ಷ್ಯ ವಹಿಸಿದೆ. ಸುಮಾರು ೭ ವರ್ಷದಿಂದ ಸಂಭಾವನೆ ಹೆಚ್ಚಿಸಿಲ್ಲ.ರಾಜ್ಯದಲ್ಲಿ ಸ್ತ್ರೀ ಶಕ್ತಿ,ಭಾಗ್ಯಲಕ್ಷ್ಮಿ ಕೆಲಸ,ಪಲ್ಸ್ ಪೋಲಿಯೋ,ಸರ್ವೆ ಕಾರ್ಯ,ಚುನಾವಣೆ ಕಾರ್ಯ ಹೀಗೆ ಎಲ್ಲಾ ತರಹದ ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಬಳಸಿಕೊಳ್ಳಲಾಗುತ್ತಿದ್ದು ಇವರಿಗೆ ಯಾವುದೇ ರೀತಿಯ ಸವಲತ್ತು ನೀಡದೆ ದಿನದ ೮ ಗಂಟೆ ಕಾಲವೂ ದುಡಿಸಿಕೊಂಡು ಶೋಷಿಸಲಾಗುತ್ತಿದೆ ಎಂದರು
.
ರೈತಸಂಘದ ತಮ್ಮಡಿಹಳ್ಳಿ ಮಲ್ಲಿಕಣ್ಣ ಮಾತನಾಡಿ ಬಡ ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ದುಡಿಯುತ್ತಿರುವ ಅಂಗನವಾಡಿ ನೌಕರರನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಲೆ ಬಂದಿದ್ದು ಕಳೆದ ಮೂರು ಬಜೆಟ್‌ಗಳಲ್ಲೂ ಅಂಗನವಾಡಿ ನೌಕರರಿಗೆ ಕನಿಷ್ಠ 100 ರೂ ಗೌರವಧನವನ್ನು ಹೆಚ್ಚಿಸಲು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕ್ ಅಂಗನವಾಡಿ ನೌಕರರ ಸಂಘಟನ ಕಾರ್ಯದರ್ಶಿ ಸುನಂದಮ್ಮ ಮಾತನಾಡಿ ತ್ರಿಪಕ್ಷೀಯ ಸಮಿತಿಯು ಸ್ಕೀಂಗಳಲ್ಲಿ ಕೆಲಸ ಮಾಡುವವರನ್ನು ಉದ್ಯೋಗಿಗಳೆಂದು ಪರಿಗಣಿಸಿ ಕನಿಷ್ಠ ಕೂಲಿ, ಸಾಮಾಜಿಕ ಭದ್ರತೆ ಕೊಡಬೇಕೆಂಬ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿದ್ದರೂ ಸಹ ಕೇಂದ್ರ ಸರ್ಕಾರವು ಕಾರ್ಮಿಕರ ಬಗ್ಗೆ ಸಂಪೂರ್ಣವಾಗಿ ನಿರ್ಲಕ್ಷ್ಯ ದೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಹಸಿರು ಸೇನೆಯ ಸಂಚಾಲಕ ಕೆಂಕೆರೆ ಸತೀಶ್ ಮಾತನಾಡಿ ೩ ವರ್ಷಕೊಮ್ಮೆ ಸಂಘಟಿತ ಅಸಂಘಟಿತ ಕೇಂದ್ರ ಹಾಗೂ ರಾಜ್ಯ ಸರ್ಕಾರದದ ನೌಕರರಿಗೆ ಬೆಲೆ ಏರಿಕೆಯ ಆಧಾರದಲ್ಲಿ ಕನಿಷ್ಟ ಕೂಲಿ ಮತ್ತು ಇತರ ಸವಲತ್ತುಗಳು ಹೆಚ್ಚಾಗುತ್ತದೆ. ಕಾರ್ಪೊರೇಟ್ ಕಂಪೆನಿಗಳು, ಬಂಡವಾಳಶಹಿಗಳಿಗೆ ಕೋಟ್ಯಾಂತರ ತೆರಿಗೆ ವಿನಾಯಿತಿಹಾಗೂ ಸಾಲ ಮನ್ನಾ ಮಾಡುವ ಸರ್ಕಾರ ಅಂಗನವಾಡಿ ನೌಕರರಿಗೆ ೭ ವರ್ಷಗಳಾದರೂ ಯಾವುದೇ ಸವಲತ್ತುಗಳನ್ನು ಹೆಚ್ಚಿಸಿಲ್ಲದಿರುವುದು ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ಪಟ್ಟಣದ ಎಂಟು ಅಂಗನವಾಡಿಯ ಹಾಗೂ ಹೋಬಳಿ ವ್ಯಾಪ್ತಿಯ ನೂರಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರು ,ರೈತಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ