ಹುಳಿಯಾರು: ಹೋಬಳಿ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಾದ ಯಗಚಿಹಳ್ಳಿ,ಮಾರುಹೊಳೆ,ಕೆಎಸ್ ಪಾಳ್ಯ,ಬಡಾವಣೆ,ಭದ್ರಯ್ಯನ ಪಾಳ್ಯದ ಗ್ರಾಮಸ್ಥರುಗಳು ವಿದ್ಯುತ್ ಸಮಸ್ಯೆಯಿಂದ ಬೇಸತ್ತು ಗ್ರಾಮದ ಪ್ರಮುಖರುಗಳ ಸಮ್ಮುಖದಲ್ಲಿ ಹುಳಿಯಾರಿನ ಬೆಸ್ಕಾಂಗೆ ಆಗಮಿಸಿ ಇನ್ನೊಂದು ವಾರದಲ್ಲಿ ವಿದ್ಯುತ್ ಸಮಸ್ಯೆ ಸರಿಪಡಿಸುವಂತೆ ಗಡುವು ನೀಡಿದ ಘಟನೆ ಮಂಗಳವಾರದಂದು ಜರುಗಿತು.
ಯಗಚಿಹಳ್ಳಿ ಗ್ರಾಮಸ್ಥರುಗಳು ವಿದ್ಯುತ್ ಸಮಸ್ಯೆಪರಿಹರಿಸುವಂತೆ ಒತ್ತಾಯಿಸಿ ಹುಳಿಯಾರಿನ ಬೆಸ್ಕಾಂ ಸೆಕ್ಷನ್ ಆಫೀಸರ್ ಮೂರ್ತಪ್ಪ ಅವರಿಗೆ ಮನವಿ ಸಲ್ಲಿಸಿದರು. |
ನಮ್ಮೂರಿನಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು ರಾತ್ರಿ ಹೊತ್ತು ವಿದ್ಯುತ್ ಇಲ್ಲದೆ ಹಳ್ಳಿಗಳು ಕತ್ತಲಲ್ಲಿ ಮುಳುಗುವಂತಾಗಿದ್ದು ವಿದ್ಯುತ್ ವ್ಯತ್ಯಯದಿಂದ ಕುಡಿಯುವ ನೀರಿಗೂ ಕಷ್ಟವಾಗಿದೆ.ಥ್ರಿ ಫೇಸ್ ವಿದ್ಯುತ್ ಬದಲು ಕೆಲವೇ ಗಂಟೆಗಳ ಸಮಯ ಸಿಂಗಲ್ ಫೇಸ್ ವಿದ್ಯುತ್ ನೀಡುತ್ತಿರುವುದರಿಂದ ಯಾವುದೇ ಕೆಲಸವಾಗುತ್ತಿಲ್ಲ.ಅದನ್ನು ಕೂಡ ಸರಿಯಾಗಿ ಸರಬರಾಜು ಮಾಡದೆ ದಿನಕ್ಕೆ ಹತ್ತಿಪತ್ತು ಬಾರಿ ತೆಗೆಯುವುದರಿಂದ ಅನಿಶ್ಚಿತ ವಿದ್ಯುತ್ ನಿಂದ ಮಕ್ಕಳ ಪರೀಕ್ಷಾ ಸಮಯದಲ್ಲಿ ಓದಿಗೂ ಕೂಡ ತೊಂದರೆಯಾಗಿದೆ ಎಂದು ದೂರಿದರು.
ಹಳ್ಳಿಗಳಲ್ಲಿ ಕೇವಲ ಎರಡು ಮೂರು ಗಂಟೆ ವಿದ್ಯುತ್ ನೀಡುವುದರಿಂದ ತೋಟ ತುಡಿಕೆಗಳು ಬೇಸಿಗೆಯ ಬಿಸಿಲ ಝಳಕ್ಕೆ ಒಣಗಿಹೋಗುತ್ತಿದ್ದು ತೋಟದಲ್ಲಿ ಭರ್ತಿ ನೀರಿದ್ದರೂ ಕರೆಂಟ್ ಸಮಸ್ಯೆಯಿಂದಾಗಿ ನೀರು ಹಾಯಿಸಲಾರದ ಸ್ಥಿತಿಯುಂಟಾಗಿದೆ ಎಂದು ಅಲವತ್ತುಕೊಂಡರು.
ನಮ್ಮ ಹಳ್ಳಿಗೆ ನಾವುಗಳು ದಿನದ ಇಪ್ಪತ್ನಾಲು ಗಂಟೆ ವಿದ್ಯುತ್ ಕೇಳುತ್ತಿಲ್ಲ.ಆದರೆ ಕೊಡುವ ವಿದ್ಯುತ್ತನ್ನೆ ನಿಗದಿತವಾಗಿ ಕೊಡಿ.ಹಗಲಿನಲ್ಲಿ ಎರಡುಗಂಟೆ ಹಾಗೂ ರಾತ್ರಿ ಸಮಯದಲ್ಲಿ ಕೇವಲ ಮೂರು ಗಂಟೆ ಗುಣಮಟ್ಟದ ಥ್ರೀ ಫೇಸ್ ವಿದ್ಯುತ್ ನೀಡಿ ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಬೆಸ್ಕಾಂ ಸೆಕ್ಷನ್ ಆಫೀಸರ್ ಮೂರ್ತಪ್ಪ ಮಾತನಾಡಿ, ಬೇಸಿಗೆಯಾದ್ದರಿಂದ ವಿದ್ಯುತ್ ಅಭಾವ ಉಂಟಾಗಿದ್ದು ನಿಗದಿಯಂತೆ ವಿದ್ಯುತ್ ಒದಗಿಸಲು ಸಾಧ್ಯವಾಗುತ್ತಿಲ್ಲ.ಆದರೂ ಕೂಡ ನಿಮ್ಮ ಸಮಸ್ಯೆಗಳನ್ನು ಮೇಲಾಧಿಕಾರಿಗಳಿಗೆ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ರಾಮಯ್ಯ,ನಾಗರಾಜು,ಗ್ರಾಪಂ ಸದಸ್ಯ ಮಧುಸೂದನ, ತ್ಯಾಗರಾಜು, ವಿಜಯಕುಮಾರ್,ಚಂದ್ರಯ್ಯ,ದೇವರಾಜು ಸೇರಿದಂತೆ ಗ್ರಾಮದ ಮುಖ್ಯಸ್ಥರು ಹಾಜರಿದ್ದರು.
-----------------------------------------------------------
ಗ್ರಾಮಾಂತರ ಪ್ರದೇಶಗಳಲ್ಲಿ ಬೇಸಿಗೆಯ ಹಿನ್ನಲೆಯಲ್ಲಿ ವಿದ್ಯುತ್ ಅಭಾವ ತೀವ್ರವಾಗಿದ್ದು ಅನಿಶ್ಚಿತ ವಿದ್ಯುತ್ ನಿಂದಾಗಿ ಹಳ್ಳಿಗಳು ಕತ್ತಲಲ್ಲಿ ಮುಳುಗಿದ ಪರಿಸ್ಥಿತಿಉಂಟಾಗಿದೆಯಲ್ಲದೆ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು ಗ್ರಾಮಸ್ಥರು ಪರದಾಡುವಂತಾಗಿದೆ : ಯಗಚಿಹಳ್ಳಿ ಗ್ರಾಪಂ ಸದಸ್ಯ ಮಧುಸೂದನ
--------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ