ಹುಳಿಯಾರು : ಸಮೀಪದ ದೊಡ್ಡಬಿದರೆ ಗ್ರಾಮದ ಶ್ರೀಕರಿಯಮ್ಮದೇವಿ ಹಾಗೂ ಶ್ರೀಬೇವಿನಹಳ್ಳಿ ಅಮ್ಮನವರ ಆರತಿ ಬಾನ ಹಾಗೂ ಕೆಂಡದ ಸೇವೆ ಶನಿವಾರದಂದು ಶ್ರದ್ಧಾಭಕ್ತಿಯಿಂದ ನಡೆಯಿತು. ಮದುವಣಗಿತ್ತಿ, ಮಡಲಕ್ಕಿ ಸೇವೆಯ ಮೂಲಕ ಗುರುವಾರದಂದು ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು ೨೯ ರ ಮಂಗಳವಾರದವರೆಗೆ ನಡೆಯಲಿದೆ.
ಚಿಕ್ಕಬಿದರೆ ಕರಿಯಮ್ಮ, ಕೋಡಿಹಳ್ಳಿ ಶ್ರೀಕೊಲ್ಲಾಪುರದಮ್ಮ , ಹುಳಿಯಾರಿನ ಸಣ್ಣದುರ್ಗಮ್ಮ ಹಾಗೂ ದೂತರಾಯನೊಂದಿಗೆ ಅಲಂಕೃತ ಕರಿಯಮ್ಮನನ್ನು ಕಳಸ ಹೊತ್ತ ಹುಡುಗಿಯೊಂದಿಗೆ ಉರೊಳಗಿನ ದೇವಸ್ಥಾನದಿಂದ ನಡೆಮುಡಿ ಹಾಗೂ ಮೆರವಣಿಗೆಯಲ್ಲಿ ಸುಮಾರು ಎರಡು ಕಿಮೀ ದೂರದ ಬಾರೆಯಲ್ಲಿರುವ ಉದ್ಭವ ಬೇವಿನಹಳ್ಳಿ ಅಮ್ಮನವರ ಮೂಲಸ್ಥಾನಕ್ಕೆ ಕರೆತರಲಾಯಿತು.
ಅಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದ ನಂತರ ವಾದ್ಯಮೇಳದ ಹಿಮ್ಮೇಳದೊಂದಿಗೆ ದೇವಾಲಯದ ಮುಂದೆ ನಿಗಿನಿಗಿಸುವ ಕೆಂಡದ ಮೇಲೆ ಕಳಸ ಹೊತ್ತ ಬಾಲಕಿ ಹಾದ ನಂತರ ಕರಿಯಮ್ಮನೊಟ್ಟಿಗೆ ಎಲ್ಲಾ ದೇವರುಗಳನ್ನು ಕೆಂಡ ಹಾಯಿಸಲಾಯಿತು.ನಂತರ ಮಹಿಳೆಯರು ತಾವು ಮಡಿಯಲ್ಲಿ ಮಾಡಿ ತಂದಿದ್ದ ತಂಬಿಟ್ಟಿನ ಆರತಿ ಬೆಳಗುವುದರ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಕರಿಯಮ್ಮ ದೇವಿ ದೇವಾಲಯ ಸಮಿತಿಯ ಅಧ್ಯಕ್ಷ ಕರಿಯಪ್ಪ,ಸತೀಶ್,ಪಾತಲಿಂಗೇಶ್ವರ ದೇವಾಲಯ ಸಮಿತಿಯ ಯಜಮಾನರುಗಳು, ಗ್ರಾಪಂ ಸದಸ್ಯರುಗಳು, ದೊಡ್ಡಬಿದರೆ, ಕೋಡಿಹಳ್ಳಿ, ದಾಸಣ್ಣನ ಹಟ್ಟಿ ಗ್ರಾಮಸ್ಥರುಗಳು ಪಾಲ್ಗೊಂಡಿದ್ದರು.
ತುಮಕೂರು ಜಿಲ್ಲೆಯಲ್ಲಿ ಮೊನ್ನೆಯಷ್ಟೆ ನಡೆದ ಎತ್ತೇನಹಳ್ಳಿ ಅವಘಡದ ನಂತರ ಕೆಂಡ ಹಾಯುವ ಸಂಪ್ರದಾಯಕ್ಕೆ ತೀವ್ರ ಬಿಗಿಮಾಡಲಾಗಿದ್ದು ತಹಸೀಲ್ದಾರ್ ಅವರ ಒಪ್ಪಿಗೆ ಪತ್ರದ ನಂತರ ಪೋಲಿಸ್ ವಿಚಾರಣೆ ನಡೆದು ಎಲ್ಲಾ ಮುಂಜಾಗ್ರತೆ ಕ್ರಮ ಪರಿಶೀಲಿಸಿದ ಮೇಲಷ್ಟೆ ಈ ಬಾರಿ ಕೆಂಡ ಹಾಯಲು ಅವಕಾಶ ಮಾಡಿಕೊಡಲಾಗಿತ್ತು.ಪಿಎಸೈ ಪ್ರವೀಣ್ ಕುಮಾರ್ ತಮ್ಮ ಸಿಬ್ಬಂದಿಯೊಂದಿಗೆ ಹಾಜರಿದ್ದು ಕೆಂಡದ ಸಮಯದಲ್ಲಿ ಭಾರಿ ನಿಗಾವಹಿಸಿದ್ದರು.
-----------------------------------------
ಕೆಂಡಾದ ಸೇವೆ ಸಾಂಪ್ರದಾಯಿಕ ಆಚರಣೆಯಾಗಿದ್ದು ಅನಾದಿ ಕಾಲದಿಂದಲೂ ಜಾತ್ರಾ ಮಹೋತ್ಸವದಲ್ಲಿ ನಡೆಸಿಕೊಂದು ಬರುತ್ತಿದ್ದೇವೆ.ಇದೇ ಪ್ರಥಮ ಬಾರಿಗೆ ಕೆಂಡ ಸೇವೆ ಸಲ್ಲಿಸಲು ತಾಲ್ಲೂಕ್ ಆಡಳಿತದಿಂದ ಒಪ್ಪಿಗೆ ಪತ್ರ ತರಲಾಯಿತು :ಕರಿಯಪ್ಪ ,ಕರಿಯಮ್ಮ ದೇವಿ ದೇವಾಲಯ ಸಮಿತಿಯ ಅಧ್ಯಕ್ಷ
-----------------------------
ಸರ್ಕಾರಿ ಆದೇಶದಂತೆ ಮುಂಜಾಗ್ರತೆಯಾಗಿ ಅಗ್ನಿಶಾಮಕ ದಳದವರಿಗೆ ತಿಳಿಸಿದ್ದಾಗ್ಯೂ ಐದು ಸಾವಿರ ರೂಪಾಯಿ ಹಣ ಪಾವತಿಸಿ ರಸೀದಿ ನೀಡಿದರಷ್ಟೆ ಬರುವುದು ಎಂದು ಜಾತ್ರೆಗೆ ಬರಲು ನಿರಾಕರಿಸಿದರು.ಅಕಸ್ಮಾತ್ ಅಗ್ನಿಕೊಂಡ ಹಾಯುವಾಗ ಏನಾದರೂ ಹೆಚ್ಚುಕಮ್ಮಿಯಾಗಿ ಬಿದಿದ್ದರೆ ಯಾರು ಹೊಣೆ.ಸರ್ಕಾರ ಇದಕ್ಕೆ ಹಣ ಪಡೆಯುವುದನ್ನು ಬಿಟ್ಟು ಮುಂಜಾಗ್ರತೆಯಾಗಿ ವಾಹನ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಿ:ಲಿಂಗದೇವರು,ಗ್ರಾಮಸ್ಥ
---------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ