ಹುಳಿಯಾರು:ಸಮೀಪದ ಪೋಚಕಟ್ಟೆಯ ಗ್ರಾಮದೇವತೆ ಬೇವಿನಹಳ್ಳಿ ಶ್ರೀ ಕರಿಯಮ್ಮ ದೇವಿ ಅಮ್ಮನವರ ಸಿಡಿ ಕಾರ್ಯ ಹಾಗೂ ಓಕಳಿ ಭಾನುವಾರ ಮಧ್ಯಾಹ್ನ ನಡೆಯುವ ಮೂಲಕ ಮೂರು ದಿನಗಳ ಕಾಲದ ಜಾತ್ರಾಮಹೋತ್ಸವ ಪರಿಸಮಾಪ್ತಿಯಾಯಿತು.
ಶುಕ್ರವಾರದಂದು ವಿವಿಧ ದೇವರುಗಳ ಆಗಮನದೊಂದಿಗೆ ಧ್ವಜಾರೋಹಣದ ಮೂಲಕ ಜಾತ್ರಾಮಹೋತ್ಸವ ಪ್ರಾರಂಭವಾಗಿ ಮಧುವಣಗಿತ್ತಿ ಸೇವೆ,ಮಡ್ಲಕ್ಕಿ ಸೇವೆ ಹಾಗೂ ಆರತಿ ಬಾನ ನಡೆದರೆ ಶನಿವಾರದಂದು ಗಂಗಾಸ್ನಾನ, ಹೊಳೆಸೇವೆ,ನಡೆಮುಡಿ ನಡೆದು ನಂತರ ಹರಕೆ ರೂಪವಾಗಿ ಕೆಂಡ ಸೇವೆ ಮಾಡಲಾಗಿತ್ತು.
ಭಾನುವಾರದಂದು ಸಿಡಿ ಕಾರ್ಯದ ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಿತು. ಪೋಚಕಟ್ಟೆಯ ಗ್ರಾಮದೇವತೆ ಕರಿಯಮ್ಮದೇವಿಯೊಂದಿಗೆ ಚಿಕ್ಕಬಿದರೆ ಕರಿಯಮ್ಮ,ಕೋಡಿಹಳ್ಳಿ ಕೊಲ್ಲಾಪುರದಮ್ಮ,ಪೋಚಕಟ್ಟೆ ಕಾಲಭೈರವ,ಸಂಗೇನಹಳ್ಳಿ ಆಂಜನೇಯಸ್ವಾಮಿ ಹಾಗೂ ಕೊಲ್ಲಾಪುರದಮ್ಮ ದೇವರುಗಳನ್ನು ದೇವಾಲಯದಿಂದ ಸಿಡಿಕಂಬದವರೆಗೆ ಮೆರವಣಿಗೆಯಲ್ಲಿ ಕಳಸ ಸಮೇತ ಕರೆತಂದು ಪೂಜೆ ಸಲ್ಲಿಸಲಾಯಿತು.
ಸಿಡಿ ಕಾರ್ಯದ ಅಂಗವಾಗಿ ಸಿಡಿಮರವನ್ನು ಕೆಂಪು,ಬಿಳಿ ಬಣ್ಣ ಬಳಿದು ಮಾವಿನ ಸೊಪ್ಪಿನಿಂದ ಅಲಂಕರಿಸಲಾಗಿತ್ತು. ಸಿಡಿಮರದ ಒಂದು ತುದಿಗೆ ಗ್ರಾಮದೇವತೆ ಕರಿಯಮ್ಮನನ್ನು ಕೂರಿಸಿ ಭಕ್ತರ ಹರ್ಷೋದ್ಗಾರದಲ್ಲಿ ಸಿಡಿಮರವನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಲಾಯಿತು.
ಆಗಮಿಸಿದ್ದ ಭಕ್ತರಿಗೆ ಪಾನಕ ಪನಿವಾರ ವಿತರಿಸಲಾಯಿತು.
ಈ ವೇಳೆ ದೇವಾಲಯ ಸಮಿತಿಯವರು ,ಗ್ರಾಮದ ಯಜಮಾನರುಗಳಾದ ಶೇಖರಯ್ಯ,ನಾಗಣ್ಣ, ಗಿರೀಶ್,ಶೇಖರಪ್ಪ ,ದೊಡ್ಡಬಿದರೆ ಗ್ರಾಪಂ ಉಪಾಧ್ಯಕ್ಷ ಮೋಹನ್ ಕುಮಾರ್ ,ಸದಸ್ಯರುಗಳಾದ ಜಯರಾಂ,ಶಿವಾನಾಯ್ಕ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸಂಜೆ ಕಂಕಣ ವಿಸರ್ಜನೆ,ಓಕಳಿ ಸೇವೆ ನಡೆದು ದೇವರುಗಳ ಬೀಳ್ಕೊಡುಗೆ ಮುಖಾಂತರ ಜಾತ್ರೆಗೆ ತೆರೆ ಬಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ