ಹುಳಿಯಾರು: ರಾಜ್ಯದ ಎಲ್ಲಾ ಪ್ರಮುಖ ದೇವಾಲಯ ಹಾಗೂ ಧಾರ್ಮಿಕ ಕ್ಷೇತ್ರಗಳ ಸಮೀಪ ಅತಿಥಿ ಗೃಹ ನಿರ್ಮಿಸಲು ಸರ್ಕಾರ ಮುಂದಾಗಬೇಕೆಂದು ರಾಜ್ಯಪಾಲ ವಜುಬಾಯಿ ವಾಲಾ ಸಲಹೆ ನೀಡಿದರು.
ಹೋಬಳಿಯ ಬೋರನಕಣಿವೆ ಸೇವಾಚೇತನ ಕೇಂದ್ರದಲ್ಲಿ ಬುಧವಾರ ಸಂಜೆ ನಡೆದ ಸಾಯಿ ಮಂದಿರದ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ ಪ್ರಪಂಚದಲ್ಲಿ ಸಾಕಷ್ಟು ಧರ್ಮಗಳಿದ್ದು ಎಲ್ಲಾ ಧರ್ಮಗಳ ಸಾರ ಒಂದೇ,ಸತ್ಯವನ್ನು ನುಡಿಯಬೇಕು.ಸೇವೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಹನಿಹನಿಯೂ ಸೇರಿ ಒಂದು ನದಿಯಾಗುವಂತೆ ಪ್ರತಿಯೊಬ್ಬ ಮನುಷ್ಯನು ಸೇವೆಯನ್ನು ಮಾಡುತ್ತಾ ಸಂಸ್ಕಾರ ರೂಡಿಸಿಕೊಳ್ಳಬೇಕಕು ಸಾಯಿಬಾಬಾ ರೀತಿಯಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡು ತಮ್ಮ ಜೀವನದ ಜಂಜಾಟವನ್ನು ಮರೆತು ಕೇವಲ ತಮ್ಮ ಕುಟಂಬ ಪರಿವಾರವಷ್ಟೆ ಅಲ್ಲದೆ ಸಮಾಜದ ಸೇವೆಯನ್ನು ಮಾಡಬೇಕೆಂದರು.
ಹಿಂದು, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲಾ ಸಮುದಾಯವನ್ನು ಸಮಾನವಾಗಿ ಕಾಣುವ ಭಾರತೀಯ ಸಂಸ್ಕೃತಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದ ಅವರು ಶಾಂತಿಯನ್ನು ಪ್ರತಿಪಾದಿಸಿದವರಲ್ಲಿ ಅನೇಕ ವಿರಕ್ತ ಮಹಾಪುರುಷರಿದ್ದು ಅವರಲ್ಲಿ ಸಾಯಿ ಬಾಬಾರವರನ್ನು ಎಲ್ಲಾ ಧರ್ಮದವರು ಆರಾಧಿಸುತ್ತಾರೆಂದರು. ವಿವೇಕಾನಂದರ ಉಪದೇಶ ಹಾಗೂ ಸಾಯಿಬಾಬಾ ಅವರ ಆದರ್ಶ ಅಳವಡಿಸಿಕೊಳ್ಳಿ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಶಿರಡಿಗೆ ಹೋಗಲು ಸಾಧ್ಯವಾಗದವರಿಗಾಗಿ ಶಿರಡಿ ಸಾಯಿಯನ್ನೆ ಇಲ್ಲಿ ಸ್ಥಾಪಿಸಿ ನೆಲೆಯೂರುವಂತೆ ಮಾಡಿರುವುದು ಪ್ರಶಂಸನೀಯ ಎಂದರು. ಬೋರನಕಣಿವೆ ತುಂಬಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಸಾಯಿ ಬಾಬಾ ಮಂದಿರದ ಬಳಿ ರೂ.5 ಕೋಟಿ ವೆಚ್ಚದಲ್ಲಿ ಅತಿಥಿ ಗೃಹ ನಿರ್ಮಾಣ ಮಾಡಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ಸುಂದರ ಪರಿಸರದಲ್ಲಿರುವ ಬೋರನಕಣಿವೆ ಜಲಾಶಯವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಸರ್ಕಾರವನ್ನು ಒತ್ತಾಯಿದರು.ಶಾಂತಿ ಮತ್ತು ಹೋರಾಟ ಎರಡೂ ಒಂದೇ ಕಡೆ ಮಾಡಿದ್ದಾರೆ. ಸಾಯಿ ಬಾಬಾ ಶಾಂತಿಯ ಸಂಕೇತವಾದರೆ ಸ್ವಾಮಿ ವಿವೇಕಾನಂದ ಅವರು ಹೋರಾಟದ ಸಂಕೇತವೆಂದರು. ಇಂತಹ ಪ್ರಶಾಂತ ಸ್ಥಳದಲ್ಲಿ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.
ಸೇವಾ ಚೇತನದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಶ್ವ ಮಾನವತ್ವದ ಸಂದೇಶವನ್ನು ಹೊಂದಿ ಪ್ರಜ್ಞಾವಿಕಾಸವಾಗುವಂತಹ ವಾತವಾರಣ ಹೊಂದಿರುವ ಈ ಸ್ಥಳದಲ್ಲಿ ರಂಗಚಟುವಟಿಕೆ,ರೈತರ ತರಬೇತಿ, ಆರೋಗ್ಯ ಶಿಬಿರ,ಶಿಲ್ಪಕಲಾ ಶಿಬಿರವನ್ನು ಫೌಂಡೇಷನ್ ನಡೆಸುತ್ತಾ ಬಂದಿದೆ ಎಂದರು.
ರುದ್ರಪ್ಪ ಹನಗವಾಡಿ,ಸಂಸ್ಥೆಯ ಕಾರ್ಯದರ್ಶಿ ವಿಠಲ್ ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್ ಭಕ್ತಿ ಗೀತೆಗಳನ್ನು ಹಾಡಿದರು. ಗ್ರಾಮೀಣ ಕಲಾವಿದರಿಂದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ