ಹುಳಿಯಾರು : ಹೋಬಳಿಯ ಕಾರೇಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿಯ ಮೂಲಸ್ಥಾನದಲ್ಲಿ ವೈಭವಯುತ ಬ್ರಹ್ಮ ರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸೋಮವಾರದಂದು ವೈಭವದಿಂದ ಜರುಗಿತು.
ಕಳೆದ ಮೂರು ದಿನದಿಂದ ಜಾತ್ರೆ ಅಂಗವಾಗಿ ಸ್ವಾಮಿಗೆ ಕಂಕಣ, ಅಂಕುರಾರ್ಪಣೆ, ಧ್ವಜಾರೋಹಣ, ಉಯ್ಯಾಲೋತ್ಸವ, ಗಜಾರೋಹಣ, ಗರುಡ ವಾಹನೋತ್ಸವ, ಸಂತರ್ಪಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದಿದ್ದು, ಇಂದು ಮುಂಜಾನೆಯಿಂದಲೆ ಬ್ರಹ್ಮ ರಥೋತ್ಸವದ ವಿವಿಧ ಪೂಜಾ ಕೈಂಕರ್ಯ ನಡೆದವು.ರಥೋತ್ಸವದ ಅಂಗವಾಗಿ ರಥವನ್ನು ಬಗೆಬಗೆ ಹೂ ಹಾರ, ಬಾವುಟಗಳಿಂದ ಸಿಂಗರಿಸಿದ್ದಲ್ಲದೆ, ಪುಣ್ಯಾಹ, ಅನ್ನಶಾಂತಿ ಸೇರಿದಂತೆ ವಿವಿಧ ಪೂಜೆಗಳನ್ನು ನಡೆಸಿದ್ದರು.
ನಂತರ ರಂಗನಾಥಸ್ವಾಮಿಯ ಮೂಲಸ್ಥಾನದಿಂದ ಅಲಂಕೃತ ಉತ್ಸವ ಮೂರ್ತಿಯನ್ನು ಯರೇಹಳ್ಳಿಯ ಕೆಂಪಮ್ಮ ಹಾಗೂ ಹೊಯ್ಸಳಕಟ್ಟೆ ಕರಿಯಮ್ಮ , ಕೆಂಚರಾಯ, ಭೂತಪ್ಪ ಹಾಗೂ ನಗಾರಿ ಹೊತ್ತ ಬಸವನೊಂದಿಗೆ ಪೂರ್ಣಕುಂಭ ಹಾಗೂ ವಾದ್ಯ ಮೇಳದೊಂದಿಗೆ ರಥದ ಬಳಿ ಕರೆತಂದು ಸಿಂಗಾರಗೊಂಡ ಸರ್ವಾಲಂಕೃಥ ರಥದಲ್ಲಿ ಶ್ರೀ ಸ್ವಾಮಿಯವರನ್ನು ಪ್ರತಿಷ್ಠಾಪಿಸಿ ಸಹಸ್ರಾರು ಭಕ್ತರು ಉದ್ಘೋಷದೊಂದಿಗೆ ರಥವನ್ನೆಳೆಯಲಾಯಿತು.
ಸುಡುವ ಬಿಸಿಲನ್ನೂ ಲೆಕ್ಕಿಸದೆ ಬೆಳಿಗ್ಗೆಯಿಂದಲೇ ಕಿಕ್ಕಿರಿದು ನೆರೆದಿದ್ದ ಭಕ್ತರು ಜಯಘೋಷದೊಂದಿಗೆ ಸುಮಾರು ಐವತ್ತು ಅಡಿಗೂ ಎತ್ತರದ ರಥವನ್ನು ಎಳೆದರಲ್ಲದೆ ಮಂಡಕ್ಕಿ,ಬಾಳೆಹಣ್ಣುಗಳನ್ನು ರಥಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ದೂರದೂರುಗಳಿಂದ ಆಗಮಿಸಿದ ಭಕ್ತರು ಸ್ವಾಮಿಗೆ ಹಣ್ಣುಕಾಯಿ ಮಾಡಿಸಿದರು,ಎಲ್ಲೆಲ್ಲೂ ಜಾತ್ರೆಯ ಸಡಗರ ತುಂಬಿ ತುಳುಕುತಿತ್ತು.
ರಥೋತ್ಸವದ ನಂತರ ದಸೂಡಿಯ ದಿ.ಕೊಟ್ಟಿಗೆ ರಂಗೇಗೌಡರ ಸಹೋದರರು ಮತ್ತು ಮಕ್ಕಳಿಂದ ಬ್ರಾಹ್ಮಣರಿಗೆ ಅನ್ನಸಂತರ್ಪಣೆ ನಡೆಯಿತು.ಜಿ.ಎಂ.ಸೀನಪ್ಪ ಶೆಟ್ಟರು ಮತ್ತು ಜಿ.ಎಸ್.ಸತ್ಯನಾರಾಯಣ ಶೆಟ್ಟರು ಇವರುಗಳಿಂದ ಆರ್ಯವೈಶ್ಯ ಮಂಡಳಿಯವರಿಗೆ ಹಾಗೂ ತಿಮ್ಮನಹಳ್ಳಿಯ ಅಳ್ಳಪ್ಪ ವಂಶಸ್ಥರಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ತಹಸೀಲ್ದಾರ್ ಗಂಗೇಶ್, ಸಿಂಗದಹಳ್ಳಿ ರಾಜ್ ಕುಮಾರ್ , ದೇವಸ್ಥಾನ ಸಮಿತಿಯ ಆರ್.ರಂಗಸ್ವಾಮಿ, ಮುದ್ದುರಂಗಯ್ಯ,ದೊಡ್ಡಯ್ಯ,ರಮೇಶ್ , ರಾಮಕೃಷ್ಣಪ್ಪ, ಸೀತಾರಾಮಯ್ಯ,ಗ್ರಾಪಂ ಸದಸ್ಯರುಗಳಾದ ಮಧುಸೂದನ್, ಗಂಗಮ್ಮ,ಕೊಟ್ರೇಶ್,ಜಯಬಾಯಿ,ಪಿಡಿಓ ಕೋಕಿಲಾ ಸೇರಿದಂತೆ ಗ್ರಾಪಂ ಸಿಬ್ಬಂದಿ ಹಾಗೂ ಭಕ್ತರ ಮಹಾಪೂರವೇ ಪಾಲ್ಗೊಂಡಿತ್ತು.
-----------------------------------------------------------------
ಬ್ರಹ್ಮರಥೋತ್ಸವಕ್ಕೂ ಮುನ್ನಾದಿನದಿಂದ ರಾಸುಗಳು ಸೇರುವುದು ವಾಡಿಕೆಯಾಗಿದ್ದು ಅದರಂತೆ ನಡೆಯುತ್ತ ಬಂದಿದೆ. ಇಲ್ಲಿ ನಡೆಯುವ ದನಗಳ ಜಾತ್ರೆ ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿದ್ದು ವಿವಿಧ ಜಿಲ್ಲೆಗಳಿಂದ ರಾಸುಗಳನ್ನು ಕೊಳ್ಳಲು ಹಾಗು ಮಾರಾಟ ಮಾಡಲು ರೈತರು ಆಗಮಿಸುವ ವಾಡಿಕೆಯಿದೆ. ನಿರೀಕ್ಷೆಗೂ ಮೀರಿದ ದನಗಳು ಬಂದಿದ್ದು ರಾಸುಗಳ ಬೆಲೆ ಗಗನಕ್ಕೇರಿದೆ. ಬ್ರಹ್ಮರಥೋತ್ಸವದ ದಿನದ ನಂತರ ಸುತ್ತಮುತ್ತಲ ಭಾಗದಿಂದ ಇನ್ನಷ್ಟು ದನಗಳು ಮಾರಾಟ ಮಾಡಲು ಬರುವುದಿದ್ದು .ಮಾರ್ಚ್ ೨೬ ರವರೆಗೆ ಜಾತ್ರೆ ಮುಂದುವರೆಯಲಿದೆ.
-----------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ