ಹುಳಿಯಾರು: ಮಳೆಬೆಳೆ ಕೈಕೊಟ್ಟಿರುವ ಇಂದು ರೈತನಿಗೆ ಹಣ ಕೊಟ್ಟು ನೆಮ್ಮದಿಯ ಜೀವನ ನಿರ್ವಹಣೆ ಮಾಡುವಂತೆ ಮಾಡಿರುವ ಡೈರಿಗಳು ರೈತನ ಪಾಲಿನ ಲಕ್ಷ್ಮೀ ದೇವಸ್ಥಾನಗಳು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೆಶಕ ಹಳೆಮನೆ ಶಿವನಂಜಪ್ಪ ತಿಳಿಸಿದರು.
ಹುಳಿಯಾರು ಸಮೀಪದ ಪುರದಮಠದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನವಾಗಿ ಆರಂಭಿಸಿರುವ ಬಿಎಂಸಿ ಘಟಕದ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹುಳಿಯಾರು ಸಮೀಪದ ಪುರದಮಠದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನವಾಗಿ ಆರಂಭಿಸಿರುವ ಬಿಎಂಸಿ ಘಟಕವನ್ನು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಉದ್ಘಾಟಿಸಿದರು. ಹಳೆಮನೆ ಶಿವನಂಜಪ್ಪ, ಕೆ.ಶಾಂತಪ್ಪ ಮತ್ತಿತರರು ಇದ್ದಾರೆ. |
ಕೊಬ್ಬರಿ ಮಾರಲು ತಿಪಟೂರಿಗೂ, ಹುಣಸೆ ಮಾರಲು ತುಮಕೂರಿಗೂ, ಅಡಿಕೆ ಮಾರಲು ಭೀಮಸಂದ್ರಕ್ಕೂ ಹೋಗಬೇಕು. ಆದರೆ ಹಾಲು ಮಾರಲು ದೂರದೂರಿಗೆ ಹೋಗದೆ ತಮ್ಮ ಊರಿನ ಹಾಲಿನ ಡೈರಿಯಲ್ಲಿ ಮಾರಬಹುದು. ಅದೂ ದರ ಹೆಚ್ಚುಕಡಿಮೆಯಾಗದೆ ಪ್ರತಿದಿನ ಒಂದೇ ದರದಲ್ಲಿ ಮಾರಬಹುದು. ಹಾಗಾಗಿ ಇಂದು ಹಾಲಿನ ಡೇರಿಗಳು ಪ್ರತಿದಿನ ಬೆಳಿಗ್ಗೆ-ಸಂಜೆ ರೈತನಿಗೆ ಹಣ ನೀಡುವ ಲಕ್ಷ್ಮಿ ದೇವಸ್ಥಾನಗಳಾಗಿವೆ. ಈ ಸತ್ಯ ಮನವರಿಕೆ ಮಾಡಿ ಪ್ಯಾಟೆಯಲ್ಲಿ ಇನ್ನೊಬ್ಬರ ಕೈಕೆಳಗೆ ಮೂರ್ನಾಲ್ಕು ಸಾವಿರಕ್ಕೆ ಕೂಲಿ ಮಾಡಿ ದುಬಾರಿ ವೆಚ್ಚ ಹಾಗೂ ಒತ್ತಡದ ಜೀವನ ನಡೆಸುತ್ತಿರುವ ಯುವಕರಿಗೆ ಮುಕ್ತಿ ಕೊಡಬೇಕಾಗಿದೆ ಎಂದರು.
ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಅವರು ಮಾತನಾಡಿ ಉತ್ಪಾದಕರ ನಿಯತ್ತು ಸಂಘದ ಸಂಪತ್ತಾಗಿದ್ದು ಹಾಲು ಉತ್ಪಾದಕರು ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಇದ್ದರೆ ಸಂಘದ ಏಳಿಗೆ ಸಾಧ್ಯ. ಈ ನಿಟ್ಟಿನಲ್ಲಿ ಹಾಲಿಗೆ ಕಲಬೆರಕೆ ಮಾಡದೆ ಶುದ್ಧವಾದ ಹಾಲು ಕೊಟ್ಟು ಸಂಘವನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವ ಮೂಲಕ ತನ್ನ ಅಭಿವೃದ್ಧಿಯನ್ನು ಕಂಡುಕೊಳ್ಳಬೇಕು ಎಂದರು.
ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ಬಲರಾಮ್ ಅವರು ಮಾತನಾಡಿ ಇಂದಿನ ಜಾಗತೀಕರಣದಲ್ಲಿ ಕೃಷಿಕರು ಕ್ವಾಂಟಿಟಿಗೆ ಬದಲು ಕ್ವಾಲಿಟಿಗೆ ಗಮನ ಹರಿಸುವ ಅಗತ್ಯವಿದ್ದು ಶುದ್ಧಹಾಲು ಉತ್ಪಾದನೆಗೆ ರಾಸು ಆರೋಗ್ಯ, ಖನಿಜ ಮಿಶ್ರಣ ಆಹಾರ, ಕಾಲಕಾಲಕ್ಕೆ ಲಸಿಕೆ ಹಾಗೂ ಕೊಟ್ಟಿಗೆ ಸ್ವಚ್ಚವಾಗಿಟ್ಟುಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದರು.
ಸಹಾಯಕ ವ್ಯವಸ್ಥಾಪಕ ಎ.ಪಿ.ಯರಗುಂಟಪ್ಪ ಅವರು ಮಾತನಾಡಿ ಹೈನುಗಾರಿಕೆಯಲ್ಲಿ ಲಾಭ ಪಡೆಯಬೇಕಾದರೆ ಹಸುಗಳ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವುದು ಬಹುಮುಖ್ಯ. ಈ ನಿಟ್ಟಿನಲ್ಲಿ ಕೆಚ್ಚಲುಬಾವು ಬಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕೆಚ್ಚಲುಬಾವು ಬಂದಿರುವ ಲಕ್ಷಣ ಕಂಡರೆ ಪೊಟಾಷಿಯಂ ಪರಮಾಂಗ್ನೇಟ್ ಅಥವಾ ಬೇವಿನ ಎಣ್ಣೆ ಹಚ್ಚಬೇಕು. ಕಾಲಾಕಾಲಕ್ಕೆ ಲಸಿಕೆಗಳನ್ನು ಕೊಡಿಸುತ್ತಿರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಶಾಂತಪ್ಪ ಅವರು ವಹಿಸಿದ್ದರು. ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಎನ್.ಆರ್.ನಾಗರಾಜು, ಉಪವ್ಯವಸ್ಥಾಪಕ ಡಾ.ಎಂ.ಎನ್.ಚಂದ್ರಪ್ಪ, ಉಪ ವ್ಯವಸ್ಥಾಪಕ ಎಚ್.ಎಸ್.ಸಿದ್ಧರಾಮಯ್ಯ, ವಿಸ್ತರಣಾಧಿಕಾರಿ ಎಂ.ಎನ್.ಮಹೇಶ್, ಸಿ.ರಾಜು, ವಿಸ್ತರಣಾ ಸಮಾಲೋಚಕರಾದ ಎಂ.ಕೆ.ಸುಮಿತ್ರ, ಪಶು ಆಸ್ಪತ್ರೆ ಸಹಾಯಕ ನಿರ್ದೆಶಕ ಡಾ.ವೈ.ಜಿ.ರಂಗನಾಥಯ್ಯ, ಕಾರ್ಯದರ್ಶಿ ಸಿ.ಶೇಖರಪ್ಪ, ಹಾಲು ಪರೀಕ್ಷಕ ರಾಮಯ್ಯ, ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ