ಹುಳಿಯಾರು:ಧ್ಯಾನವೆಂಬುದು ತನ್ನನ್ನು ತಾನು ಕಳೆದುಕೊಳ್ಳುವ ಮೂಲಕ ನಮ್ಮಲ್ಲಿ ಹುದುಗಿರುವ ಅಪಾರ ಶಕ್ತಿಯನ್ನು ಅರಿಯುವ ಕ್ರಿಯೆ ಎಂದು ಉಪನ್ಯಾಸಕರಾದ ಶಶಿಭೂಷಣ್ ತಿಳಿಸಿದರು.
ಹುಳಿಯಾರಿನ ಶ್ರೀ ರಾಮಚಂದ್ರ ಮಿಷನ್ ಆಶ್ರಮದಲ್ಲಿ ನಡೆದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಿ ಅವರು ಮಾತನಾಡಿದರು.
ಉಪನ್ಯಾಸಕರಾದ ವೈ.ಆರ್.ಗೋಪಿ ಪ್ರಸ್ತಾವಿಕ ನುಡಿಗಳನ್ನಾಡುತ್ತಾ ಶ್ರೀ ರಾಮಚಂದ್ರ ಮಿಷನ್ ವಿಶ್ವಸಂಸ್ಥೆಯ ಸಹಯೋಗದೊಂದಿಗೆ ಪ್ರತಿವರ್ಷವೂ ರಾಷ್ಟ್ರಮಟ್ಟದ ಪ್ರಬಂಧ ರಚನಾ ಕಾರ್ಯಕ್ರಮ ನಡೆಸುತ್ತಿರುವುದರ ಬಗ್ಗೆ ವಿವರ ನೀಡಿದರು.
ಡಾ.ವೈ.ಸಿ.ಸಿದ್ರಾಮಯ್ಯ,ಥಿಯಾಸಫಿಯ ಜಗದೀಶ್ ಮಕ್ಕಳಿಗೆ ನೀತಿ ಕಥೆಗಳ ಮೂಲಕ ವ್ಯಕ್ತಿತ್ವ ವಿಕಸನದ ವಿಷಯಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಶಿಕ್ಷಕರಾದ ಮೋಹನ್ ರವರು ಮಕ್ಕಳಿಗೆ ವಿಶ್ರಾಂತಿಗೊಳ್ಳುವ ಕ್ರಿಯೆಯನ್ನು ಕಲಿಸಿಕೊಟ್ಟು ಹೇಗೆ ಒತ್ತಡರಹಿತ ಜೀವನ ನಡೆಸಬೇಕೆಂದು ವಿವರಿಸಿದರು.
ಈ ವರ್ಷ ಪ್ಲೂಟಾರ್ಕ್ ರವರ ಹೇಳಿಕೆಯಾದ "ಮನಸ್ಸೆಂಬುದು ತುಂಬಿಸಲು ಇರುವ ಖಾಲಿ ಪಾತ್ರೆಯಲ್ಲ ,ಅದು ಜಾಗೃತಗೊಳಿಸಬೇಕಾದ ಶಕ್ತಿ " ಪ್ರಬಂಧ ರಚನೆಯ ವಿಷಯವಾಗಿದ್ದು ಹುಳಿಯಾರಿನ ಜ್ಞಾನಜ್ಯೋತಿ ಶಾಲೆ,ಕನಕದಾಸ ಶಾಲೆ,ವಾಸವಿ ಆಂಗ್ಲ ಮಾಧ್ಯಮ ಶಾಲೆ,ಟಿ.ಆರ್.ಎಸ್.ಆರ್ ಶಾಲೆ , ಸರ್ಕಾರಿ ಬಾಲಕಿಯರ ಕಾಲೇಜು,ಸರ್ಕಾರಿ ಪದವಿಪೂರ್ವ ಕಾಲೇಜು ಹುಳಿಯಾರು-ಕೆಂಕೆರೆ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡು ೧೫೦ಕ್ಕೂ ಹೆಚ್ಚು ಪ್ರಬಂಧ ರಚಿಸಿದ್ದರು. ಆಯ್ಕೆಯಾದ ೨೭ ಪ್ರಬಂಧಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಉಮಾ,ಕೃಷಿ ಇಲಾಖೆಯ ತಿಪ್ಪೇಸ್ವಾಮಿ ಸೇರಿದಂತೆ ಮಕ್ಕಳ ಪೋಷಕರು ಪಾಲ್ಗೊಂಡಿದ್ದರು.ಶ್ರೀಮತಿ ಕವಿತಾ ಪ್ರಾರ್ಥಿಸಿ ,ಶಂಕರ್ ನಿರೂಪಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ