ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ 15 ಸಾವಿರದ ಗಡಿ ದಾಟುವ ಮೂಲಕ ಸರ್ವಕಾಲಿಕ ದಾಖಲೆ ಬೆಲೆ ನಿರ್ಮಾಣವಾಗಿರುವುದಲ್ಲದೆ ಈ ಹಿಂದೆ ಯಾವತ್ತೂ ಇಂತಹ ಬೆಲೆ ಬಾರದೆಯಿದ್ದು, ಗುರುವಾರ ನಡೆದ ಹರಾಜಿನಲ್ಲಿ 15,800 ರೂ ಗೆ ಮಾರಾಟವಾಗುವ ಮೂಲಕ ರಾಜ್ಯದಲ್ಲೇ ಇತಿಹಾಸ ಸೃಷ್ಠಿಸಿದೆ.
ಹುಳಿಯಾರಿನ ಎಪಿಎಂಸಿಯಲ್ಲಿ ಗುರುವಾರ ಸಂಜೆ ಹರಾಜಿನಲ್ಲಿ ಬೆಲೆ ನಮೂದಾಗಿರುವುದು. |
ಕಳೆದ ಕೆಲ ವರ್ಷಗಳಿಂದ ನೆಲಕಚ್ಚಿದ್ದ ಕೊಬ್ಬರಿಗೆ ಇದೀಗ ಶುಕ್ರದೆಸೆ ಪ್ರಾರಂಭವಾಗಿ ಹದಿನೈದು ಸಾವಿರದ ಗಡಿ ದಾಟಿದೆ . ದಿನನಿತ್ಯ ಬಳಕೆಯ ವಸ್ತುಗಳು ಸೇರಿದಂತೆ ಇನ್ನಿತರ ಕೃಷಿ ಉತ್ಪನ್ನಗಳ ಬೆಲೆ ಹೆಚ್ಚುತ್ತಿದ್ದರೂ ಸಹ ಕೊಬ್ಬರಿ ಬೆಲೆ ಮಾತ್ರ ಕೆಳಮಟ್ಟದಲ್ಲಿದ್ದದ್ದು ತೆಂಗು ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿತ್ತು. ಆದರೆ ಕಳೆದ ಕೆಲ ತಿಂಗಳಿಂದ ಕೊಬ್ಬರಿಗೆ ಉತ್ತಮ ಬೆಲೆಗೆ ಮಾರಾಟವಾಗುತ್ತಿದ್ದು ತೆಂಗು ಬೆಳೆಗಾರರಿಗೆ ಜೀವಬಂದಂತಾಗಿದೆ.
ಕೊಬ್ಬರಿ ಬೆಲೆ ಏರಿಕೆಗೆ ಕಾರಣ : ಉತ್ತಮ ಮಳೆಯಿಲ್ಲದೆ ಬರಗಾಲದ ಛಾಯೆಯಿಂದ ತೆಂಗಿಗೆ ನುಸಿರೋಗ, ಕಾಂಡದಲ್ಲಿ ರಸಸೋರುವಿಕೆ ಸೇರಿದಂತೆ ಇನ್ನಿತರ ಅನೇಕ ರೋಗಗಳು ಬಂದಿರುವುದಲ್ಲದೆ ಭೂಮಿಯಲ್ಲಿ ತೇವಾಂಶವಿಲ್ಲದೆ ತೆಂಗಿನ ಗರಿಗಳೆಲ್ಲ ಧರೆಗೆ ಮುಖಮಾಡಿದ್ದು, ಮರದ ಸುಳಿಯೆಲ್ಲಾ ಒಣಗಿ ಹೋಗಿದೆ. ಅಂತರ್ಜಲ ಕುಸಿತದಿಂದಾಗಿ ಬೋರ್ ವೆಲ್ ಗಳು ಸಹ ಬತ್ತಿ ಹೋಗಿದ್ದು, ಬೆಳೆ ಇಲ್ಲದಂತಾಗಿದೆ.. ತೆಂಗಿನ ಕಾಯಿಯ ಇಳುವರಿ ಕುಸಿದಿರುವ ಪರಿಣಾಮ ಕೊಬ್ಬರಿಯೂ ಸಹ ಕಡಿಮೆಯಾಗಿದೆ. ಈಗ ಕೊಬ್ಬರಿಗೆ ಉತ್ತಮ ಬೆಲೆಯಿದ್ದರೂ ಸಹ ಮಾರಲು ತೆಂಗು ಬೆಳೆಗಾರರಲ್ಲಿ ಕೊಬ್ಬರಿ ದಾಸ್ತಾನಿಲ್ಲದಂತಾಗಿದೆ. ಹೊರ ರಾಜ್ಯಗಳಲ್ಲಿ ಉಂಡೆ ಕೊಬ್ಬರಿ ಹಾಗೂ ಕೊಬ್ಬರಿ ಎಣ್ಣೆಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಇದೀಗ ಕೊಬ್ಬರಿ ಬೆಲೆ ಏರಿಕೆಯಾಗುತ್ತಿದೆ.
ಕೊಬ್ಬರಿ ಅವಕ ಕಡಿಮೆ : ಬೆಲೆ ಏರಿದ್ದರೂ ಸಹ ತೆಂಗು ಬೆಳೆಗಾರರಲ್ಲಿ ಕೊಬ್ಬರಿಯ ದಾಸ್ತಾನಿಲ್ಲದಾಗಿದ್ದು ಮಾರುಕಟ್ಟೆಗೆ ಬರುತ್ತಿರುವ ಕೊಬ್ಬರಿ ಪ್ರಮಾಣವು ಕ್ಷೀಣಿಸಿದೆ. ಪ್ರತಿ ಪಂಚಮಿ ಹಬ್ಬದಲ್ಲು ಕೊಬ್ಬರಿಗೆ ಬಹು ಬೇಡಿಕೆಯಿದ್ದು ಈಗಿನ ದರ ಏರಿಕೆ ಈ ಕಾರಣದಿಂದಾಗಿರಬಹುದು ಎನ್ನಲಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಆವಕವಾಗಿದ್ದ ಪ್ರಮಾಣಕ್ಕಿಂತ ಅರ್ಧದಷ್ಟು ಇಳಿಕೆ ಕಂಡಿದ್ದು, ರೈತರು ಬೆಂಬಲ ಬೆಲೆಯಲ್ಲಿ ಕೊಬ್ಬರಿ ಮಾರಾಟ ಮಾಡಲು ನಫೆಡ್ ಆಶ್ರಯ ಪಡೆಯುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಒಟ್ಟಾರೆ ಬೆಲೆ ಏರಿಕೆಯಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದರೂ ಸಹ ಅಟ್ಟದಲ್ಲಿ ಕೊಬ್ಬರಿಯಿಲ್ಲದಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ.
ನಮ್ಮ ಹತ್ರ ಮಾಲು ಇದ್ದಾಗ ಬೆಲೆಯಿರ್ಲಿಲ್ಲ , ಬೆಲೆ ಬಂದಾಗ ನಮ್ಮತ್ರ ಮಾಲೇ ಇಲ್ಲ. ಒಟ್ಟಾರೆ ರೈತರ ಸಂಕಷ್ಟ ಯಾವತ್ತೂ ಬಗೆಹರಿಯಲ್ಲ ----- ದೊಡ್ಡಬಿದರೆ ರಮೇಶ್ |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ