ಹುಳಿಯಾರು ಪಟ್ಟಣದ ಟೌನ್ ಕೋ ಅಪರೇಟೀವ್ ಕಟ್ಟಡದಲ್ಲಿರುವ ಶ್ರೀರಂಗನಾಥ ವೈನ್ಸ್ ನ ವಿವಾದ ತಾರಕಕ್ಕೇರಿದ್ದು ಅದರ ಸ್ಥಳ ಪರೀಕ್ಷೆ ಹಾಗೂ ಆಳತೆ ಮಾಡಲು ಮಂಗಳವಾರ ಆಗಮಿಸಬೇಕಿದ್ದ ಅಬಕಾರಿ ಉಪ ಆಯುಕ್ತರು ಗೈರು ಹಾಜರಾದ ಹಿನ್ನಲೆಯಲ್ಲಿ ದೇವಾಲಯ ಸಮಿತಿಯವರು ಸೇರಿದಂತೆ ಸಾರ್ವಜನಿಕರು ಆಕ್ರೋಶಭರಿತರಾಗಿ ಸ್ಥಳಕ್ಕೆ ಆಗಮಿಸಿದ್ದ ಅಬಕಾರಿ ಅಬಕಾರಿ ಉಪಅಧೀಕ್ಷಕರಿಗೆ ಘೇರಾವ್ ಹಾಕಿ ಪ್ರತಿಭಟಿಸಿದರು.
ಹುಳಿಯಾರಿನಲ್ಲಿರುವ ವಿವಾದಿತ ಶ್ರೀರಂಗನಾಥ ವೈನ್ಸ್ ಸ್ಥಳಾಂತರಿಸಲು ಕೋರಿ ಸಾರ್ವಜನಿಕರು ಅಬಕಾರಿ ಅಧಿಕಾರಿಯೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿರುವುದು.. |
ಮದ್ಯದಂಗಡಿ ಅಕ್ಷೇಪಣಾರ್ಹ ಸ್ಥಳದಲ್ಲಿದ್ದರೂ ಅದನ್ನು ಪರಿಗಣಿಸದೆ ಅವಧಿ ವಿಸ್ತರಿಸುತ್ತಿರುವ ಇಲಾಖೆಯ ಕ್ರಮದ ಬಗ್ಗೆ ಆಯುಕ್ತರು ಹಾಗೂ ಅಬಕಾರಿ ಸಚಿವರಿಗೆ ಸಾಕಷ್ಟು ದೂರುಗಳು ಸಲ್ಲಿಕೆಯಾದ ಪರಿಣಾಮ ಆಯುಕ್ತರ ಆದೇಶದ ಮೇರೆಗೆ ಎಲ್ಲಾ ದೂರುದಾರರಿಗೂ ಮಂಗಳವಾರ ಖುದ್ದು ಹಾಜರಿರಬೇಕೆಂದು ಲಿಖಿತ ಪತ್ರ ನೀಡಿದ್ದ ಜಿಲ್ಲಾ ಉಪಆಯುಕ್ತರು ತಾವೇ ಖುದ್ದು ಗೈರಾದ ಹಿನ್ನಲೆಯಲ್ಲಿ ಇಲಾಖೆಯವರೆ ಅಂಗಡಿಯವರೊಂದಿಗೆ ಶಾಮೀಲಾಗಿದ್ದಾರೆಂದು ಮಾತಿನ ಚಕಮಕಿ ನಡೆಸಿದ ಸದಸ್ಯರುಗಳು ಖುದ್ದು ಅಬಕಾರಿ ಡಿ.ಸಿ ಯವರೆ ಸ್ಥಳಕ್ಕಾಗಮಿಸಿ ಸಮಸ್ಯೆ ಪರಿಹರಿಸಬೇಕೆಂದು ಪಟ್ಟುಹಿಡಿದರು. ಅಲ್ಲದೆ ಶಾಮೀಯಾನ ಹಾಕಿ ಧರಣಿಗೆ ಮುಂದಾದರು.
ಆರೋಪ : ಸುಮಾರು ಐದುನೂರು ವರ್ಷಗಳು ಹಳೆಯದಾದ ಹುಳಿಯಾರಿನ ಗ್ರಾಮದೇವತೆ ಹುಳಿಯಾರಮ್ಮ ಹಾಗೂ ಬೀರಲಿಂಗೇಶ್ವರ ದೇವಾಲಯಗಳು ಈ ಮದ್ಯದಂಗಡಿಗೆ ಸಮೀಪವಿದ್ದು ಹಲವಾರು ವರ್ಷದಿಂದ ಅಕ್ಷೇಪಣೆ ವ್ಯಕ್ತವಾಗುತ್ತಿದ್ದರೂ ಸಹ ಅವಧಿ ವಿಸ್ತರಿಸುತ್ತಿದ್ದಾರೆ. ಮುಜುರಾಯಿ ಇಲಾಖೆಗೆ ಸೇರಿರುವ ರಂಗನಾಥಸ್ವಾಮಿ ದೇವಾಲಯಕ್ಕೂ ಮದ್ಯದಂಗಡಿಗೂ ಇರುವ ಅಂತರ ನಿಗದಿತ ಅಳತೆಗಿಂತಲೂ ಹೆಚ್ಚಿರುವುದಾಗಿ ತಪ್ಪು ಮಾಹಿತಿ ನೀಡಿ ಪರವಾನಿಗೆ ನವೀಕರಿಸುತ್ತಿದ್ದಾರೆ. ಅಬಕಾರಿ ಸನ್ನದು 1967 ರ ನಿಯಮ ಉಲ್ಲಂಘನೆಯಾಗಿದ್ದರೂ ಬೇರೆಡೆಗೆ ಸ್ಥಳಾಂತರಿಸದೆ ಅಧಿಕಾರಿಗಳೇ ಅಂಗಡಿ ಮಾಲೀಕರೊಂದಿಗೆ ಶಾಮೀಲಾಗಿ ಇರುವ ಜಾಗದಲ್ಲೇ ಮುಂದುವರಿಕೊಂಡು ಹೋಗಲು ಬಿಟ್ಟಿದ್ದಾರೆ ಎಂದು ಸಂಘಸಂಸ್ಥೆಯವರು ಆರೋಪಿಸಿದರು.
ಅಬಕಾರಿ ಉಪಆಯುಕ್ತರ ಬದಲಿಗೆ ಸ್ಥಳಕ್ಕೆ ಆಗಮಿಸಿದ್ದ ತಿಪಟೂರು ವಿಭಾಗದ ಅಬ್ಕಾರಿ ಉಪಅಧೀಕ್ಷಕ ರವಿಶಂಕರ್ ಸಾರ್ವಜನಿಕರ ಸಮಸ್ಯೆ ಆಲಿಸಿ ಡಿ.ಸಿ ಅವರು ಅಧಿವೇಶನಕ್ಕೆ ತುರ್ತಾಗಿ ಹೋದ ಪರಿಣಾಮ ತಾವು ಆಗಮಿಸಿದ್ದು ಇನ್ನೆರಡೇ ದಿನದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ಹಾಗೂ ಸಮಸ್ಯೆ ಬಗ್ಗೆ ಮಹಜರ್ ಮಾಡಿ ಲಿಖಿತ ಉತ್ತರ ನೀಡಿದ್ದರ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಹುಳಿಯಾರಮ್ಮ, ಬೀರಲಿಂಗೇಶ್ವರಸ್ವಾಮಿ,ದುರ್ಗಾಪರಮೇಶ್ವರಿ,ರಂಗನಾಥಸ್ವಾಮಿ ದೇವಾಲಯಗಳ ಸಮಿತಿಯ ನರೇಂದ್ರಬಾಬು, ಶಿವಕುಮಾರ್, ವಿಶ್ವನಾಥ್, ಎಸ್. ರಾಮಯ್ಯ, ಸೊಸೈಟಿ ಅಧ್ಯಕ್ಷ ದೇವಾನಂದ್, ಗ್ರಾ.ಪಂ.ಸದಸ್ಯರುಗಳಾದ ಬಡ್ಡಿಪುಟ್ಟರಾಜು,ಹೇಮಂತ್,ರಾಘವೇಂದ್ರ, ಅಶೋಕ್ ಬಾಬು, ಅಹಮದ್ ಖಾನ್, ರೈತಸಂಘದ ಕೆಂಕೆರೆ ಸತೀಶ್,ಕೆ.ಪಿ.ಮಲ್ಲೇಶ್, ಲೋಕೇಶ್, ಪಾತ್ರೆಸತೀಶ್,ಹೂವಿನ ರಘು,ಕರವೇಯ ಕೋಳಿಶ್ರೀನಿವಾಸ್,ಜಯಕರ್ನಾಟಕದ ವೆಂಕಟೇಶ್, ವಿಪ್ರಸಂಘದ ರಘುಕುಮಾರ್, ಶ್ರೀಧರ್ ಅಂಬೇಕರ್ , ಹಿಂದೂ ಹಿತರಕ್ಷಣಾ ವೇದಿಕೆಯ ಬಡಗಿ ರಾಮಣ್ಣ, ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಸಂಘ ಸಂಸ್ಥೆಯ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ