ದಿನದಿಂದ ದಿನಕ್ಕೆ ಚಿಕುನ್ ಗುನ್ಯಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹೋಬಳಿಯ ರಂಗನಕೆರೆ ಗ್ರಾಮದಲ್ಲಿ ಸೂಕ್ತಚಿಕಿತ್ಸೆ ದೊರೆಯದೆ ಇಲ್ಲಿನ ಜನ ಪರಿತಪಿಸುವಂತ ಚಿಂತಾಜನಕ ಸ್ಥಿತಿ ನಿರ್ಮಾಣವಾಗಿದೆ.
ಕಳೆದ 20 ದಿವಸಗಳಿಂದ ರೋಗ ಬಾಧಿಸುತ್ತಿದ್ದು ಮನೆಗಿಬ್ಬರು ರೋಗಿಗಳು ಖಾಯಿಲೆಗೆ ತುತ್ತಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಕಳೆದ ಎರಡು ದಿವಸಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿದ್ದ ತಾಲ್ಲೂಕು ವೈದ್ಯಾಧಿಕಾರಿಗಳು ಶೀಘ್ರದಲ್ಲೇ ವೈದ್ಯರನ್ನು ಗ್ರಾಮಕ್ಕೆ ಕಳುಹಿಸಿ ಚಿಕಿತ್ಸೆ ನೀಡುವುದಾಗಿ ಹಾಗೂ ಕುಗ್ರಾಮವಾಗಿರುವುದರಿಂದ ತಮ್ಮದೇ ವಾಹನದ ಮೂಲಕ ಹೊಯ್ಸಳಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಭರವಸೆಯಿತ್ತಿದ್ದರು.
ಹುಳಿಯಾರು ಹೋಬಳಿ ರಂಗನಕೆರೆ ಗ್ರಾಮದಲ್ಲಿ ಚಿಕುನ್ ಗುನ್ಯಾ ಪೀಡಿತರು ಚಿಕಿತ್ಸೆಗಾಗಿ ಕಾದು ಕುಳಿತಿರುವುದು. |
ಅದರಂತೆ ಜಿಲ್ಲಾ ಕೇಂದ್ರದಿಂದ ಸಂಚಾರಿ ಆರೋಗ್ಯ ಘಟಕದ ವಾಹನ ಗ್ರಾಮಕ್ಕೆ ಬಂದು ಪ್ರದಕ್ಷಿಣೆ ನಡೆಸಿ ಹೋಗಿದ್ದು ನಂತರ ಮಂಗಳವಾರ ಮಧ್ಯಾಹ್ನದ ವೇಳೆಗೆ ಗ್ರಾಮಕ್ಕೆ ನುರಿತ ವೈದ್ಯರಿಲ್ಲದ ಕೇವಲ ಶುಶ್ರುಕಿಯರನ್ನೊಳಗೊಂಡ ತಂಡ ಬೇಕಾದ ಚಿಕಿತ್ಸಾ ಸಾಮಗ್ರಿಗಳನ್ನ,ಔಷಧಿಗಳನ್ನು ತರದೆ ಬರೀ ಒಆರ್ಎಸ್ ಪುಡಿ ಮಾತ್ರ ತಂದು ಚಿಕಿತ್ಸೆ ಕೊಡಲು ಆರಂಭಿಸಿದರು. ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿ ನಿತ್ರಾಣರಾಗಿ ನಡೆಯಲಾಗದೆ ತತ್ತರಿಸಿ ಹೋಗಿದ್ದರು ಸಹ ಏನೂ ತಾರದೇ ಬರಿಗೈಲಿ ಬಂದು ಹೇಗೆ ಚಿಕಿತ್ಸೆ ನೀಡುತ್ತಿರಿ ಎಂದು ಗ್ರಾಮಸ್ಥರು ಅವರು ನೀಡುವ ಚಿಕಿತ್ಸೆ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ ಸಂಜೆ 5.30ರ ವೇಳೆಗೆ ಒಬ್ಬ ವೈದ್ಯರನ್ನು ಕಳುಹಿಸಿ ಚಿಕಿತ್ಸೆ ಕೊಡಿಸುವುದರ ಜತೆಗೆ ತುರ್ತು ಚಿಕಿತ್ಸೆ ನೀಡಲು 108 ವಾಹನದ ವ್ಯವಸ್ಥೆ ಮಾಡಿದರು. ನಂತರ ಕೆಲ ಮಂದಿಯನ್ನು ಹುಳಿಯಾರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು.
ಸ್ವಚ್ಛತೆಗೆ ಮುಂದಾದ ಗ್ರಾ.ಪಂ : ಚಿಕನ್ ಗುನ್ಯಾ ಉಲ್ಬಣವಾಗುತ್ತಿರುವ ಹಿನ್ನಲೆಯಲ್ಲಿ ಗಾಣಧಾಳು ಗ್ರಾ.ಪಂ ಕಾರ್ಯದರ್ಶಿ ಜ್ಞಾನಮೂರ್ತಿ ಹಾಗೂ ಸಿಬ್ಬಂದಿಯವರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು, ಪ್ರತಿ ಮನೆಗಳಿಗೆ ತೆರಳಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುತ್ತಿರುವುದಲ್ಲದೆ, ಬೀದಿಗಳಲ್ಲಿ ಫಾಗಿನ್ ಸಹ ಮಾಡಿದ್ದಾರೆ. ರೋಗ ಉಲ್ಬಣವಾಗುವ ಮುಂಚೆಯೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ