ಗ್ರಾಮ ಪಂಚಾಯ್ತಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸಲು ಕೇಬಲ್ ಹೊಳಲು ಸುಮಾರು ಎರಡು ಕಿ.ಮೀ ಗೂ ಹೆಚ್ಚು ದೂರ ಆಳುದ್ದ ತೆಗೆದಿದ್ದ ಗುಂಡಿಯನ್ನು ಲೋಕೋಪಯೋಗಿಇಲಾಖೆ ಅಧಿಕಾರಿಗಳು ಮುಚ್ಚಿಸಿದ ಘಟನೆ ಶನಿವಾರ ಪೊಚಗಟ್ಟೆ-ಬರಕನಹಾಳ್ ರಸ್ತೆಯಲ್ಲಿ ನಡೆದಿದೆ.
ಹುಳಿಯಾರು ಸಮೀಪದ ಬರಕನಹಾಳ್ ರಸ್ತೆಯಲ್ಲಿ ನೆಟ್ ಸಂಪರ್ಕಕ್ಕೆ ಆಳುದ್ದ ತೆಗೆದಿರುವ ಕಾಲುವೆ. |
ಸಹಾಯಕ ಎಂಜಿನಿಯರ್ ಚಂದ್ರಶೇಖರ್ ಸೂಚನೆ ಮೇರೆಗೆ ವಾಪಸ್ಸ್ ಕಾಲುವೆ ಮುಚ್ಚುತ್ತಿರುವುದು. |
ಪ್ರತಿ ಗ್ರಾ.ಪಂ.ಯಲ್ಲಿಯೂ ಎಲ್ಲಾ ದಾಖಲೆಗಳನ್ನು ಈ-ಸ್ವತ್ತಿನಡಿ ನೀಡಬೇಕಾಗಿರುವುದರಿಂದ ಪ್ರತಿಯೊಂದು ಪಂಚಾಯ್ತಿಯೂ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸೇವೆ ಅಗತ್ಯವಾಗಿದ್ದು, ಇದೀಗ ಎಲ್ಲೆಡೆ ನೆಟ್ ಸೇವೆಗೆ ದೂರಸಂಪರ್ಕ ಇಲಾಖೆ ಮುಂದಾಗಿದೆ. ಗ್ರಾಮಾಂತರ ಪ್ರದೇಶವಾದ ಬರಕನಹಾಳ್ ಗ್ರಾ.ಪಂ. ಕಚೇರಿಗೆ ಇಂಟರ್ ನೆಟ್ ಸೌಲಭ್ಯಕ್ಕಾಗಿ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲು ದೂರಸಂಪರ್ಕ ಇಲಾಖೆ ಮುಂದಾಗಿದ್ದು ಇದಕ್ಕಾಗಿ ಸುಮಾರು ಎರಡು ಕಿ.ಮೀ ಗೂ ಹೆಚ್ಚು ದೂರ ಗುಂಡಿತೆಗೆಯಲು ಗುತ್ತಿಗೆ ನೀಡಿದ್ದು, ಕಳೆದ ಮೂರು ದಿನಗಳಿಂದ ಜೆ.ಸಿ.ಬಿ, ಹಾಗೂ ಹಿಟ್ಯಾಜಿ ಮೂಲಕ ರಸ್ತೆಪಕ್ಕ ಕಾಲುವೆ ತೆಗೆಯಲಾಗುತ್ತಿತ್ತು. ಟಾರ್ ರಸ್ತೆಯ ಪಕ್ಕದಲ್ಲೇ ತೆಗೆಯುತ್ತಿರುವುದರಿಂದ ರಸ್ತೆಗೆ ಹಾನಿಯಾಗಲಿದೆ ಎಂದು ದೂರು ಕೇಳಿಬಂದ ಹಿನ್ನಲೆಯಲ್ಲಿ ಲೋಕೋಪಯೋಗಿಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ರಸ್ತೆಗೆ ಅಂಟಿಕೊಂಡಂತೆ ಸುಮಾರು ಎರಡು ಮೀಟರ್ ಆಳ ತೆಗೆಯುವುದರಿಂದ ರಸ್ತೆ ಶೀಘ್ರವೇ ಹಾಳಾಗಲಿದೆ, ಹಾಗೂ ಪೂರ್ವಾನುಮತಿಯಿಲ್ಲದೆ ಕಾಮಗಾರಿ ಕೈಗೊಂಡು ನಿಯಮ ಉಲ್ಲಂಘಿಸಿದ್ದಾರೆ ಎಂದು ತೆಗೆದಿದ್ದ ಕಾಲುವೆಯನ್ನು ಕೂಡಲೇ ಮುಚ್ಚುವಂತೆ ಸಹಾಯಕ ಎಂಜಿನಿಯರ್ ಚಂದ್ರಶೇಖರ್ ಸೂಚಿಸಿದರು.
ಈ ಬಗ್ಗೆ ಹುಳಿಯಾರಿನ ದೂರಸಂಪರ್ಕ ಅಧಿಕಾರಿಗಳನ್ನು ಸಂಪರ್ಕಿಸಲಾಗಿ ಈ ಬಗ್ಗೆ ತಮಗೂ ಸರಿಯಾದ ಮಾಹಿತಿ ಇಲ್ಲ ಎಂದು ಉತ್ತರಿಸಿದ್ದು ನಿಯಮ ಪಾಲಿಸದೆ ಬೇಜವಬ್ದಾರಿತನ ತೋರಿರುವ ಅಧಿಕಾರಿಗಳ ವರ್ತನೆ ಬಗ್ಗೆ ಸಾರ್ವಜನಿಕರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ