ಜೀವರಾಶಿಗಳಲ್ಲಿ ಶ್ರೇಷ್ಠನಾಗಿರುವ ಮಾನವನಿಗೆ ಜೀವನದಲ್ಲಿ ಒಂದಲ್ಲ ಒಂದು ವಿಷಯದಲ್ಲಿ ಅನುಭವಗಳಿದ್ದು ಅವುಗಳನ್ನು ಲಿಖಿತ ರೂಪದಲ್ಲಿ ದಾಖಲಿಸುವುದೇ ಅನುಭಾವ ಸಾಹಿತ್ಯವೆಂದು ಎಂದು ಬಸವಕೇಂದ್ರ ಶರಣ ಗಂಗಾಧರಯ್ಯ ತಿಳಿಸಿದರು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ನಂದ್ಯಪ್ಪನ ಬಸವರಾಜು ಅವರ ನಿವಾಸದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಮನೆಮನೆಗಳಲ್ಲಿ ಕನ್ನಡ ಕವಿ ಕಾವ್ಯಗೋಷ್ಠಿ ಪಾಕ್ಷಿಕ ಕಾರ್ಯಕ್ರಮದಲ್ಲಿ ಶಿವಶರಣರ ಅನುಭಾವ ಸಾಹಿತ್ಯದ ಬಗ್ಗೆ ಅವರು ಉಪನ್ಯಾಸ ನೀಡಿದರು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಕವಿಕಾವ್ಯ ಗೋಷ್ಠಿ ಕಾರ್ಯಕ್ರಮದಲ್ಲಿ ಶರಣ ಗಂಗಾಧರಯ್ಯ ಉಪನ್ಯಾಸ ನೀಡಿದರು. |
ಜಾನಪದಕಾರರ ಹಾಡುಗಳಲ್ಲಿ, ವಚನಕಾರರು ರಚಿಸಿದ ಸಾಹಿತ್ಯದಲ್ಲಿಯೂ ಸಹ ನಾವು ಅನುಭಾವದ ಸಾಹಿತ್ಯದ ಪರಂಪರೆಯನ್ನು ಕಾಣಬಹುದಾಗಿದ್ದು, ಅಂದಿನ ಸಮಾಜದಲ್ಲಿ ನಡೆಯುತ್ತಿದ್ದ ಜಾತಿಪದ್ದತಿ, ಅಹಿಂಸಾ ಮಾರ್ಗ ಸೇರಿದಂತೆ ಅನೇಕ ವಿಚಾರಗಳಲ್ಲಿನ ತಮ್ಮ ಅನುಭವವನ್ನು ಸಾಹಿತ್ಯ ರೂಪದಲ್ಲಿ ರಚಿಸುವ ಮೂಲಕ ನಮಗೆಲ್ಲಾ ಉಣಬಡಿಸಿದ್ದಾರೆ. ಅವರು ಹೇಳಿದಂತಹ ಅನೇಕ ವಿಚಾರಗಳನ್ನು ಪ್ರಸ್ತುತದಲ್ಲಿ ಕಾಣಬಹುದಾಗಿದೆ ಎಂದರು.
ಹಿರಿಯರ ಅನುಭವದ ಮಾತಿಗೆ ಮೂಗು ಮುರಿಯುತ್ತಿರುವ ಯುವಪೀಳಿಗೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೇವಲ ತಂತ್ರಜ್ಞಾನದಲ್ಲೇ ಎಲ್ಲವೂ ಅಡಕವಾಗಿವೆ ಎಂದು ತಿಳಿದು ಹಿರಿಯರನ್ನು ಗೌರವಿಸದೆ ನಡೆಯುತ್ತಿರುವುದು ವಿಷಾದನೀಯ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ನಿವೃತ್ತ ಶಿಕ್ಷಕ ಕೆ.ಬಿ. ಶಂಕರಯ್ಯಅವರು ಆದಿಕವಿ ಪಂಪ ರಚಿಸಿದ ಆದಿಪುರಾಣವನ್ನು ಉಲ್ಲೇಖಿಸಿ ಅವುಗಳಲ್ಲಿ ಅಡಕವಾಗಿದ್ದ ಅನುಭಾವ ಸಾಹಿತ್ಯದ ಪರಂಪರೆಯನ್ನು ತಿಳಿಸಿದರು. ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಮುಂದಾಗಿರುವ ಕಸಾಪ ನಡೆಸಿಕೊಂಡು ಬರುತ್ತಿರುವ ಈ ಕವಿಕಾವ್ಯ ಗೋಷ್ಠಿ ಇನ್ನೂ ಹೆಚ್ಚಿನದಾಗಿ ಬೆಳೆಯಲಿ ಹಾಗೂ ಸಾಹಿತ್ಯಾಸಕ್ತರ ಬೆಂಬಲದಿಂದ ಪ್ರತಿ ಗ್ರಾಮಗಳಲ್ಲಿ ನಿತ್ಯ ಈ ಕಾರ್ಯ ನಡೆಯುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮಕ್ಕೂ ಮುನ್ನಾ ಕಳೆದ ವಾರ ನಿಧನರಾದ ತುಮಕೂರು ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷರಾದ ನಿ.ರಾ.ಸದಾನಂದ ಅವರಿಗೆ ಮೌನಶ್ರದ್ದಾಂಜಲಿ ಸಲ್ಲಿಸಲಾಯಿತು.
ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನ ತ.ಶಿ.ಬಸವಮೂರ್ತಿ,ಯಲ್ಲಪ್ಪ,ನಾರಾಯಣ್ಣ, ಉಪನ್ಯಾಸಕ ನಟರಾಜ್,ಹೊನ್ನಪ್ಪ,ಕುಮಾರಸ್ವಾಮಿ, ನಿವೃತ್ತ ಶಿಕ್ಷಕ ಬಸವರಾಜು, ನಿರಂಜನ್,ಕೊಟ್ರೇಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೆಂಕೆರೆ ಗ್ರಾಮದಲ್ಲಿ ಈಚೆಗೆ ನಡೆದ ಕವಿಕಾವ್ಯ ಗೋಷ್ಠಿ ಕಾರ್ಯಕ್ರಮದಲ್ಲಿ ಕಸಾಪದ ತ.ಶಿ.ಬಸವಮೂರ್ತಿ ಮಾತನಾಡಿದರು.ಶರಣ ಗಂಗಾಧರಯ್ಯ, ನಿವೃತ್ತ ಶಿಕ್ಷಕ ಶಂಕರಣ್ಣ ಇದ್ದರು. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ