ಹುಳಿಯಾರು: ತಮ್ಮ ಉತ್ಪನ್ನದ ಪ್ರಚಾರಕ್ಕೆ ಲಕ್ಷಾಂತರ ರೂಪಾಯಿ ಹಣವನ್ನು ಪತ್ರಿಕಾ ಜಾಹಿರಾತಿಗೋಸ್ಕರವೇ ಖರ್ಚು ಮಾಡುವ ಕಂಪನಿಗಳ ಮಧ್ಯೆ ರಾಜ್ಯದ ಕೆ.ಎಂ.ಎಫ್ ಪತ್ರಿಕಾ ವರದಿಯನ್ನೇ ಜಾಹಿರಾತಾಗಿ ಬಳಸಿಕೊಳ್ಳುವ ಮೂಲಕ ಜಾಣ ನಡೆಯಿಟ್ಟಿದ್ದು, ಇದು ಕನ್ನಡಪ್ರಭ ಪತ್ರಿಕೆಯ ವಸ್ತುನಿಷ್ಠ ವರದಿಗೆ ಸಿಕ್ಕ ಗೌರವವೆನ್ನಬಹುದಾಗಿದೆ.
ಹುಳಿಯಾರಿನ ನಂದಿನಿಹಾಲಿನ ಬೂತ್ ಒಂದರಲ್ಲಿ ತುಮಕೂರು ಸಹಕಾರಿ ಹಾಲು ಒಕ್ಕೂಟದಿಂದ ಕಳುಹಿಸಿರುವ ಜಾಹಿರಾತು ಫಲಕ. |
ರಾಸಾಯನಿಕ ಮಿಶ್ರಿತ ಖಾಸಗಿ ಬ್ರಾಂಡ್ ನ ಹಾಲಿನ ದಂಧೆಯ ಬಗ್ಗೆ ವಿಶೇಷ ಕಾಳಜಿಹೊಂದಿ ಕಳೆದ 10 ಡಿಸೆಂಬರ್ 2013 ರಿಂದ ಸತತ ನಾಲ್ಕು ದಿನಗಳ ಕಾಲ ವಿಶೇಷ ವರದಿಯನ್ನು ಕನ್ನಡಪ್ರಭ ಪ್ರಕಟಿಸಿತ್ತು.
ವರದಿಯಲ್ಲಿ ಏನಿತ್ತು: ರಾಜ್ಯದಲ್ಲಿ ಮಾರುಕಟ್ಟೆಯಲ್ಲಿರುವ 50ಕ್ಕೂ ಹೆಚ್ಚು ಬ್ರ್ಯಾಂಡೆಡ್ ಹಾಗೂ ಕಲಬೆರಿಕೆ ಹಾಲಿನ ಗುಣಮಟ್ಟದ ಬಗ್ಗೆ ಸವಿವರ ವರದಿ ಮಾಡಿತ್ತು. ಕೆಲವೊಂದು ಕಂಪನಿಯ ಹಾಲಿನ ಮಾದರಿ ಗುಣಮಟ್ಟ ಪರೀಕ್ಷೆ ಮಾಡುವ ಮೂಲಕ ಕುಡಿಯುವ ಹಾಲಿನಲ್ಲಿ ಯೂರಿಯಾ, ಡಿಟರ್ಜಂಟ್, ಉಪ್ಪು, ಸಕ್ಕರೆ, ಹೈಡ್ರೋಜನ್ ಪೆರಾಕ್ಸೈಡ್, ವಾಶಿಂಗ್ ಸೋಡಾ ಅಸಿಡ್ ಹೈಪೋ ಕ್ಲೋರೈಡ್ ಹಾಗೂ ಕಾಸ್ಟಿಕ್ ಸೋಡಾ ಮಿಶ್ರಣ ಮಾಡುವುದನ್ನು ಪತ್ತೆಹಚ್ಚಿ ಬಯಲು ಮಾಡಿತ್ತು. ಅಲ್ಲದೆ ಕಲಬೆರಿಕೆ ಏಕಾಗಿ ಹಾಗೂ ಹೇಗೆ ಮಾಡಲಾಗುತ್ತದೆ ಎಂಬ ಬಗ್ಗೆಯಲ್ಲದೆ ಯಾವ ಯಾವ ಮಾದರಿಯ ಹಾಲು ಸರಬರಾಜು ಮಾಡುವ ಸಂಸ್ಥೆಗಳು ಕಳಪೆ ಹಾಲು ಪೂರೈಸುತ್ತಿದೆ ಎಂದು ಪಟ್ಟಿಮಾಡಿತ್ತು.
ರಾಜ್ಯದ ಸಹಕಾರ ಸಂಘದ ಕೆಎಂಎಫ್ ನ ನಂದಿನಿ ಹಾಲಿಗೂ ಇನ್ನಿತರ ಕಂಪನಿಗಳ ಹಾಲಿಗೂ ಗುಣಮಟ್ಟದ ವ್ಯತ್ಯಾಸ ಹೇಗಿದೆ ಎಂಬ ಚಿತ್ರಣ ನೀಡಿದಲ್ಲದೆ , ನಂದಿನಿ ಹಾಲಿಗೆ ಕಲಬೆರಕೆಯಾಗದಂತೆ ಹಾಲು ಉತ್ಪಾದಕರ ಸಹಕಾರ ಸಂಘ ತೆಗೆದುಕೊಂಡಿರುವ ಕ್ರಮದ ಬಗ್ಗೆ ವಿವರಿಸಿತ್ತು. ಈ ಮೂಲಕ ರಾಸಾಯನಿಕ ಮಿಶ್ರಿತ ಹಾಲಿನ ಬಗ್ಗೆ ಜನ ಜಾಗೃತಿ ಉಂಟುಮಾಡಿ ತೀವ್ರ ಸಂಚಲ ಉಂಟುಮಾಡಿತ್ತು.
ಜಾಹಿರಾತಾಗಿ ಬಳಕೆ: ನಿಸರ್ಗದತ್ತವಾದ ಹಾಲಿಗೆ ಹಲವು ಖಾಸಗಿ ಸಂಸ್ಥೆಯವರು ಮಾರಕ ರಾಸಾಯನಿಕ ವಸ್ತುಗಳಿಂದ ಕಲಬೆರಕೆ ಮಾಡಿ ರಾಜ್ಯಾದ್ಯಂತ ಮಾರಾಟ ಮಾಡುತ್ತಿದ್ದಾರೆ ಎಂದು ರಾಜ್ಯದ ಪ್ರತಿಷ್ಠಿತ ದಿನಪತ್ರಿಕೆಯಾಗಿರುವ ಕನ್ನಡಪ್ರಭ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿದ್ದ ವರದಿಯ ಮುಖಪುಟಗಳನ್ನೇ ಎಥಾವತ್ತಾಗಿ ಜಾಹಿರಾತಾಗಿ ತುಮಕೂರು ಸಹಕಾರಿ ಹಾಲು ಒಕ್ಕೂಟ(ತುಮುಲ್) ಬಳಸಿಕೊಂಡಿದೆ.
ಈ ಜಾಹಿರಾತನ್ನು ಸಿದ್ದ ಮಾಡಿರುವ ತುಮಕೂರು ಸಹಕಾರಿ ಹಾಲು ಒಕ್ಕೂಟ ರಾಜ್ಯದ ಎಲ್ಲಾ ನಂದಿನಿ ಹಾಲಿನ ಬೂತ್ ಗಳಿಗೆ ಅವುಗಳನ್ನು ರವಾನಿಸಿದ್ದು ಎಲ್ಲಾ ಬೂತ್ ಗಳಲ್ಲೂ ಗೋಡೆಗಳಲ್ಲಿ ನೇತುಹಾಕಿರುವ ಈ ಜಾಹಿರಾತು ಗ್ರಾಹಕರನ್ನು ತಮ್ಮತ್ತ ಸೆಳೆಯುವಂತೆ ಮಾಡಿಕೊಂಡಿವೆ.
ಒಟ್ಟಾರೆ ನಿಸ್ಪಕ್ಷಪಾತವಾದ ವರದಿಯೊಂದು ಓದುಗರಲ್ಲಿ ಕಲಬೆರಕೆ ಬಗ್ಗೆ ಎಚ್ಚರ ಮೂಡುವಂತೆ ಮಾಡಿದ್ದಲ್ಲದೆ,ಅದೇ ವರದಿ ನಂದಿನಿ ಹಾಲಿನ ಉತ್ಪನ್ನದಲ್ಲಿ ಜಾಹಿರಾತಾಗಿ ಕಂಗೊಳಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ