ಬರ ನಿರ್ವಹಣೆಯಲ್ಲಿ ವಿಫಲವಾದ ರಾಜ್ಯ ಸರ್ಕಾರ : ಆರೋಪ
ಜಿಲ್ಲೆಯ ಬರಪೀಡಿತ ಪ್ರದೇಶಗಳ ವಸ್ತುಸ್ಥಿತಿ ಅಧ್ಯಯನ ಮಾಡಲು ಮುಂದಾಗಿರುವ ಬಿಜೆಪಿ ತಂಡ ಗುರುವಾರದಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ನವಿಲೆ,ಕೆಂಕೆರೆ,ತಿಮ್ಲಾಪುರ,ಹುಳಿಯಾರು ಸೇರಿದಂತೆ ವಿವಿಧ ಹಳ್ಳಿಗಳಿಗೆ ಭೇಟಿಯಿತ್ತು ಅಲ್ಲಿ ತಲೆದೂರಿರುವ ಸಮಸ್ಯೆಯ ನೈಜಚಿತ್ರಣ ಕಲೆಹಾಕಿತು.
ನಂತರ ಹುಳಿಯಾರಿನ ಪರಿವೀಕ್ಷಣಾ ಮಂದಿರಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕಿನ ಹಾಗೂ ರಾಜ್ಯದ ಬರಪರಿಸ್ಥಿತಿಯ ಸಮಗ್ರ ಚಿತ್ರಣ ನೀಡಿ ಮಾತನಾಡಿದ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್ ರಾಜ್ಯದ ರೈತರು ಬರಗಾಲದಿಂದ ತತ್ತರಿಸಿದ್ದರೂ ಸಹ ಇದುವರೆಗೂ ಸರ್ಕಾರ ಈ ಬಗ್ಗೆ ಯಾವುದೇ ಸೂಕ್ತ ಕ್ರಮಗಳನ್ನು ಕೈಗೊಳ್ಳದೆ ಹಾಗೂ ಸೂಕ್ತ ಯೋಜನೆಯನ್ನು ರೂಪಿಸದೆ ಸಂಪೂರ್ಣ ವಿಫಲವಾಗಿದೆ ಎಂದು ಕುಟುಕಿದರು.
ರಾಜ್ಯಾದ್ಯಂತ ಯಾವಯಾವ ಜಿಲ್ಲೆ,ತಾಲ್ಲೂಕುಗಳಲ್ಲಿ ಹೆಚ್ಚು ಬರಪರಿಸ್ಥಿಯಿದೆ ಎಂಬುದರ ಬಗ್ಗೆ ಇದುವರೆಗೂ ಯಾವುದೇರೀತಿಯ ಮಾಹಿತಿಯನ್ನು ಸಂಗ್ರಹಿಸದೆ ಹಾಗೂ ಬರ ನಿರ್ವಹಣೆಗಾಗಿ ಯಾವುದೇ ತಂಡವನ್ನು ರಚಿಸದೆ ತನ್ನಪಾಡಿಗೆ ಆಡಳಿತ ನಡೆಸಿಕೊಂಡು ಹೋಗುತ್ತಿದೆ ಎಂದರು. ಬರಗಾಲದ ತೀವ್ರತೆಯಿಂದಾಗಿ ಅನೇಕ ಗ್ರಾಮಗಳ ಕೆಲ ರೈತರು ನಗರ ಪ್ರದೇಶಗಳತ್ತ ಗುಳೆ ಹೋಗುತ್ತಿದ್ದರೆ ಇನ್ನೂ ಅನೇಕ ರೈತರು ತಮ್ಮ ರಾಸುಗಳಿಗೆ ಮೇವು,ಕುಡಿಯಲು ನೀರಿಲ್ಲದೆ ಸಂಕಷ್ಟದ ಪರಿಸ್ಥಿಗೆ ಮೈಯೊಡ್ಡಿ ಜೀವನ ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು.
ಬರಗಾಲಕ್ಕೆ ಮುಂಜಾಗ್ರತೆ ಕ್ರಮವಾಗಿ ಕಳೆದ ಒಂದು ತಿಂಗಳ ಹಿಂದೆಯೇ ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದ್ದ ಸರ್ಕಾರ ಗಾಢನಿದ್ರೆಯಲ್ಲಿ ಮುಳುಗಿ ಹೋಗಿದೆ. ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳು ತಾಂಡವಾಡುತ್ತಿದ್ದು ಸರ್ಕಾರವನ್ನು ಎಚ್ಚರಿಸಲು ಬರುವ 4 ರಂದು ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಕಚೇರಿ ಮುತ್ತಿಗೆ, ಮುಂದಿನ 15 ದಿವಸಗಳ ನಂತರ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಗೂ ವಿಧಾನಸೌಧ ಮುತ್ತಿಗೆಯನ್ನು ರಾಜ್ಯ ಬಿಜೆಪಿ ರೈತ ಮೋರ್ಚಾದಿಂದ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ತಾಲ್ಲೂಕಿನ ಬರಪರಿಸ್ಥಿತಿ ವೀಕ್ಷಣೆ ಮಾಡುತ್ತಿರುವ ಬಿಜೆಪಿ ತಂಡ, |
ಮಾಜಿ ಶಾಸಕ ಬಿ.ಸಿ.ನಾಗೇಶ್ ಮಾತನಾಡಿ ರಾಜ್ಯದಲ್ಲಿ ದಿನನಿತ್ಯ ಅತ್ಯಾಚಾರ ಅನಾಚಾರಗಳದ್ದೆ ಸುದ್ದಿಯಾಗಿದ್ದು ಇಂತಹ ಬೇಜಾವಾಬ್ದಾರಿ ಸರ್ಕಾರವನ್ನು ಹಿಂದೆಂದು ಕಂಡಿಲ್ಲ ಎಂದ ಅವರು ಸದನದಲ್ಲಿ ಸಚಿವರ ವರ್ತನೆ, ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ನೋಡಿದರೇ ನಮಗೊಂದು ಸರ್ಕಾರ ಇದೆ ಎಂಬ ಭಾವನೆಯೇ ಬರುತ್ತಿಲ್ಲ ಎಂದು ಆರೋಪಿಸಿದರು.
ಗೋಷ್ಟಿಯಲ್ಲಿ ಮಾಜಿ ಶಾಸಕರಾದ ಕೆ.ಎಸ್.ಕಿರಣ್ ಕುಮಾರ್, ಮಾಡಾಳು ವಿರೂಪಾಕ್ಷಪ್ಪ, ಮುಖಂಡರಾದ ಸಿದ್ದರಾಮಯ್ಯ, ಪಂಚಾಕ್ಷರಿ, ನಂದೀಶ್, ಕೆಂಕೆರೆ ನವೀನ್, ಆರ್.ಪಿ.ವಸಂತಯ್ಯ, ರಾಮಯ್ಯ, ಪ್ರಕಾಶ್, ಗಣೇಶ್ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ