ಆಹಾರ ಧಾನ್ಯಗಳಲ್ಲಿ ಉತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುವ ರಾಗಿಯ ಬಳಕೆಯಿಂದ ಯಾವುದೇ ಕಾಯಿಲೆಗಳು ನಮ್ಮತ್ತ ಸುಳಿಯುವುದಿಲ್ಲ ಹಾಗೂ ಆರೋಗ್ಯ ವೃದ್ದಿಯಾಗುತ್ತದೆ ಎಂದು ಬ್ಯಾಡಗಿಯ ಬರಗಾಲ ವಿಜ್ಞಾನಿ ಪ್ರಶಸ್ತಿ ವಿಜೇತ ಮೂಕಪ್ಪ ಪೂಜಾರ್ ತಿಳಿಸಿದರು.
ಹೋಬಳಿಯ ಹೊಯ್ಸಳಕಟ್ಟೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ವತಿಯಿಂದ ಆಯೋಜಿಸಿದ್ದ ರಾಗಿ ಬೇಸಾಯದ ನಾಟಿಪದ್ದತಿ ಕುರಿತ ವಿಚಾರ ಸಂಕಿರ್ಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಹುಳಿಯಾರು ಹೋಬಳಿ ಹೊಯ್ಸಳಕಟ್ಟೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆಯಡಿ ನಡೆದ ರಾಗಿ ಬೇಸಾಯದ ನಾಟಿಪದ್ದತಿ ಕುರಿತ ವಿಚಾರ ಸಂಕಿರಣವನ್ನು . ತಾ.ಪಂ.ಉಪಾಧ್ಯಕ್ಷ ಆರ್.ಪಿ.ವಸಂತಯ್ಯ ಉದ್ಘಾಟಿಸಿದರು. |
ಇಂದಿನ ಆಧುನಿಕಯುಗ ಸಿರಿಧಾನ್ಯಗಳ ಬಳಕೆ ಕಡಿಮೆಯಾಗುವಂತೆ ಮಾಡಿದೆ ಎಂದ ಅವರು ಇವುಗಳ ಪೈಕಿ ರಾಗಿ ಹೆಚ್ಚು ಮಹತ್ವವನ್ನು ಪಡೆದಿದೆ. ರಾಗಿಯಿಂದ ಅನೇಕ ಆಹಾರ ಪದಾರ್ಥಗಳನ್ನು ತಯಾರಿಸಬಹುದಾಗಿದ್ದು ಅದರ ಬಳಕೆ ಆಗುತ್ತಿಲ್ಲ ಎಂದು ವಿಷಾಧಿಸಿದರು. ರಾಗಿಯನ್ನು ನಾಟಿಪದ್ಧತಿಯಿಂದ ಅತಿ ಹೆಚ್ಚು ಇಳುವರಿ ಪಡೆಯಬಹುದು ಎಂದ ಅವರು ತಾವೇ ಸ್ವತ: ಒಂದು ಎಕರೆಗೆ 18 ಕ್ಚಿಂಟಲ್ ಬೆಳೆದ ವಿಧಾನವನ್ನು ರೈತರಿಗೆ ಹಾಗೂ ರೈತ ಮಹಿಳೆಯರಿಗೆ ವಿವರಿಸಿದರು.
ತಾ.ಪಂ.ಉಪಾಧ್ಯಕ್ಷ ಆರ್.ಪಿ.ವಸಂತಯ್ಯ ಮಾತನಾಡಿ ಸರ್ಕಾರ ನೀಡುವ ಒಂದು ರೂ ಕೆ.ಜಿ ಅಕ್ಕಿಯನ್ನು ನಂಬಿಕೊಂಡು ಕೃಷಿ ಚಟುವಟಿಕೆಗಳನ್ನೇ ಮರೆಯುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ರಾಗಿ ಬೆಳೆಯುತ್ತಿದ್ದ ಪ್ರದೇಶದಲ್ಲೂ ಬೇರೆಬೇರೆ ವಾಣಿಜ್ಯ ಬೆಳೆಗಳು ಲಗ್ಗೆ ಇಟ್ಟಿವೆ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ರೈತರೇ ಆಹಾರಕ್ಕೆ ಕೈವೊಡ್ಡುವ ಕಾಲ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ಯೋಜನೆ ತಾಲ್ಲೂಕು ನಿರ್ದೇಶಕ ರೋಹಿತಾಕ್ಷ ಕಾರ್ಯಕ್ರಮ ಧರ್ಮಸ್ಥಳ ಯೋಜನೆಯು ವೈಯ್ಯಕ್ತಿಕ ಹಾಗೂ ಸಮುದಾಯ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸ್ವಾವಲಂಬನೆಯ ಬದುಕು ಬಿತ್ತುವ ಕಾರ್ಯ ಮಾಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆಯಡಿ ಒಬ್ಬ ವ್ಯಕ್ತಿ ಪ್ರತಿ ವಾರ ಹತ್ತು ರೂ ನಂತೆ ಉಳಿತಾಯ ಮಾಡಿದ್ದ ಹಣದ ಮೊತ್ತ ಕಳೆದ ಜೂನ್ ಅಂತ್ಯಕ್ಕೆ 72 ಕೋಟಿಯಾಗಿದೆ ಎಂದರು. ಈಗಾಗಲೇ ಜಿಲ್ಲೆಯಲ್ಲಿನ ಪ್ರಗತಿ ಬಂಧು ಸ್ವಸಹಾಯ ಗುಂಪುಗಳಿಗೆ 608 ಕೋಟಿಯಷ್ಟು ಸಾಲ ನೀಡಿದಿದ್ದು, ಅದರಲ್ಲಿ 303ಕೋಟಿ ಸಾಲ ತೀರುವಳಿಯಾಗಿದೆ ಎಂದರು.
ಮಾಜಿ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮದಾಸಪ್ಪ ಅಧ್ಯಕ್ಷತೆವಹಿಸಿದ್ದರು. ನವಜೀವನ ಸಮಿತಿ ತಾಲ್ಲೂಕು ಅಧ್ಯಕ್ಷ ದಶರಥ, ತಾ.ಪಂ.ಸದಸ್ಯೆ ಕವಿತಾ , ನಿವೃತ್ತ ಶಿಕ್ಷಕ ವದ್ದೀಗಪ್ಪ, ಮುಖಂಡ ಜಯಲಿಂಗರಾಜು ಇತರರಿದ್ದರು. ಕೃಷಿಇಲಾಖೆಯ ಸಹಾಯಕ ಅಧಿಕಾರಿ ನೂರುಲ್ಲಾ,ಯಗಚಿಹಳ್ಳಿಯ ಪ್ರಗತಿಪರ ರೈತ ಎಲ್.ವಿಜಯ್ ಕುಮಾರ್ ರಾಗಿ ನಾಟಿಪದ್ಧತಿಯ ವಿವಿಧ ಹಂತಗಳು ಹಾಗೂ ವಿಶೇಷತೆಗಳ ಬಗ್ಗೆ ವಿವರ ನೀಡಿದರು.ಯೋಜನೆಯ ಗಾಣಧಾಳು ವಲಯ ಮೇಲ್ವಿಚಾರಕ ಕೆ.ಎಸ್.ಸುರೇಶ್ ಸ್ವಾಗತಿಸಿ, ತಾಲ್ಲೂಕು ಕೃಷಿ ಮೇಲ್ವಿಚಾರಕ ಎಸ್.ಎಚ್.ನಾಗಪ್ಪ ನಿರೂಪಿಸಿ,ವಂದಿಸಿದರು.ಸುಮಾರು 300ಕ್ಕೂ ಹೆಚ್ಚು ರೈತ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ