ಹಿಂದಿನ ಯುಪಿಎ ಸರ್ಕಾರದಲ್ಲಿ ಕೇಂದ್ರ ರೈಲ್ವೆ ಸಚಿವರಾಗಿದ್ದ ಕರ್ನಾಟಕದವರೆ ಆಗಿದ್ದ ಮಲ್ಲಿಕಾರ್ಜುನ್ ಖರ್ಗೆ ಇದೇ ವರ್ಷದ ಫೆಬ್ರವರಿಯಲ್ಲಿ ಮಂಡಿಸಿದ್ದ ರೈಲ್ವೆ ಬಜೆಟ್ ನಲ್ಲಿ ಚಳ್ಳಕೆರೆ -ಚನ್ನರಾಯಪಟ್ಟಣ ಮಾರ್ಗ ಸಮೀಕ್ಷೆ ನಡೆಸುವುದಾಗಿ ಘೋಷಣೆ ಮಾಡಿದ್ದರು. ಈ ಮೂಲಕ ಬಹುದಿನದ ನಿರೀಕ್ಷೆಗೆ ಬೆಳಕು ಬಂದಂತಾಗಿತ್ತು. ಅದಕ್ಕೂ ಹಿಂದೆ ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದ ಜಾಫರ್ ಷರೀಪ್ ಅವರು ಕೂಡ ಆಗಾಗ್ಗೆ ಭೇಟಿ ನೀಡುತ್ತಿದ್ದ ಸಮಯದಲ್ಲಿ ಈ ಭಾಗಕ್ಕೆ ರೈಲು ಬಿಡುವುದಾಗಿ ಹೇಳುವ ಮೂಲಕ ಈ ಭಾಗದ ಜನರಲ್ಲಿ ಕನಸು ಬಿತ್ತಿದ್ದರು.
ಈ ಭಾಗದ ಆರ್ಥಿಕ ಚಟುವಟಿಕೆಗೆ ಹಾಗೂ ಇಲ್ಲಿನ ಅಭಿವೃದ್ದಿಗೆ ಪೂರಕವಾಗಿ ಇಂತಹದೊಂದು ಯೋಜನೆ ಬೇಕಾಗಿತ್ತು ಕೂಡ. ಈ ಮಾರ್ಗವಾಗಿ ಸಾಂಸ್ಕೃತಿಕ ನಗರಿ ಮೈಸೂರು ಸುತ್ತಮುತ್ತ ಸುಲಭವಾಗಿ ತಲುಪಲು ಸಹಕಾರಿಯಾಗುತ್ತಿತ್ತು ಎಂಬುದು ಈ ಭಾಗದ ಜನರ ಅಂಬೋಣ.
ಅದಕ್ಕೆ ತಕ್ಕಂತೆ ಈ ಬಾರಿ ಲೋಕಸಭಾ ಚುನಾವಣಾ ಸಮಯದಲ್ಲಿ ಈ ವಿಚಾರಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು.ಬಿಜೆಪಿಯ ಮಾಜಿ ಸಂಸದ ಜಿ.ಎಸ್.ಬಸವರಾಜು ರೈಲ್ವೆ ಯೋಜನೆ ಸಾಕಾರಗೊಳ್ಳಲು ತಾವು ಬಹುವಾಗಿ ಶ್ರಮಿಸಿದ್ದು, ಅಧಿಕಾರಿಗಳು ಮಾರ್ಗ ಸಮೀಕ್ಷೆಗೆ ಹಸಿರು ನಿಶಾನೆ ತೋರಿಸಿದ್ದಾರೆ ಎಂದಿದ್ದರು. ಹಾಲಿ ಸಂಸದರಾಗಿರುವ ಮುದ್ದಹನುಮೇಗೌಡರೂ ಸಹ ಬಸವರಾಜು ಅವರ ಯೋಜನೆಯನ್ನು ತಾವು ಮುಂದುವರಿಸುವುದಾಗಿ ಹಾಗೂ ಈ ಕುರಿತು ಶೀಘ್ರವೇ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾರ್ಗ ಸಮೀಕ್ಷೆ ಅನುಮೋದನೆಗೆ ಒಪ್ಪಿಸುವುದಾಗಿ ತಿಳಿಸಿದ್ದರು.
ಯೋಜನೆ ಕುರಿತು ಹೀಗೊಂದು ಮಾತು ಹೊರಬಿದ್ದದ್ದೇ ತಡ ಈ ಭಾಗದ ರೈತರಿಗೆ ಆತಂಕದೂಂದಿಗೆ, ಸ್ವಲ್ಪಮಟ್ಟಿನ ನೆಮ್ಮದಿಕೂಡ ಮನೆ ಮಾಡಿತ್ತು. ರೈಲು ಹೋಗುವ ಮಾರ್ಗ ಯಾವುದಿರಬಹುದು ಹಾಗೂ ಭೂಸ್ವಾಧೀನ ಮಾಡಿಕೊಂಡಲ್ಲಿ ದೊರಕುವ ಪರಿಹಾರ ಎಷ್ಟಿರಬಹುದೆಂಬ ಚರ್ಚೆಗೆ ಕೂಡ ಆಸ್ಪದವಾಗಿತ್ತು. ಯೋಜನೆ ಬಗ್ಗೆ ಎಲ್ಲರಿಗೂ ಬೆಟ್ಟದಷ್ಟು ನಿರೀಕ್ಷೆಯಿದ್ದು ಇದರಿಂದ ಭೂಮಿಯ ಬೆಲೆ ಹೆಚ್ಚಳವಾಗುವ ನಿರೀಕ್ಷೆಯಿತ್ತು.
ಒಟ್ಟಾರೆ ಈ ಬಾರಿಯ ಬಜೆಟ್ ನಲ್ಲಿ ಈ ಮಾರ್ಗದ ರೈಲು ಸಮೀಕ್ಷೆ ಬಗ್ಗೆ ಪ್ರಸ್ತಾಪವಾಗದಿರುವುದು ಎಲ್ಲರ ನಿರೀಕ್ಷೆ ಹುಸಿಯಾದಂತಾಗಿದೆ.
ಪ್ರಸ್ತುತ ಸದಾನಂದಗೌಡರು ಮಂಡಿಸಿರುವ ಬಜೆಟ್ ಇದೇ ಅಂತಿಮವಲ್ಲ ಇನ್ನು ಯೋಜನೆಗಳಿವೆ ಎಂದಿರುವ ಸಚಿವರು ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಪೂರ್ವಕ ಬಜೆಟ್ ನಲ್ಲಿ ಹೇಳಿದ್ದ ಯೋಜನೆಗಳನ್ನು ಮುಂದುವರೆಸುವುದಾಗಿ ಹೇಳಿರುವುದು ಇನ್ನು ಈ ಭಾಗದ ಜನರ ಆಶಾಭಾವನೆ ಜೀವಂತವಾಗಿ ಉಳಿಯುವಂತೆ ಮಾಡಿದೆ.
ಬಜೆಟ್ ಬಗ್ಗೆ ಪ್ರತಿಕ್ರಿಯೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ