ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಪಡಿತರ ವಿತರಣೆಯಲ್ಲಿ ಕೆಲವೊಂದು ಸುಧಾರಣಾ ಕ್ರಮಕೈಗೊಂಡಿರುವ ಹಿನ್ನಲೆಯಲ್ಲಿ ಪಡಿತರ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಕಾರ್ಡ್ ಸಂಖ್ಯೆ ಹಾಗೂ ಕಾರ್ಡ್ ನಲ್ಲಿರುವ ಸದಸ್ಯರ ಮತದಾನದ ಗುರುತಿನ ಚೀಟಿ(ಎಪಿಕ್) ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ಮೊಬೈಲ್ ಮೂಲಕ ನೊಂದಾಯಿಸುವಂತೆ ಕೋರಿದ್ದು ಎಸ್ ಎಂ ಎಸ್ ಮೂಲಕ ಮಾಹಿತಿ ಕಳುಹಿಸುವಲ್ಲಿ ಗ್ರಾಮೀಣ ಭಾಗದ ಕಾರ್ಡ್ ದಾರರು ಗೊಂದಲದಲ್ಲಿ ಸಿಲುಕಿ ಪೇಚಾಡುವಂತಾಗಿದೆ.
ಅಸಲಿ ಪಡಿತರ ಕಾರ್ಡ್ ಹಾಗೂ ಒಂದೇ ಕುಟುಂಬದ ಸದಸ್ಯರು ಎರಡು ಕಾರ್ಡ್ ಗಳನ್ನು ಪಡೆದಿರುವುದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಕುಟುಂಬದ ಸದಸ್ಯರ ಗುರುತಿನ ಚೀಟಿ(ಎಪಿಕ್) ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ಮೊಬೈಲ್ ಮೂಲಕ 9212357123 ಸಂಖ್ಯೆಗೆ ಸಂದೇಶ ಕಳುಹಿಸಿ ನೊಂದಾಯಿಸುವಂತೆ ಎಲ್ಲಾ ನ್ಯಾಯಬೆಲೆಅಂಗಡಿಗಳಲ್ಲಿ ತಿಳಿಸುತ್ತಿದ್ದು, ಯಾವ ರೀತಿ ಕಳುಹಿಸಬೇಕೆಂಬ ಒಂದು ಮಾದರಿಯನ್ನು ಅಂಗಡಿಯ ಫಲಕದಲ್ಲಿ ಲಗತ್ತಿಸಿದ್ದಾರೆ. ಚಾಲ್ತಿಯಲ್ಲಿರುವ ಪಡಿತರ ಚೀಟಿದಾರರು ಹಾಗೂ 2010 ಕ್ಕಿಂತಲೂ ಹಿಂದೆ ಹೊಂದಿರುವ ಕಾರ್ಡ್ ಗಳನ್ನು ನವೀಕರಿಸಿಕೊಳ್ಳಲು ವಿವರವಾದ ಮಾಹಿತಿಯಿದ್ದರೂ ಸಹ ವಿವರವನ್ನು ಮೊಬೈಲ್ ಮೂಲಕ ಕಳುಹಿಸಬೇಕಾಗಿರುವುದೇ ತೊಡಕಿಗೆ ಕಾರಣವಾಗಿದೆ.
ಪಡಿತರ ಕಾರ್ಡ್ ಸಂಖ್ಯೆಯನ್ನು ಎಸ್ ಎಂಎಸ್ ಮೂಲಕ ನೊಂದಾಯಿಸುವಂತೆ ಇಲಾಖೆ ಕಳುಹಿಸಿರುವ ಜಾಹಿರಾತು. |
ಸಮಸ್ಯೆ: ಮೊದಲು ಕಾರ್ಡ್ ನ ಸಂಖ್ಯೆಯನ್ನು ರಿಜಿಸ್ಟರ್ ಮಾಡಿ ನಂತರ ಕಾರ್ಡ್ ಸದಸ್ಯರ ಗುರುತಿನ ಚೀಟಿ(ಎಪಿಕ್) ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ರಿಜಿಸ್ಟರ್ ಮಾಡಬೇಕಿದೆ. ಕೆಲವೊಮ್ಮೆ ಕಾರ್ಡ್ ಸಂಖ್ಯೆಯ ರಿಜಿಸ್ಟರ್ ಮಾಡಲು ಸಂದೇಶ ಕಳುಹಿಸಿದರೆ ಸ್ವೀಕೃತಿಯ ಬಗ್ಗೆ ಯಾವುದೇ ರೀತಿಯ ಸಂದೇಶ ಪುನ ಬರುತ್ತಿಲ್ಲ, ಅಲ್ಲದೆ ಕೆಲ ಸಮಯ ಕಾರ್ಡ್ ರಿಜಿಸ್ಟರ್ಡ್ ಎಂದು ಬಂದಿದ್ದರೂ ಸಹ ಸದಸ್ಯರ ಉಳಿದ ಆಧಾರ್ ಹಾಗೂ ಗುರುತಿನ ಸಂಖ್ಯೆ ಕಳುಹಿಸಿದರೆ ಯಾವುದೇ ಮಾಹಿತಿ ಬರುತ್ತಿಲ್ಲವಾಗಿ ಕಾರ್ಡ್ ದಾರರು ಪರದಾಡುವಂತಾಗಿದೆ. ಈ ಬಗ್ಗೆ ನ್ಯಾಯಬೆಲೆ ಅಂಗಡಿಯವರನ್ನು ಕೇಳಿದರೆ ಅವರಿಗೂ ಸಹ ಸರಿಯಾದ ಮಾಹಿತಿಯಿಲ್ಲದೆ ಕಾರ್ಡ್ ದಾರರೊಂದಿಗೆ ಸ್ಪಂದಿಸುತ್ತಿಲ್ಲ. ಕಾರ್ಡ್ ಗಾಗಿ ಭಾವಚಿತ್ರ ತೆಗಿಸಿದ ಸಂದರ್ಭದಲ್ಲಿ ಮೊಬೈಲ್ ನಂ ನೀಡಿದ್ದರೆ ಆ ನಂಬರ್ ನಿಂದಲ್ಲೇ ಕಾರ್ಡ್ ಗಳ ಸಂಖ್ಯೆ ರಿಜಿಸ್ಟರ್ ಮಾಡಬೇಕು ಎನ್ನುತ್ತಾರೆ ಕೆಲವರು. ಒಟ್ಟಾರೆ ಸರ್ಕಾರದ ಈ ಆದೇಶದಿಂದ ಸಾರ್ವಜನಿಕರಿಗೆ ಕಿರಿಕಿಯಾಗಿದ್ದು ನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ಅಲೆಯುವಂತಾಗಿದೆ.
ಪಡಿತರ ಕಾರ್ಡ್ ಸಂಖ್ಯೆಯನ್ನು ಮೊಬೈಲ್ ಮೂಲಕ ನೊಂದಾಯೊಸುವ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಹಾಕಿರುವುದು. |
ಪಡಿತರ ಕಾರ್ಡ್ ಗಾಗಿ ಈಗಾಗಲೇ ಹಲವಾರು ಬಾರಿ ಕೇಳಿದ್ದೆಲ್ಲಾ ಮಾಹಿತಿ ಒದಗಿಸಿದ್ದರೂ ಸಹ ಇದೀಗ ಮತ್ತೊಮ್ಮೆ ಎಪಿಕ್ ಮತ್ತು ಆಧಾರ್ ಸಂಖ್ಯೆ ನೊಂದಾಯಿಸುವಂತೆ ಕೇಳಿರುವುದು ಕಾರ್ಡ್ ದಾರರಿಗೆ ತಲೆನೋವಾಗಿ ಪರಿಣಮಿಸಿದೆ. ಎಷ್ಟೋ ಹಳ್ಳಿಗಳಲ್ಲಿ ನೆಟ್ ವರ್ಕ್ ಇಲ್ಲದೆ ಎಸ್ ಎಂ ಎಸ್ ಕಳುಹಿಸಲು ಇತರೆಡೆಗೆ ಹೋಗುವಂತಾಗಿದ್ದು ಮಾಹಿತಿ ಕಳುಹಿಸಲು ಒಂದಿಡಿ ದಿನ ಸಮಯ ವ್ಯರ್ಥವಾಗುತ್ತಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮಂದಿಗೆ ಮೇಸೇಜ್ ಯಾವರೀತಿ ಕಳುಹಿಸಬೇಕು ಎಂಬುದನ್ನು ಅರಿಯದೇ ಇದಕ್ಕಾಗಿ ಅವರಿವರನ್ನು ಕಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸದ್ಯ ಮೇಸೇಜ್ ಕಳುಹಿಸಿಕೊಡುವುದೇ ಕೆಲ ಅಂಗಡಿದಾರರಿಗೆ ಕೆಲಸವಾಗಿದ್ದು ಒಂದು ಕಾರ್ಡ್ ನ್ನು ನೊಂದಾಯಿಸಿದರೆ ಇಪ್ಪತ್ತು, ಮೂವತ್ತು,ಐವತ್ತು ರೂ ವರೆಗೆ ವಸೂಲಿ ಮಾಡುತ್ತಿದ್ದು, ಹೇಗಾದರೂ ಸರಿ ಮುಂದಿನ ತಿಂಗಳು ಪಡಿತರ ಬಂದರೆ ಸಾಕೆಂಬ ಭಾವನೆಯಲ್ಲಿರುವ ಕಾರ್ಡ್ ದಾರರು ತಕರಾರಿಲ್ಲದೆ ಕೇಳಿದ ಹಣಕೊಟ್ಟು ಸಾಕಪ್ಪ ಸಾಕು ಎಂದು ನಿಟ್ಟುಸಿರು ಬಿಡುತ್ತಿದ್ದಾರೆ.
ಈ ಬಗ್ಗೆ ಇಲಾಖೆಯವರು ಕಾರ್ಡ್ ದಾರರ ಗೊಂದಲವನ್ನು ಮನಗಂಡು ಅವರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಿದೆ ಹಾಗೂ ಎಸ್.ಎಂ.ಎಸ್ ಮೂಲಕ ರಿಜಿಸ್ಟರ್ ಮಾಡುವ ಬದಲು ಪಡಿತರ ಅಂಗಡಿಗಳಲ್ಲೇ ಬೇಕಾದ ಮಾಹಿತಿಯನ್ನು ಸರಳ ಮಾದರಿಯಲ್ಲಿ ಪಡೆಯುವ ಕ್ರಮಕ್ಕೆ ಮುಂದಾಗಬೇಕಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ