ಆರ್ಕೇಸ್ಟ್ರಾ ಅಂದರೆ ಜಗಮಗಿಸುವ ಲೈಟು,ಆಳೆತ್ತರದ ಸ್ಪೀಕರ್ ,ಚಿತ್ತಾರದ ಬಟ್ಟೆಗಳೊಂದಿಗೆ ಸುಸ್ಸಜ್ಜಿತ ವೇದಿಕೆ ಹೀಗೆಲ್ಲಾ ಕಲ್ಪನೆ ಬರುತ್ತೆ.ಆದ್ರೆ ಇದ್ಯಾವುದೆ ಪರಿಕರಿಗಳಿಲ್ಲದೆ ಹಿಂಬದಿಗೊಂದು ಬ್ಯಾನರ್ ಕಟ್ಟಿ,ಮೊಬೈಲ್ ಮೂಲಕೆವೇ ಧ್ವನಿವರ್ಧಕದಲ್ಲಿ ಹಾಡು ಹಾಡಿಸಿ,ಹಾಡಿಗೆ ತಕ್ಕ ಹೆಜ್ಜೆ ಹಾಕಿ ಕುಣಿಯುತ್ತಾ ಜನರನ್ನು ರಂಜಿಸುವ ಮುಖಾಂತರ ಅವರು ನೀಡುವ ಹಣದಿಂದಲೆ ಜೀವನಬಂಡಿ ಸಾಗಿಸುತ್ತಿದ್ದಾರೆ ನಾರಾಯಣ್ಣಪ್ಪ.
![]() |
ಹುಳಿಯಾರಿನ ಬಸ್ ನಿಲ್ದಾಣದಲ್ಲಿ ಶನಿವಾರ ಸಂಜೆ ಮೈಸೂರಿನ ವಿನಾಯಕ ಕಲಾತಂಡದವರ ನೃತ್ರ ಪ್ರದರ್ಶನ ನೋಡಲು ಸೇರಿದ್ದ ಜನರು |
![]() |
ಬಸ್ ನಿಲ್ದಾಣದಲ್ಲಿ ಹಾಡೊಂದಕ್ಕೆ ನೃತ್ಯ ಮಾಡುತ್ತಿರುವ ಕಲಾವಿದ. |
ಮೂಲತಹ ರಂಗಭೂಮಿ ಕಲಾವಿದರಾದ ನಾರಾಯಣ್ಣಪ್ಪನ ಕುಟುಂಬದ ಹಿರಿಯರು ಬೀದಿನಾಟಕಗಳನಾಡುತ್ತ ಬದುಕು ಕಟ್ಟಿಕೊಂಡವರು.ಆದ್ರೆ ಬೀದಿನಾಟಕಗಳಿಂದ ಕಲಾಪೋಷಣೆಯೆ ಹೊರತು ಉದರಕ್ಕೆ ನೆರವಾಗಲ್ಲ ಅಂದ ಅರಿತ ನಾರಾಯಣಪ್ಪ ಮುಖ ಮಾಡಿದ್ದು ಆರ್ಕೆಸ್ಟ್ರಾ ಕಡೆ.ಹಾಡಲಿಕ್ಕೆ ಸುಮಧುರ ಕಂಠವಿಲ್ಲ,ಶಾಸ್ತ್ರೀಯ ಕುಣಿತ ಕಲಿಯದಿದ್ದರೂ ಸ್ವಂತ ಬದುಕು ಕಟ್ಟಿಕೊಳ್ಳಬೇಕೆಂಬ ಛಲದಿಂದ ಹಾಡಿಗೆ ಕುಣಿತವನ್ನು ಮೇಳೈಸಿ ಕಾರ್ಯಕ್ರಮ ನೀಡಲು ಶುರುಮಾಡಿದ್ರು.ಒಂದು ವರ್ಗದ ಜನಕ್ಕೆ ಇದು ಮನರಂಜನೆಯಾದರೆ ಇವರಿಗೆ ಜೀವನಕ್ಕೆ ದಾರಿಯಾಯಿತು.ಅಲ್ಲಿಂದ ಮುಂದೆ ಅದನ್ನೆ ಕಾಯಕ ಮಾಡಿಕೊಂಡು ಇಂದಿಗೂ ಅದರಲ್ಲೆ ಬದುಕು ಕಟ್ಟಿಕೊಂಡಿದ್ದಾರೆ.
ಮೂಲತಹ ಮೈಸೂರಿನ ಶಾದನಹಳ್ಳಿಯವರಾದ ಇವರು ಹೆಂಡತಿ,ಮಕ್ಕಳು,ಸೊಸೆ,ಮೊಮ್ಮಗು ಕೂಡಿಕೊಂಡು ವಿನಾಯಕ ಕಲಾತಂಡ ಹಾಗೂ ಮಂಜುನಾಥ ಬೀದಿ ನಾಟಕ ಮಂಡಳಿ ಎಂಬ ತಂಡ ಕಟ್ಟಿಕೊಂಡಿದ್ದಾರೆ. ಕಳೆದ 1977 ರಿಂದ ಕಲಾಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಇದುವರೆಗೂ ರಾಜ್ಯದ ಅನೇಕ ಜಿಲ್ಲೆ.ಊರುಗಳನ್ನು ಸುತ್ತಿದ್ದಾರೆ.
ಪುಡಿಗಾಸೆ ಆಧಾರ: ನಮ್ಮ ತಂದೆಯವರು ಬೀದಿ ನಾಟಕಗಳನ್ನು ಅಭಿನಯಿಸುತ್ತಿದ್ದರು ಅವರು ಹಾಕಿಕೊಟ್ಟ ಹಾದಿಯಲ್ಲೇ ನಾನು ಸಾಗುತ್ತಿದ್ದೇನೆ. ನಮಗೆ ಆದಾಯ ಬರುವ ಯಾವುದೇ ಮೂಲವಿಲ್ಲ ನಾವು ನೀಡುವ ಕಾರ್ಯಕ್ರಮದಿಂದ ಬರುವ ಪುಡಿಗಾಸೆ ನಮಗೆ ಆಧಾರ ಎನ್ನುತ್ತಾರೆ ತಂಡ ಮುಖ್ಯಸ್ಥ ನಾರಾಯಣಪ್ಪ.
ಒಮ್ಮೆ ಕಾರ್ಯಕ್ರಮ ನೀಡಿದರೆ ಐದರಿಂದ ಎಂಟು ನೂರು ಮಾತ್ರ ಸಿಗುತ್ತದೆ, ಸಣ್ಣ ಗ್ರಾಮಗಳಲ್ಲಿ ಒಂದು ದಿನ ಮಾತ್ರ ಕಾರ್ಯಕ್ರಮ ನೀಡುತ್ತೇವೆ, ದೊಡ್ಡ ಊರುಗಳಲ್ಲಿ ಮೂರ್ನಾಲ್ಕು ಕಡೆ ಕಾರ್ಯಕ್ರಮ ನೀಡುತ್ತೇವೆ. ನಮ್ಮ ಮಗ,ಸೊಸೆ,ಮೊಮ್ಮಕ್ಕಳು ಸಹ ತಮ್ಮೊಂದಿಗೆ ಕೈ ಜೋಡಿಸಿದ್ದಾರೆ. ನಮಗೆ ಸರ್ಕಾರದಿಂದಾಗಲಿ, ಸಂಘ ಸಂಸ್ಥೆಯವರಿಂದಾಗಲಿ ಯಾವುದೇ ನೆರವು ಸಿಕ್ಕಿಲ್ಲ ವೀಕ್ಷಕರು ಕೊಡುವ ಪುಡಿಗಾಸೆ ಇಂದಿಗೂ ನಮ್ಮನ್ನು ಸಾಕುತ್ತಿದೆ ಎನ್ನುವ ನಾರಾಯಣಪ್ಪ ಮುಂದೂಕೂಡ ಇದು ನಮ್ಮನ್ನು ಕೈ ಬಿಡುವುದಿಲ್ಲ ಎನ್ನುವ ಆಶಾಭಾವನೆ ವ್ಯಕ್ತಪಡಿಸುತ್ತಾರೆ.
ಕಳೆದೆರಡು ದಿನಗಳಿಂದ ಹುಳಿಯಾರಿನಲ್ಲಿ ಬೀಡು ಬಿತ್ತಿರುವ ಇವರು ರಾಂಗೋಪಾಲ್ ಸರ್ಕಲ್,ಆಸ್ಪತ್ರೆ ಆವರಣ,ಬಸ್ ನಿಲ್ದಾಣ,ಸ್ಟೇಷನ್ ಮುಂಭಾಗ ಮುಂತಾದೆಡೆ ಪ್ರದರ್ಶನ ನೀಡುತಿದ್ದಾರೆ.ಈ ಕಲಾತಂಡದಲ್ಲಿ ಎಂಟರಿಂದ ಹತ್ತು ಮಂದಿಯಿದ್ದು, ಪ್ರಮುಖ ಸ್ಥಳಗಳಲ್ಲಿ ಕನ್ನಡ ಕಟ್ಟಾಳುಗಳ ಭಾವಚಿತ್ರವಿರುವ ಬ್ಯಾನರನ್ನು ಕಟ್ಟಿ ಅದರ ಮುಂದೆ ಕನ್ನಡ ಹಾಗೂ ಇತರ ಭಾಷೆಗಳ ಹಳೆಯ ,ಹೊಸ ಚಿತ್ರಗೀತೆಗಳಿಗೆ ಹೆಜ್ಜೆಹಾಕುತ್ತಾ ಜನರನ್ನು ತಮ್ಮೆಡೆಗೆ ಸೆಳೆಯುತ್ತಿರುವ ಇವರು ನಿತ್ಯ ಮೂರ್ನಾಲ್ಕು ಕಡೆ ಪ್ರದರ್ಶನ ನೀಡುತ್ತಿದ್ದಾರೆ.ದಿನವೊಂದಕ್ಕೆ ವೀಕ್ಷಕರು ನೀಡುವ ಹಣ ಏಳೆಂಟುನೂರು ಸಂಗ್ರಹವಾಗುತ್ತಿದ್ದು ವೀಕ್ಷಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ