ವೈದ್ಯರ , ಸಿಬ್ಬಂದಿಯ ಹಾಗೂ ಔಷಧಿಗಳ ಕೊರತೆ ಎದುರಿಸುತ್ತಿರುವ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಕೆಲ ಗ್ರಾ.ಪಂ ಸದಸ್ಯರು ಹಾಗೂ ಸಾರ್ವಜನಿಕರು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಘೇರಾವ್ ಮಾಡಿದ ಘಟನೆ ಸೋಮವಾರ ನಡೆಯಿತು.
ಹಿನ್ನಲೆ : ಭಾನುವಾರ ರಾತ್ರಿ ಕೆಂಚಮ್ಮನ ತೋಪಿನ ಬಳಿ ನಡೆದ ಅಪಘಾತದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವೈದ್ಯರಿಲ್ಲದೆ ಹಾಗೂ ಸಾಗಿಸಲು ಅಂಬುಲೆನ್ಸ್ ಇಲ್ಲದೆ ತೊಂದರೆಯಾಗಿದ್ದನ್ನು ಮನಗಂಡ ಗ್ರಾ.ಪಂ.ಸದಸ್ಯರುಗಳು ಸೋಮವಾರ ಬೆಳಿಗ್ಗೆ ಆಸ್ಪತ್ರೆ ಬಳಿ ಪ್ರತಿಭಟಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ ಸ್ಥಳಕ್ಕಾಗಮಿಸಿದಾಗ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು ಆಸ್ಪತ್ರೆಯ ಪ್ರತಿಯೊಂದು ವಿಭಾಗಕ್ಕೆ ಅವರನ್ನು ಕರೆದೊಯ್ದು ಅಲ್ಲಿಯ ಅವ್ಯವಸ್ಥೆಯನ್ನು ಮನಗಾಣಿಸಿದರು. 28 ಜನ ಇರಬೇಕಾದ ಸಿಬ್ಬಂದಿಗೆ ಬರಿ 8 ಜನ ಮಾತ್ರ ಇದ್ದು ಅವರಿಂದ ನಿರ್ವಹಣೆಗೆ ತೊಂದರೆಯಾಗಿದೆ, ಖಾಯಂ ವೈದ್ಯರಿಲ್ಲದೆ ಗುತ್ತಿಗೆ ವೈದ್ಯರನ್ನು ನೇಮಕಮಾಡಿಕೊಂಡಿರುವ ಹಿನ್ನಲೆಯಲ್ಲಿ ರಾತ್ರಿ ವೇಳೆ ವೈದ್ಯರಿಲ್ಲದೆ ಪ್ರಥಮ ಚಿಕಿತ್ಸೆಗೂ ಪರದಾಡುವಂತಾಗಿದೆ ಎಂದು ದೂರಿದರು.
ಆರೋಪ: ಆಸ್ಪತ್ರೆ ಆವರಣದಲ್ಲಿರುವ ಹೆರಿಗೆ ವಾರ್ಡ್ ಯಿದ್ದು ಪ್ರಸೂತಿ ತಜ್ಞರಿಲ್ಲದೆ ಅದನ್ನು ಗೋದಾಮು ಮಾಡಿಕೊಳ್ಳಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡುವ ಬದಲು ಮಾದರಿ ಪ್ರಾಥಮಿಕ ಆರೋಗ್ಯಕೇಂದ್ರವನ್ನಾಗಿ ಮಾಡ ಹೊರಟಿದ್ದು ಇದಕ್ಕಾಗಿ ಈಗ ಮತ್ತೊಂದು ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ವೈದ್ಯರು ಹಾಗೂ ಸೌಲಭ್ಯವಿಲ್ಲದ ಇಂಥ ಆಸ್ಪತ್ರೆ ನಮಗೆ ಬೇಡ, ಅಧಿಕಾರಿಗಳು ಕೇವಲ ಕಮೀಷನ್ ಪಡೆಯಲು ಸೌಲಭ್ಯ ಒದಗಿಸದೇ ಕಟ್ಟಡ ನಿರ್ಮಿಸಲು ಹೊರಟಿದ್ದಾರೆ ಎಂದು ಗ್ರಾ.ಪಂ ಸದಸ್ಯರಾದ ಧನುಷ್ ರಂಗನಾಥ್, ಅಶೋಕ್ ಬಾಬು ಆರೋಪಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ ಆಸ್ಪತ್ರೆ ಬೇಕುಬೇಡಗಳ ಬಗ್ಗೆ ತಾವು ಈಗಲೇ ಗಮನಹರಿಸಿ ಸರಿಪಡಿಸುವುದಾಗಿ ಭರವಸೆ ನೀಡಿದರು. ಸ.ಆ.ಕೇಂದ್ರದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಮಾಡುವುದಾಗಿಯೂ ಮುಂದೆ ಇಂತಹ ಸ್ಥಿತಿ ಬರದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು. ಗ್ರಾ.ಪಂ ಸದಸ್ಯರಾದ ರಾಘವೇಂದ್ರ, ಹೇಮಂತ್ ಕುಮಾರ್, ರೈತಸಂಘದ ಹೊಸಹಳ್ಳಿ ಚಂದ್ರಯ್ಯ ಹಾಗೂ ಸಾರ್ವಜನಿಕರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ