ಹುಳಿಯಾರು ಹೋಬಳಿ ಕುರಿಹಟ್ಟಿ ಮಜುರೆ ದಮ್ಮಡಿಹಟ್ಟಿಯ ಶ್ರೀಕಾಟಂಲಿಂಗೇಶ್ವರ ಹಾಗೂ ಶ್ರೀಹೊರಕೆರೆ ರಂಗನಾಥಸ್ವಾಮಿಯವರ ಏಕಾದಶಿ ಕಾರ್ಯ ಗ್ರಾಮದೇವತೆ ಕೆಂಕೆರೆ ಕಾಳಮ್ಮ, ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವತೆಗಳ ಸಮ್ಮುಖದಲ್ಲಿ ಮಂಗಳವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಜರುಗಿತು.
|
ಹುಳಿಯಾರು ಹೋಬಳಿ ದಮ್ಮಡಿಹಟ್ಟಿಯ ಶ್ರೀಕಾಟಂಲಿಂಗೇಶ್ವರ ಹಾಗೂ ಶ್ರೀಹೊರಕೆರೆ ರಂಗನಾಥಸ್ವಾಮಿಯವರ ಏಕಾದಶಿ ಕಾರ್ಯದ ಅಂಗವಾಗಿ ಕೆಂಕೆರೆ ಕಾಳಮ್ಮ,ದಮ್ಮಡಿಹಟ್ಟಿ ಈರಬೊಮ್ಮಕ್ಕದೇವರುಗಳನ್ನು ಮೆರವಣಿಗೆ ಮಾಡಲಾಯಿತು. |
ಆಷಾಢ ಮಾಸದಲ್ಲಿ ಇಲ್ಲಿ ಏಕಾದಶಿಯ ಆಚರಣೆ ನಡೆಸಿಕೊಂಡು ಬರುತ್ತಿದ್ದು ಈ ಸಮಯದಲ್ಲಿ ಎಡೆಪೂಜೆ ನೆರವೇರಿಸಿ ದಾಸಪ್ಪಗಳಿಗೆ ಮೀಸಲು ತೀರಿಸುವ ಧಾರ್ಮಿಕ ಕಾರ್ಯಕ್ರಮ ಆಚರಿಸಲಾಗುತ್ತದೆ. ಆಷಾಢ ಮಾಸದ ಪ್ರಾರಂಭದ ದಿನದಿಂದ ಮುಂದಿನ ಏಳು ದಿನಗಳವರೆಗೆ ಸುತ್ತಮುತ್ತಲ ಗ್ರಾಮಗಳಿಗೆ ತೆರಳಿ ಅಲ್ಲಿಯೇ ತಂಗಿ ಮೀಸಲು ತೀರಿಸುವ ಸಂಪ್ರದಾಯ ಇದಾಗಿದೆ. ಈ ನಿಮಿತ್ತ ಕಳೆದ 3 ರ ಗುರುವಾರದಂದು ಮೂಲದೇವರಿಗೆ ಗಂಗಾಸ್ನಾನ,ಪುಣ್ಯಾಹ ಪೂಜೆ ನಡೆಸಿ ಧ್ವಜಾರೋಹಣ ನೆರವೇರಿಸುವ ಮುಖಾಂತರ ಪ್ರಾರಂಭವಾದ ಕೈಂಕರ್ಯ ದ್ವಾದಶಿಯಂದು ಮೂಲದೇವರುಗಳಿಗೆ ದೊಡ್ಡ ಮಣೇವು ಹಾಕುವುದರ ಮುಖಾಂತರ ಪರಿಸಮಾಪ್ತಿ ಆಯಿತು.
|
ಕೆಂಕೆರೆ ಕಾಳಮ್ಮ,ದಮ್ಮಡಿಹಟ್ಟಿ ಈರಬೊಮ್ಮಕ್ಕದೇವರು |
ಏಕಾದಶಿಯೊಂದು ವಿಶೇಷವಿದ್ದು ಹುಳಿಯಾರಿನ ಮಂಜುಳಾ ಗಜಣ್ಣ ಅವರಿಂದ ಮೂಲ ದೇವರಿಗೆ ಪುಣ್ಯಾಹ,ಅಭಿಷೇಕ,ಕುಂಕುಮಾರ್ಚನೆ,ಅಷ್ಟೋತ್ತರ ಕಾರ್ಯಗಳು ನಡೆಯಿತು. ಸಂಜೆ ಆಂಜನೇಯಸ್ವಾಮಿ ದೇವಾಲಯದಲ್ಲಿಗೆ ಕೆಂಕೆರೆ ಕಾಳಮ್ಮದೇವಿಯ ಆಗಮನದೊಂದಿಗೆ ಕೂಡುಭೇಟಿ ಕಾರ್ಯ ಹಾಗೂ ಸಕಲ ಬಿರುದಾವಳಿ,ವಾದ್ಯಮೇಳಗಳೊಂದಿಗೆ ದಾಸಪ್ಪಗಳ ಸಮೇತ ಮದಾಸಿಯಲ್ಲಿ ಕಾಳಮ್ಮನವರನ್ನು ಹೂವಿನ ಮಂಟಪದ ಉತ್ಸವದಲ್ಲಿ ದಮ್ಮಡಿಹಟ್ಟಿಯ ದೇವಾಲಯದಲ್ಲಿಗೆ ಕರೆತರಲಾಯಿತು. ದೇವಾಲಯದ ಆವರಣದಲ್ಲಿ ತುಪ್ಪದದೀಪ ಹಚ್ಚಿ ಎಡೆಪೂಜೆ,ಜಾಡಿಪೂಜೆಯೊಂದಿಗೆ ಮಹಾಮಂಗಳಾರತಿ ನಡೆಸಲಾಯಿತು. ನಂತರ ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು.ಈ ಸಂಧರ್ಭದಲ್ಲಿ ಕೆಂಕೆರೆ,ಕೋಡಿಪಾಳ್ಯ, ಗೊಲ್ಲರಹಟ್ಟಿ,ಎಂ.ಜಿ.ಪಾಳ್ಯ,ಕಂಪನಹಳ್ಳಿ,ಕುರಿಹಟ್ಟಿ ಗ್ರಾಮದ ಭಕ್ತಾಧಿಗಳು,ದೇವಾಲಯ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದು ಏಕಾದಶಿ ಪೂಜೆಯನ್ನು ಕಣ್ ತುಂಬಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ