ಹುಳಿಯಾರು ಸಮೀಪದ ಹಂದನಕೆರೆ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಆರಂಭಿಸಿದ್ದ ಉಪವಾಸ ಸತ್ಯಾಗ್ರಹದಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. |
ಸಮೀಪದ ಹಂದನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆಂಬುಲೆನ್ಸ್ ವಾಹನ ಒದಗಿಸುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘ ಹಾಗೂ ಗ್ರಾಮಸ್ಥರವತಿಯಿಂದ ಸೋಮವಾರ ಆರಂಭಗೊಂಡ ಉಪವಾಸ ಸತ್ಯಾಗ್ರಹವನ್ನು ತಹಶೀಲ್ದಾರ್ ಕಾಮಾಕ್ಷಮ್ಮ ಭರವಸೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಹಂದನಕರೆ ಸಾರ್ವಜನಿಕ ಆಸ್ಪತ್ರೆ ಎದುರು ಮಹಾತ್ಮ ಗಾಂಧಿ ಅವರ ಭಾವಚಿತ್ರದ ಮುಂದೆ ಸೋಮವಾರ ಬೆಳಗ್ಗೆಯಿಂದಲೇ ಆರಂಭವಾದ ಉಪವಾಸ ಸತ್ಯಾಗ್ರಹದಲ್ಲಿ ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು ಸಹ ಸಾಥ್ ನೀಡಿದರು.
ಹಂದನಕೆರೆ ಸುತ್ತಮುತ್ತಲ ಗ್ರಾಮಗಳಿಗೆ ಅನುಕೂಲವಾಗುವಂತೆ ಆಂಬುಲೆನ್ಸ್ ನೀಡುವಂತೆ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಜಿಪಂ ಮಾಜಿ ಅಧ್ಯಕ್ಷ ಜಿ.ರಘುನಾಥ್ ಮಾತನಾಡಿ ಜಿಲ್ಲೆಯ ಹಂದನಕೆರೆ ಹೋಬಳಿ ಕೇಂದ್ರವಾಗಿದ್ದರೂ ಸಹ ಗಡಿಭಾಗವಾಗಿರುವುದರಿಂದ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಆಸ್ಪತ್ರೆ, ಶಿಕ್ಷಣ, ರಕ್ಷಣೆಯಂತಹ ಮೂಲಭೂತ ಸೌಕರ್ಯಕ್ಕಾಗಿ ಇಂದಿಗೂ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದರು.
ಜಯಕರ್ನಾಟಕದ ಹೆಚ್.ಎನ್. ವೆಂಕಟೇಶ್ ಮಾತನಾಡಿ 108 ಆಂಬುಲೆನ್ಸ್ ನೀಡುವುದರಿಂದ ಹಂದನಕೆರೆ, ದೊಡ್ಡಎಣ್ಣೆಗೆರೆ ಹಾಗೂ ಮತಿಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಿಗೆ ಅನುಕೂಲವಾಗಲಿದ್ದು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸರ್ಕಾರಿ ಆಸ್ಪತ್ರೆಗೆ ಶೀಘ್ರವೇ ಆಂಬುಲೆನ್ಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆಯವರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. |
ಸುದ್ದಿ ಅರಿತ ತಹಶೀಲ್ದಾರ್ ಕಾಮಾಕ್ಷಮ್ಮ, ಆರೋಗ್ಯ ಇಲಾಖೆಯವರೊಂದಿಗೆ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಶೀಘ್ರದಲ್ಲಿಯೇ ಹಂದನಕೆರೆಗೆ 108 ವಾಹನ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ನಿರಶನವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಈರಣ್ಣ, ಲಿಂಗರಾಜು, ರಂಗಸ್ವಾಮಿ, ರಾಮನಾಥ್, ವೆಂಕಟೇಶ್, ಸಿದ್ದಯ್ಯ ಮುಂತಾದವರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ