ಸರ್ಕಾರದ ಸವಲತ್ತಿಗಾಗಿ ಅರ್ಹಫಲಾನುಭವಿಗಳನ್ನು ಗುರ್ತಿಸಲು ನಡೆಯುವ ವಾರ್ಡ್ ಸಭೆ ಹಾಗೂ ಗ್ರಾಮಸಭೆಗಳಲ್ಲಿ ಜನರು ಹಾಗೂ ಜನಪ್ರತಿನಿಧಿಗಳು ಇಲ್ಲದೆ ನೆಪಮಾತ್ರಕ್ಕೆ ಒಬ್ಬಿಬ್ಬರ ಹಾಜರಾತಿಯಲ್ಲಿ ನಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರ್ಯಾಂಟ್ ಮನೆಗಾಗಿ ಸಾರ್ವಜನಿಕರು ಅರ್ಜಿಸಲ್ಲಿಸುತ್ತಿರುವುದು. |
ಸಾರ್ವಜನಿಕರಿಗೆ ಗ್ರಾಮಸಭೆ ಬಗ್ಗೆ ಸೂಕ್ತ ಪ್ರಚಾರವಿಲ್ಲದ ಕಾರಣ ಸಭೆಗೆ ಹಾಕಿಸಿದ್ದ ಕುರ್ಚಿಗಳು ಖಾಲಿಖಾಲಿ. |
ಈಗಾಗಲೇ ಹೋಬಳಿಯ ಹಲವು ಗ್ರಾ.ಪಂ.ಗಳಲ್ಲಿ ಇಂತಹ ಸಭೆಗಳು ಬೇಕಾಬಿಟ್ಟಿಯಾಗಿ ನಡೆದಿದ್ದು, ಇದಕ್ಕೆ ಸಾಕ್ಷಿ ಎನ್ನುವಂತೆ ಶನಿವಾರದಂದು ಕೆಂಕೆರೆ ಗ್ರಾಮಪಂಚಾಯ್ತಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಹದಿನೆಂಟು ಸದಸ್ಯರ ಪೈಕಿ ಮೂರ್ನಾಲ್ಕು ಮಂದಿ, ಜಿಲ್ಲಾ ಹಾಗೂ ತಾ.ಪಂ.ಸದಸ್ಯರುಗಳ ಸುಳಿವೇ ಇಲ್ಲದಿರುವುದು ದುರ್ವೈವವಾಗಿದೆ.
ಹೋಬಳಿ ಕೆಂಕೆರೆ ಗ್ರಾಮಪಂಚಾಯ್ತಿಗೆ 2014-15 ನೇ ಸಾಲಿನ ಇಂದಿರಾ ಆವಾಜ್ ಯೋಜನೆಯಡಿ ಮಂಜೂರಾಗಿದ್ದ ಮನೆಗಳನ್ನು ಹಂಚಲು ಫಲಾನುಭವಿಗಳ ಆಯ್ಕೆಗಾಗಿ ಶನಿವಾರ ಗ್ರಾಮ ಸಭೆ ಅಯೋಜಿಸಿದ್ದು ಒಂದೆಡೆ ಸದಸ್ಯರುಗಳೇ ಗೈರಾಗಿದ್ದಾರೆ ಮತ್ತೊಂದೆಡೆ ಗ್ರಾಮಸ್ಥರ ಅನುಪಸ್ಥಿತಿಯೂ ಎದ್ದುಕಾಣುತಿತ್ತು.
ಪ್ರಚಾರದ ಕೊರತೆ : ಗ್ರಾಮ ಸಭೆ ನಡೆಯುವುದರ ಬಗ್ಗೆ ಹೆಚ್ಚು ಪ್ರಚಾರವಿಲ್ಲ ಎಂಬುದಕ್ಕೆ ಸಭೆಗೆ ಆಗಮಿಸಿದ್ದ ಬೆರಳೆಣಿಯಷ್ಟು ಸಾರ್ವಜನಿಕರು ಸಾಕ್ಷಿಯಾಗಿದ್ದಾರೆ. ಅಲ್ಲದೆ ಗ್ರಾಮ ಸಭೆ ನಡೆಯುತ್ತಿರುವ ಬಗ್ಗೆ ಬ್ಯಾನರ್ ಕೂಡ ಕಂಡುಬರಲಿಲ್ಲ. ಗ್ರಾಮ ಸಭೆ ಬಗ್ಗೆ ತಿಳಿದವರು ಅವರಿವರನ್ನು ಕೇಳಿ ಅರ್ಜಿ ಬರೆದು ನೀಡುತ್ತಿದ್ದರೆ ಉಳಿದವರು ಸುಮ್ಮನೆ ಕುಳಿತು ನೋಡುತ್ತಿದ್ದರು.
ನಿರಾಸಕ್ತಿ: ತಮ್ಮಿಂದ ಅರ್ಜಿ ಪಡೆಯುವ ಸಲುವಾಗಿ ಈಗ ನೆಪಮಾತ್ರಕ್ಕೆ ಗ್ರಾಮ ಸಭೆ ಮಾಡುತ್ತಿದ್ದು ನಂತರ ತಮಗೆ ಬೇಕಾದವರಿಗೆ ಮನೆ ಹಂಚಿಕೆ ಮಾಡುತ್ತಾರೆ, ಈ ಹಿಂದೆಯೂ ಸಹ ಮನೆವುಳ್ಳವರಿಗೆ ಮತ್ತೆ ಗ್ರ್ಯಾಂಟ್ ಮಂಜೂರು ಮಾಡಿದ್ದು, ಶೌಚಾಲಯವಿದ್ದವರಿಗೆ ಪುನ: ಶೌಚಾಲಯ ಗ್ರ್ಯಾಂಟ್ ನೀಡಿದ್ದಾರಲ್ಲದೆ ಈ ಹಿಂದೆ ನಿರ್ಮಿಸಿಕೊಂಡಿರುವ ಅನೇಕ ಶೌಚಾಲಯಗಳ ಬಿಲ್ ಸಂದಾಯ ಮಾಡದೇ ಸತಾಯಿಸುತ್ತಿದ್ದಾರೆಂದು ಗ್ರಾಮಸ್ಥರಾದ ಉದಯ್ ಕುಮಾರ್ ಹೇಳುತ್ತಾರೆ.
ಸವಲತ್ತು ಯಾರಿಗೆ ಕೊಡಬೇಕು ಎಂಬುದನ್ನು ಸದಸ್ಯರು ಮೊದಲೇ ನಿರ್ಧರಿಸಿಕೊಂಡಿರುತ್ತಾರೆ ನೆಪಮಾತ್ರಕ್ಕೆ ಇಂತ ಸಭೆಗಳು ನಡೆಯುತ್ತವಾದ್ದರಿಂದ ಸಭೆಗೆ ಹೋಗುವುದರಲ್ಲಿ ಅರ್ಥವಿಲ್ಲ ಎನ್ನುತ್ತಾರೆ ಮಹೇಶ್.
ಪ್ರಸಕ್ತ ಸಾಲಿನಲ್ಲಿ ಎಸ್.ಸಿ-5, ಎಸ್.ಟಿ- 2, ಅಲ್ಪಸಂಖ್ಯಾತರಿಗೆ- 1, ಜನರಲ್ ಗೆ - 4 ಒಟ್ಟು 12 ಮನೆ ಗ್ರ್ಯಾಂಟ್ ಬಂದಿದ್ದು ಈ ಸಭೆಯಲ್ಲಿ ಫಲಾನುಭವಿಗಳಿಂದ ಅರ್ಜಿ ಪಡೆದಿದ್ದು ಸರ್ವಸದಸ್ಯರ ಸಭೆಯಲ್ಲಿ ಅರ್ಹಫಲಾನುಭವಿಗಳನ್ನು ಗುರ್ತಿಸಿ ಅವರಿಗೆ ಮನೆ ಗ್ರ್ಯಾಂಟ್ ನೀಡಲಾಗುತ್ತದೆ, ಯಾವುದೇ ರೀತಿಯ ಗೊಂದಲಕ್ಕೆ ಎಡೆಮಾಡಿಕೊಡುವುದಿಲ್ಲ ಎನ್ನುತ್ತಾರೆ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ.
ಈ ಸಂಧರ್ಭದಲ್ಲಿ ಉಪಾಧ್ಯಕ್ಷೆ ರೇಣುಕ , ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜೇಂದ್ರ, ಪಿಡಿಓ ಮಹಬೂಬ್ ಸಾಬ್, ಸದಸ್ಯರಾದ ಬಸವರಾಜು,ರಾಧಾ, ಬಿಲ್ ಕಲೆಕ್ಟರ್ ಜಯಣ್ಣ,ಯುವರಾಜ್ ಸೇರಿದಂತೆ ಕೆಲವೇ ಮಂದಿ ಸಾರ್ವಜನಿಕರು ಉಪಸ್ಥಿತರಿದ್ದರು.
-------------------------
ಸರ್ಕಾರದ ವತಿಯಿಂದ ಒಂದು ಗ್ರಾಮಕ್ಕೆ ಸಾಮಾನ್ಯ ಅಥವಾ ಮತ್ತಾವುದೇ ವರ್ಗಕ್ಕೆ ಕೇವಲ ಎರಡು ಅಥವಾ ಮೂರು ಮನೆಗಳನ್ನು ಮಂಜೂರಾಗಿರುತ್ತವೆ ಆದರೆ ಆಕಾಂಕ್ಷಿಗಳು ಹತ್ತಕ್ಕೂ ಹೆಚ್ಚು ಜನರಿರುತ್ತಾರೆ. ಇದರಿಂದ ನಾವುಗಳು ಹೋಗಿ ಯಾರೋ ಒಬ್ಬ ಅರ್ಹರನ್ನು ಆಯ್ಕೆ ಮಾಡಿದರೆ ಉಳಿದವರ ನಿಂದನೆಗೆ ಗುರಿಯಾಗಬೇಕಾಗುತ್ತದೆಂದು ಸಭೆಗೆ ತಾವಾಗಿಯೇ ಗೈರು ಆಗಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ತಾ.ಪಂ.ಸದಸ್ಯ ಕೆಂಕೆರೆ ನವೀನ್ ಅಭಿಪ್ರಾಯಪಡುತ್ತಾರೆ
--------------------
ಚುನಾವಣೆಗೆ ಮುನ್ನಾ ಮನೆ ಬಾಗಿಲಿಗೆ ಬಂದು ನಮಗೊಂದು ಓಟುಕೊಡಿ ಎಂದು ಬೇಡಿಕೊಳ್ಳುವ ಸದಸ್ಯರು ಗೆದ್ದ ನಂತರ ನಮ್ಮ ಬೀದಿಯ ಕಡೆ ಬರುವುದನ್ನೇ ಕಡಿಮೆ ಮಾಡುತ್ತಾರೆ. ತಾವು ಯಾವ ಕೆಲಸ ಮಾಡಿದರೆ ಹಣ ದೊರೆಯುತ್ತದೆ ಎಂಬುದನ್ನು ತಿಳಿದು ಆ ಕೆಲಸಗಳನ್ನು ಮಾಡಲು ಮುಂದಾಗುತ್ತಾರೆ ಹೊರತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. >---- ಗ್ರಾಮಸ್ಥರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ