ಅಜ್ಜಿ ಹಬ್ಬ ಅಂದ್ರೆ ಒಬ್ಬಟ್ಟಿನ(ಹೋಳಿಗೆಯ) ಹಬ್ಬವಾಗಿದ್ದು ಈ ಹಬ್ಬ ಆಚರಿಸಿದರೆ ಜನ ಜಾನುವಾರುಗಳ ರೋಗರುಜಿನ ದೂರ ಅದಕ್ಕೂ ಮೀರಿ ವರುಣನ ಕೃಪಾಕಟಾಕ್ಷವಾಗಿ ಸಮೃದ್ದ ಮಳೆಯಾಗಿ ಇಳೆ ತಂಪಾಗಿ ಎಲ್ಲರ ಬದುಕು ಹಸನಾಗಿರುತ್ತದೆ ಅನ್ನುವ ನಂಬಿಕೆ ಆಧಾರದ ಮೇಲೆ ಈ ಹಬ್ಬದ ಆಚರಣೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂಯಿದೆ.ಎಲ್ಲಾ ಹಬ್ಬಗಳಂತೆ ಪ್ರತಿ ವರ್ಷವೂ ಆಚರಿಣೆಯಿಲ್ಲದ ಈ ಹಬ್ಬವನ್ನು ಊರಿನಲ್ಲಿ ರೋಗರುಜ್ಜಿನಗಳು ತಾಂಡವಾಡುವಾಗ ಮಾತ್ರ ಊರಿನ ಯಜಮಾನರುಗಳು ಸಮಾಲೋಚಿಸಿ ಈ ಹಬ್ಬದ ಆಚರಣೆ ಮಾಡುತ್ತಾರೆ.ಹೆಚ್ಚಾಗಿ ಆಷಾಢ ಮಾಸದ ಮಂಗಳವಾರ ಅಥವಾ ಶುಕ್ರವಾರದಂದು ಆಚರಿಸುವ ವಾಡಿಕೆಯಿದ್ದು ಅದರಂತೆ ಈ ಹಬ್ಬವನ್ನು ಹುಳಿಯಾರು ಹಾಗೂ ಸುತ್ತೇಳು ಹಳ್ಳಿಗಳಲ್ಲಿ ಶುಕ್ರವಾರ ಆಚರಿಸಲಾಯಿತು.
ಹುಳಿಯಾರಿನಲ್ಲಿ ಅಜ್ಜಿ ಹಬ್ಬದ ಅಂಗವಾಗಿ ಭಕ್ತರು ಮನೆಯಲ್ಲಿ ಮಾಡಿದ ಒಬ್ಬಟ್ಟು ಹಾಗೂ ಅನ್ನಸಾರನ್ನು ಅರ್ಪಿಸುತ್ತಿರುವುದು. |
ಸಾಮಾನ್ಯವಾಗಿ ಊರಿನೆಲ್ಲರೂ ಈ ಹಬ್ಬ ತಪ್ಪದೆ ಆಚರಿಸುತ್ತಾರೆ.ಹಬ್ಬದ ದಿನವನ್ನು ಮುಂಚಿತವಾಗಿಯೆ ಡಂಗೂರ ಸಾರಿಸುವ ಮುಖಾಂತರ ತಿಳಿಸಲಾಗಿರುತ್ತದೆ.ಅಂದು ಎಲ್ಲರ ಮನೆಯಲ್ಲೂ ಒಬ್ಬಟ್ಟಿನ ಘಮಲೇಘಮಲು.ಅಂದು ಮನೆಯಲ್ಲಿ ಮಾಡಿದ ಒಬ್ಬಟ್ಟನ್ನು ಹಾಗೂ ಅನ್ನಸಾರನ್ನು ಕರಗಕ್ಕೆ ಎಡೆಯಿಡುವ ಸಂಪ್ರದಾಯವಿದೆ.
ಆಚರಣೆ ಹೇಗೆ:ಊರಿನ ಗ್ರಾಮದೇವತೆ ದೇವಾಲಯದ ಮುಂಭಾಗದಲ್ಲಿ ಕರಗ ಇಟ್ಟಿರುತ್ತಾರೆ.ಕರಗ ಅಂದರೆ ಜನಜಾನುವಾರುಗಳನ್ನು ಕಾಡುವ ಮಾರಿಯ ಪ್ರತಿರೂಪವಾಗಿದ್ದು ಮಡಕೆಗೆ ಸೀರೆಉಡಿಸಿ ಬೇವಿನ ಸೊಪ್ಪಿನಿಂದ ಅಲಂಕರಿಸಿ ಪ್ರತಿಷ್ಠಾಪಿಸಲಾಗಿರುತ್ತದೆ.
ಗ್ರಾಮದ ಪ್ರತಿ ಮನೆಯವರೂ ಮಡಿಯಿಂದ ತಯಾರಿಸಿದ ಹೋಳಿಗೆ,ಅನ್ನ ಸಾರನ್ನು ಕರಗಕ್ಕೆ ನೈವೈದ್ಯವಾಗಿ ಸಮರ್ಪಿಸಿ ದೇವಿಗೆ ಪೂಜೆ ಸಲ್ಲಿಸಿ ಹಿಂದಿರುಗುತ್ತಾರೆ.ಆ ನಂತರವಷ್ಟೆ ಮನೆಯಲ್ಲಿ ಮಾಡಿದ ಹೋಳಿಗೆಯನ್ನು ಮನೆಮಂದಿಯೆಲ್ಲ ಸೇವಿಸುತ್ತಾರೆ.
ರಾತ್ರಿವರೆಗೂ ಕರಗದ ಮುಂದೆ ಸಂಗ್ರಹವಾಗುವ ಒಬ್ಬಟ್ಟೆ ಗುಡ್ಡದಷ್ಟಾಗುವುದಿದ್ದು ಅದನ್ನು ಗ್ರಾಮದೇವತೆಗಳ ಸಮ್ಮೂಖದಲ್ಲಿ ಪೂಜಿಸಿ ಊರಿನಿಂದಾಚೆಗೆ ಕೊಂಡೊಯ್ಯುವುದೇ ಪ್ರಮುಖ ಘಟ್ಟ.ಮಾರಿಯ ಪ್ರತಿರೂಪವಾದ ಕರಗವನ್ನು ಅದಕ್ಕೆಂದೆ ಮೀಸಲಾದ ವ್ಯಕ್ತಿಯೊಬ್ಬನಿಂದ ಹೊರಿಸಿಕೊಂಡು ಗ್ರಾಮದೇವತೆಗಳೊಂದಿಗೆ ಎಲ್ಲಾ ದಿಕ್ಕುಗಳಿಗೂ ತೆರಳಿ ದಿಕ್ಪಾಲಕರಿಗೆಲ್ಲಾ ಬಲಿ ಸಮರ್ಪಿಸುತ್ತಾರೆ.ಅರೆ ವಾದ್ಯದ ಸದ್ದಿನೊಂದಿಗೆ ಕೈಯಲ್ಲಿ ಚಾಟಿಹಿಡಿದು ಬಾಯಲ್ಲಿ ನಿಂಬೆಹಣ್ಣು ಕಚ್ಚಿಕೊಂಡು ಹೂಂಕರಿಸುತ್ತ ಹೊರಡುವ ಕರಗದ ವ್ಯಕ್ತಿ ಗ್ರಾಮದ ಗಡಿದಾಟಿ ಅನತಿ ದೂರಕ್ಕೆ ಸಾಗುತ್ತಾನೆ.ಅಲ್ಲಿ ಕರಗಕ್ಕೆ ಪೂಜೆ ಸಲ್ಲಿಸಿ ಪ್ರಾಣಿ ಬಲಿಕೊಟ್ಟು ಸಂಗ್ರಹಿಸಲಾಗಿದ್ದ ಹೋಳಿಗೆಯನ್ನು ಅಲ್ಲೆ ಸುರಿದು ಕರಗವನ್ನು ಅಲ್ಲೆಬಿಟ್ಟು ಹಿಂದುರುಗೆ ನೋಡದೆ ವಾಪಸ್ಸಾಗುತ್ತಾರೆ.ಹಾಗೆ ಮಾಡುವ ಮುಖಾಂತರ ನಮ್ಮೂರು ಹೊಕ್ಕಿದ್ದ ಮಾರಿ ಗ್ರಾಮದ ಗಡಿದಾಟಿ ಹೋದಳು ಎಂದು ನಿರಾಳರಾಗುತ್ತಾರೆ.
ಗ್ರಾಮದಲ್ಲಿ ಶುಕ್ರವಾರ ಗ್ರಾಮದೇವತೆ ದುರ್ಗಮ್ಮನ ದೇವಾಲಯದ ಮುಂದೆ ಹುಳಿಯಾರಮ್ಮ ದೇವಿಯ ಉಪಸ್ಥಿತಿಯಲ್ಲಿ ಸಂಭ್ರಮದಿಂದ ಅಜ್ಜಿ ಹಬ್ಬ ಆಚರಿಸಲಾಯಿತು.ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿದವು. ಹಬ್ಬದ ಆಚರಣೆಯಲ್ಲಿ ತೊಡಗಿಕೊಂಡ ಪ್ರತಿ ಮನೆಯವರು ಮಡಿಯಿಂದ ಹೂ, ಹಣ್ಣು, ಹೋಳಿಗೆ ಎಡೆಯನ್ನು ದೇವಸ್ಥಾನದ ಬಳಿ ತಂದು ಕರಗಕ್ಕೆ ಪೂಜೆ ಸಲ್ಲಿಸಿದರು. ಸಂಜೆ ದುರ್ಗಮ್ಮ ಹಾಗೂ ಹುಳಿಯಾರಮ್ಮ ದೇವರುಗಳ ಸಮೇತ ಕರಗದವನ್ನು ಗುಡ್ಡದಷ್ಟಿದ್ದ ಹೋಳಿಗೆ ಅನ್ನವನ್ನು ತಟ್ಟಿಗಳಲ್ಲಿ ತುಂಬಿಕೊಂಡು ಮೆರವಣಿಗೆ ಮೂಲಕ ಗ್ರಾಮದ ಗಡಿದಾಟಿಸಲಾಯಿತು. . ಅಲ್ಲಿ ಪೂಜೆ ಹಾಗೂ ಬಲಿ ಸಮರ್ಪಣೆಯಂತಹ ಸಾಂಪ್ರದಾಯಿಕ ರೀತಿ ರಿವಾಜುಗಳನ್ನು ನೆರವೇರಿಸಲಾಯಿತು. ನಂತರ ಕರಗವನ್ನು ಅಲ್ಲಿಯೇ ಬಿಟ್ಟು ದೇವರುಗಳನ್ನು ಮರಳಿ ದೇವಸ್ಥಾನದ ಬಳಿ ಕರೆತಂದು ಪುಣ್ಯಾಹ ಮಾಡಿಸಿ ಗುಡಿತುಂಬಿಸಲಾಯಿತು. ದೇವಸ್ಥಾನದ ಗುಡಿಗೌಡರುಗಳು,ಗ್ರಾಮದ ಮುಖಂಡರುಗಳು ಸೇರಿದಂತೆ ನೂರಾರು ಜನರು ಈ ಆಚರಣೆಯಲ್ಲಿ ಪಾಲ್ಗೊಂಡಿದ್ದರು.
--------------------------------
ಸಾಂಕ್ರಾಮಿಕ ಕಾಯಿಲೆಗಳು ಬಾರದಿರಲಿ, ಗ್ರಾಮ ದುಷ್ಟಶಕ್ತಿಗಳ ಕಾಟದಿಂದ ಮುಕ್ತವಾಗಿರಲಿ ಎನ್ನುವ ನಂಬಿಕೆಯಿಂದ ಅಜ್ಜಿ ಹಬ್ಬ ಆಚರಿಸಲಾಗುತ್ತದೆ .8 ವರ್ಷದ ಹಿಂದೆ ಈ ಹಬ್ಬ ಆಚರಿಸಲಾಗಿದ್ದು ಇದೀಗ ಮತ್ತೆ ಆಚರಿಸಲಾಗುತ್ತಿದೆ.-ಪೂಜಾರ್ ಭೈರೇಶ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ