ರಸ್ತೆ ನಿಯಮ ಹಾಗೂ ಆಟೋರಿಕ್ಷಾ ಚಾಲನೆಯ ನಿಯಮಗಳನ್ನು ಉಲ್ಲಂಘಿಸಿದ ರಿಕ್ಷಾ ಚಾಲಕರಿಗೆ ಇಲ್ಲಿನ ಪೋಲಿಸರು ದಂಡವಿಧಿಸಿದ್ದಾರೆ.
ಹುಳಿಯಾರಿನ ಆಟೋರಿಕ್ಷಾ ಚಾಲಕರು ನಿಯಮಗಳನ್ನು ಪಾಲಿಸದ ಹಿನ್ನಲೆಯಲ್ಲಿ ಪಿಎಸೈ ಘೋರ್ಪಡೆ ದಂಡವಿಧಿಸಿದ್ದಲ್ಲದೆ ಆಟೋಚಾಲನೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. |
ಹುಳಿಯಾರು ಪಟ್ಟಣದಲ್ಲಿ ಸಾಕಷ್ಟು ಆಟೋರಿಕ್ಷಾಗಳಿದ್ದು ಅವುಗಳಲ್ಲಿ ಕೆಲವರ ಬಳಿ ಮಾತ್ರ ಸಮಗ್ರ ದಾಖಲೆಗಳಿವೆ ಹೊರತು ಉಳಿದವರ ಬಳಿ ಡಿಎಲ್ ಆಗಲಿ, ಇನ್ಸುರೆನ್ಸ್ ಆಗಲಿ ಇಲ್ಲದಿರುವುದನ್ನು ಮನಗಂಡ ಪಿಎಸೈ ಅವರು ಕಳೆದ ಕೆಲದಿನಗಳ ಹಿಂದಷ್ಟೆ ಪಟ್ಟಣದ ಎಲ್ಲಾ ಆಟೋ ಚಾಲಕರನ್ನು ಕರೆಸಿ ಆಟೋ ಚಾಲನೆಯ ಬಗ್ಗೆ ವಿಶೇಷ ಸಭೆ ಮಾಡಿದ್ದು, ಆ ಸಭೆಯಲ್ಲಿ ಆಟೋರೀಕ್ಷಾ ಚಾಲನೆಗೆ ಇರುವ ನಿಯಮಾವಳಿಗಳು ಹಾಗೂ ಅದನ್ನು ಯಾವರೀತಿ ಪಾಲಿಸಬೇಕು ಎಂಬುದನ್ನು ಸಂಕ್ಷಿಪ್ತವಾಗಿ ಮನವರಿಕೆ ಮಾಡಿಕೊಟ್ಟಿದ್ದರು.
ಸಭೆಯಲ್ಲಿ ಎಲ್ಲಾ ಆಟೋ ಚಾಲಕರು ಚಾಲನೆಯ ನಿಯಮಗಳನ್ನು ಚಾಚುತಪ್ಪದೆ ಪಾಲಿಸುವುದಾಗಿ ತಿಳಿಸಿದ್ದರು ಸಹ ಅವರು ಮತ್ತೆ ಎಂದಿನಂತೆ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲುವ ಸ್ಥಳದಲ್ಲೇ ಆಟೋಗಳನ್ನು ನಿಲ್ಲಿಸಿ ಸಂಚಾರಕ್ಕೆ ಕಿರಿಕಿರಿ ಮಾಡುವುದು, ಚಾಲಕನ ಸೀಟಿನಲ್ಲಿ ಪಕ್ಕದಲ್ಲೇ ಪ್ರಯಾಣಿಕರನ್ನು ಕೂರಿಸಿಕೊಳ್ಳುವುದು, ಸಮವಸ್ತ್ರ ಧರಿಸದಿರುವುದು, ಹೆಚ್ಚಿನ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ದಾಖಲೆಗಳಿಲ್ಲದೆ ಗಾಡಿ ಚಲಾಯಿಸುವುದು ಮಾಡುವುದರ ಮುಖಾಂತರ ಹಳೆದಾರಿಯಲ್ಲೇ ಸಾಗಿದ್ದ ಆಟೋ ಚಾಲಕರನ್ನು ಹಿಡಿದು ದಂಡ ಹಾಕುವ ಮೂಲಕ ಬ್ರೇಕ್ ಹಾಕಿದ್ದಾರೆ. ದಂಡದ ಜೊತೆಗೆ ಸಂಚಾರಿ ನಿಯಮ ಪಾಲನೆ ಬಗ್ಗೆ ಅವರುಗಳಿಗೆ ಮನವರಿಕೆ ಮಾಡಿಕೊಟ್ಟಿರುವ ಪಿಎಸೈ ಘೋರ್ಪಡೆಯವರ ಕ್ರಮ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ