ನವಂಬರ್ 1 ಬಂತೆಂದರೆ ಈ ಅಂಗಡಿಯಲ್ಲಿ ಹಬ್ಬದ ಸಡಗರ. ಅಂದು ಪಟ್ಟಣದಲ್ಲಿ ಕನ್ನಡಪರ ಸಂಘಟನೆಗಳು, ಇನ್ನಿತರ ಸಂಸ್ಥೆಗಳು ರಾಜ್ಯೋತ್ಸವ ಆಚರಿಸಲಿ ಬಿಡಲಿ ಈತನ ಟೀ ಅಂಗಡಿಯ ಮುಂದೆ ಧ್ವಜಾರೋಹಣ ಮಾತ್ರ ಕಡ್ಡಾಯವಾಗಿ ನಡೆದಿರುತ್ತದೆ. ಹಾಗಂತ ಇದು ಹತ್ತಾರು ಜನ ಸೇರಿ ಮಾಡುವ ಸಮಾರಂಭವಲ್ಲ ಕೇವಲ ಬೋಂಡಾ,ಟೀ ಅಂಗಡಿ ಇಟ್ಟಿರುವ ಪರಪ್ಪ ಒಬ್ಬನೇ ಆಚರಿಸುವ ರಾಜ್ಯೋತ್ಸವ.
ಹೌದು, ಪಟ್ಟಣದ ರಾಜ್ ಕುಮಾರ್ ರಸ್ತೆಯ ಕರವೇ ವೃತ್ತದಲ್ಲಿನ ಟೀ ಅಂಗಡಿಯ ಪರಪ್ಪ ಕಳೆದ 12ವರ್ಷದಿಂದ ತಪ್ಪದೇ ಕನ್ನಡರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುವ ಮೂಲಕ ತನ್ನ ಕನ್ನಡಾಭಿಮಾನ ಮೆರೆಯುತ್ತಿದ್ದಾರೆ.
ಹುಳಿಯಾರಿನ ಟೀ ಅಂಗಡಿ ಪರಪ್ಪ ಅಂಗಡಿಯಲ್ಲಿ ನಡೆದ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿರುವ ಅಭಿಮಾನಿಗಳು. |
ಪರಪ್ಪನಿಗೂ ಕನ್ನಡರಾಜ್ಯೋತ್ಸವಕ್ಕೂ ಏನು ನಂಟೂ ಗೊತ್ತಿಲ್ಲ ಆದರೆ ಈತ ರಾಜ್ ಕುಮಾರ್ ಅಭಿಮಾನಿಯಾಗಿದ್ದು ತಾನು ಅಂಗಡಿ ತೆರೆದಾಗಿನಿಂದ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದ್ದಾನೆ. ಇಂದು ಕೂಡ ರಾಜ್ಯೋತ್ಸವದ ಆಚರಣೆಗಾಗಿ ತನ್ನ ಅಂಗಡಿಯನ್ನು ಹೂ, ಬಾಳೆಕಂದು, ಮಾವಿನ ತಳಿರಿಂದ ಸಿಂಗರಿಸಿದ್ದಲ್ಲದೆ ತಾಯಿ ಭುವನೇಶ್ವರಿ ಪೋಟೋಕ್ಕೆ ಪೂಜಿ ಸಲ್ಲಿಸಿದನು. ಇದರೊಂದಿಗೆ ಡಾ||ರಾಜ್, ವಿಷ್ಣುವರ್ಧನ್,ಶಂಕರ್ ನಾಗ್,ಕುವೆಂಪು ಸೇರಿದಂತೆ ಇನ್ನಿತರ ಕನ್ನಡದ ಕಟ್ಟಾಳುಗಳ ಭಾವಚಿತ್ರ ಹಾಗೂ ಅವರು ಅಭಿನಯಿಸಿದ ಪೌರಾಣಿಕ ಪಾತ್ರಗಳ ಚಿತ್ರಗಳನ್ನು ಅಂಗಡಿ ತುಂಬ ಪ್ರದರ್ಶಿಸಿದ್ದು, ಅಂಗಡಿಯ ಇಕ್ಕೆಲದಲ್ಲಿ ಕರ್ನಾಟಕ ಭೂಪಟದ ದೊಡ್ಡ ಕಟೌಟರ್ ಗಳನ್ನು ನಿಲ್ಲಿಸಿ, ಕನ್ನಡ ನಾಡುನುಡಿಗೆ ಸಂಬಂಧಿಸಿದ ಹಾಡುಗಳನ್ನು ಹಾಕಿ, ಅಂಗಡಿಯ ಮುಂಭಾಗದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ನಂತರ ಸಾರ್ವಜನಿಕರಿಗೆ ಸಿಹಿ ಮತ್ತು ಹುಸ್ಲಿ ಹಂಚುವ ಮೂಲಕ ರಾಜ್ಯೋತ್ಸವವನ್ನು ಸಂಭ್ರಮಿಸಿದನು.
ಟೀ ಅಂಗಡಿ ಪರಪ್ಪ ಒಬ್ಬಂಟಿಯಾಗಿ ತಾನು ಆಚರಿಸುವುದರ ಬಗ್ಗೆ ತಿಳಿಸುತ್ತಾ, ನವಂಬರ್ ತಿಂಗಳಲ್ಲಿ ರಾಜ್ಯೋತ್ಸವದ ಆಚರಣೆಯನ್ನು ತಿಂಗಳ ಪೂರ್ತಿ ಮಾಡುವುದರಿಂದ ನವಂಬರ್ 1ರಂದೇ ಮಾಡಲು ಹೆಚ್ಚಿನವರು ಮುಂದಾಗದ ಪ್ರಯುಕ್ತ ನವಂಬರ್ 1 ರಂದು ಆಚರಣೆ ಪ್ರತೀತಿಯನ್ನು ತಾನು ಮುಂದುವರೆಸಿಕೊಂಡು ಬಂದೆ ಎನ್ನುತ್ತಾನೆ. ನನಗೆ ಕನ್ನಡ ಚಿತ್ರರಂಗದ ಕಲಾವಿದರ ಬಗ್ಗೆ ಅಭಿಮಾನವಿದ್ದು ಅದರಲ್ಲೂ ರಾಜ್‍ಕುಮಾರ್ ಎಂದರೆ ಹೆಚ್ಚಿನ ಅಭಿಮಾನವಿದೆ. ಈ ಆಚರಣೆಯನ್ನು ತಾನು ಸ್ವಹಿಚ್ಚೆಯಿಂದ ನಡೆಸಿಕೊಂಡು ಬರುತ್ತಿದ್ದು, ತನ್ನ ಅಂಗಡಿಯ ಆದಾಯದಲ್ಲಿ ಸ್ವಲ್ಪ ಖರ್ಚು ಮಾಡಿ ಆಚರಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಅದ್ದೂರಿಯಾಗಿ ಮಾಡಬೇಕೆಂಬ ತನ್ನ ಬಯಕೆ ವ್ಯಕ್ತಪಡಿಸಿದನು.
ಪ್ರಸ್ತುತದಲ್ಲಿ ಶಾಲಾ-ಕಾಲೇಜುಗಳನ್ನು ಹೊರತುಪಡಿಸಿದರೆ ಅನೇಕ ಸರ್ಕಾರಿ ಕಛೇರಿಗಳಲ್ಲಿ ರಾಜ್ಯೋತ್ಸವದ ಆಚರಣೆ ನೆಪಮಾತ್ರಕ್ಕೆ ನಡೆಯುತ್ತಿದೆ ಹೊರತು ನಮ್ಮ ನಾಡು-ನುಡಿಯ ಬಗ್ಗೆ ಇತರರಿಗೆ ತಿಳಿಸುವ ಕಾರ್ಯಮಾತ್ರ ನಡೆಯುತ್ತಿಲ್ಲ.ಇಂತಹ ಸನ್ನಿವೇಶದಲ್ಲಿ ಪರಪ್ಪ ಈರೀತಿ ಆಚರಣೆ ಮಾಡಿಕೊಂಡು ಬರುತ್ತಿರುವುದು ಸಾರ್ವಜನಿಕರಿಗೆ,ಸರ್ಕಾರಿ ಅಧಿಕಾರಿಗಳಿಗೆ ಮಾದರಿಯಾಗಬೇಕಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ