ಅಂದಿನ ಸಮಾಜದಲ್ಲಿದ್ದ ಜಾತಿ ಪದ್ದತಿಯ ನಿರ್ಮೂಲನೆ ಹಾಗೂ ಸಮಾಜದಲ್ಲಿನ ಜನರ ಪರಿವರ್ತನೆಗಾಗಿ ಹಾಡು, ಕೀರ್ತನೆಗಳನು ರಚಿಸಿದ ಮಹಾನ್ ವ್ಯಕ್ತಿ ಕನಕದಾಸರೇ ಆಗಿದ್ದಾರೆಂದು ಬೆಸ್ಕಾಂನ ಗವಿರಂಗಯ್ಯ ಅಭಿಮತ ವ್ಯಕ್ತಪಡಿಸಿದರು.
ಹುಳಿಯಾರು ಹೋಬಳಿ ಕನಕ ಯುವ ವೇದಿಕೆ ಹಾಗೂ ಸೇವಾ ಛಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕನಕ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಳಿಯಾರು ಹೋಬಳಿ ಕನಕ ಯುವ ವೇದಿಕೆಯಿಂದ ನಡೆದ ಕನಕ ಜಯಂತಿಯಲ್ಲಿ ಗವಿರಂಗಯ್ಯ ಮಾತನಾಡಿದರು. |
ಕನಕ ಯಾವುದೇ ಸಂಘವನ್ನು ಕಟ್ಟಿಕೊಳ್ಳದೇ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಮಾಡಿ, ಸಮಾಜದಲ್ಲಿ ಬೇರೂರಿದ್ದ ಜಾತಿಪದ್ಧತಿಯ ನಿವಾರಣೆಗೆ ಮುಂದಾಗಿದ್ದರು. ಪ್ರಸ್ತುತದಲ್ಲಿ ಒಂದೊಂದು ಸಮುದಾಯದವರು ತಮ್ಮದೇ ಆದ ಸಂಘಗಳನ್ನು ಕಟ್ಟಿಕೊಂಡು ತಮ್ಮತಮ್ಮಲ್ಲೇ ಬಿರುಕನ್ನುಂಟು ಮಾಡಿಕೊಳ್ಳುತ್ತಿದ್ದಾರೆ ಹೊರತು ಅಭಿವೃದ್ಧಿಯಾಗುತ್ತಿಲ್ಲ ಎಂದರು. ಕನಕ ಜಯಂತಿಯನ್ನು ಒಂದು ದಿನ ನೆಪಮಾತ್ರಕ್ಕೆ ಆಚರಿಸುವ ಬದಲು ಕನಕರ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯವಾಗಬೇಕು. ಎಲ್ಲಾ ಸಮುದಾಯದವರೂ ಒಗ್ಗಟ್ಟಾಗಬೇಕು ಹಾಗೂ ಪ್ರತಿ ಸಂಘದಿಂದ ಸಮಾಜಮುಖಿ ಕಾರ್ಯಗಳಾಗಬೇಕು ಎಂದರು.
ಮುಖಂಡರಾದ ನಂದಿಹಳ್ಳಿ ಶಿವಣ್ಣ ಮಾತನಾಡಿ, ಅನೇಕ ದುಷ್ಟಪದ್ಧತಿಗಳ ಬಾಯಿಗೆ ಸಿಲುಕಿದ್ದ ಜನಸಾಮಾನ್ಯರನ್ನು ಮೇಲೆತ್ತುವ ಕಾರ್ಯಕ್ಕೆ ಮುಂದಾದವರು ಕನಕದಾಸರಾಗಿದ್ದಾರೆ. ಅವರ ಈ ಕಾರ್ಯದಲ್ಲಿ ಅನೇಕ ತೊಡಕು,ಅವಮಾನಗಳು ಎದುರಾದರೂ ಸಹ ಅವರು ಕುಗ್ಗದೆ ತಮ್ಮಕಾರ್ಯವನ್ನು ಶ್ರದ್ಧೆವಹಿಸಿ ಮಾಡಿದ್ದರ ಫಲವಾಗಿ ಇಂದು ನಾವೆಲ್ಲಾ ಅವರನ್ನು ಆರಾಧಿಸುತ್ತಿದ್ದೇವೆ ಎಂದರು.
ಈ ವೇಳೆಗೆ ವೃಷಭಾದ್ರಿ ಭಜನಾ ಮಂಡಳಿಯ ಮಹಿಳೆಯರು ಕನಕದಾಸರ ಹಾಡುಗಳನ್ನು ಗಾಯನ ಮಾಡಿದರು. ಕನಕ ಯುವ ವೇದಿಕೆಯ ಅಧ್ಯಕ್ಷ ಕೆ.ಪಿ.ಮಂಜುನಾಥ್, ಜಿ.ಪಂ.ಸದಸ್ಯೆ ಮಂಜುಳಾ , ಕನಕ ಸಂಘದ ಅಧ್ಯಕ್ಷ ಅಶೋಕ್, ಸಿದ್ದಗಂಗಮ್ಮ, ಶಿಕ್ಷಕ ಕೃಷ್ಣಮೂರ್ತಿ,ರಮೇಶ್,ಬೋರಲಿಂಗಯ್ಯ, ಬಾಳೆಕಾಯಿ ಲಕ್ಷ್ಮಿಕಾಂತ್,ರಂಗಸ್ವಾಮಿ ಸೇರಿದಂತೆ ಯುವ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕನಕ ಯುವ ವೇದಿಕೆ ಪದಾಧಿಕಾರಿಗಳಿಂದ ಬೈಕ್ ರ್ಯಾಲಿ ನಡೆದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಕನಕದಾಸರಿಗೆ ಜೈಕಾರ ಹಾಕುವ ಮೂಲಕ ಜಯಂತಿ ಆಚರಣೆ ನಡೆಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ